9 ಕೈಗಾರಿಕಾ ಕ್ಲಸ್ಟರ್‌ಗಳ ಸ್ಥಾಪನೆಗೆ ಅಸ್ತು

7
‘ಚೀನಾದೊಂದಿಗೆ ಸಕಾರಾತ್ಮಕ ಸ್ಪರ್ಧೆ’ ಯೋಜನೆ

9 ಕೈಗಾರಿಕಾ ಕ್ಲಸ್ಟರ್‌ಗಳ ಸ್ಥಾಪನೆಗೆ ಅಸ್ತು

Published:
Updated:

ಬೆಂಗಳೂರು: ರಾಜ್ಯದ ಮಾರುಕಟ್ಟೆಗಳನ್ನು ಆಕ್ರಮಿಸಿಕೊಂಡಿರುವ ಚೀನಾದ ಉತ್ಪನ್ನಗಳಿಗೆ ಜಿಲ್ಲಾಮಟ್ಟದಿಂದಲೇ ಸೆಡ್ಡು ಹೊಡೆಯುವ ಗುರಿ ಇಟ್ಟುಕೊಂಡು 9 ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸಲು ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಒಪ್ಪಿಗೆ ನೀಡಲಾಯಿತು.

ಪೀಠೋಪಕರಣ, ಎಲ್‌ಐಡಿ ಬಲ್ಬ್‌, ಟೈಲ್ಸ್, ಸ್ಯಾನಿಟರಿ ಉಪಕರಣಗಳು, ‌ಮಕ್ಕಳ ಆಟಿಕೆಗಳು, ಎಲೆಕ್ಟ್ರಾನಿಕ್‌ ಉಪಕರಣಗಳು, ಮೊಬೈಲ್‌ಗಳು... ಹೀಗೆ ಎಲ್ಲ ಉತ್ಪನ್ನಗಳ ಮೇಲೂ ಚೀನಾ ಹಿಡಿತ ಸಾಧಿಸಿರುವ ಕಾರಣ ದೇಶದ ಉದ್ದಿಮೆಗಳು ಮುಚ್ಚುವ ಸ್ಥಿತಿ ತಲುಪಿವೆ. ಹೀಗಾಗಿ, ‘ತಯಾರಿಸು ಇಲ್ಲವೇ ನಾಶವಾಗು’ ಎಂಬ ಘೋಷವಾಕ್ಯದಡಿ ‘ಚೀನಾದೊಂದಿಗೆ ಸಕಾರಾತ್ಮಕ ಸ್ಪರ್ಧೆ’ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಕಲಬುರ್ಗಿ, ಚಿತ್ರದುರ್ಗ, ಹಾಸನ, ಕೊಪ್ಪಳ, ಮೈಸೂರು, ಬಳ್ಳಾರಿ, ಚಿಕ್ಕಬಳ್ಳಾಪುರ, ತುಮಕೂರು, ಬೀದರ್‌ನಲ್ಲಿ ಈ ಕ್ಲಸ್ಟರ್‌ಗಳು ಸ್ಥಾಪನೆಯಾಗಲಿವೆ.

ರಾಜ್ಯದ ಯಶಸ್ವಿ ಉದ್ದಿಮೆದಾರರ ನೇತೃತ್ವದಲ್ಲಿ ಯೋಜನಾ ಗುರಿ ಘಟಕಗಳನ್ನು (ಪಿಎಂಯು) ಸ್ಥಾಪಿಸಲಾಗುವುದು. ಆ ಮೂಲಕ ಹಳ್ಳಿಗಳಲ್ಲೇ ಬಿಡಿ ಭಾಗಗಳನ್ನು ಉತ್ಪಾದಿಸಿ, ಅವುಗಳನ್ನು ತಾಲ್ಲೂಕು ಮಟ್ಟದಲ್ಲಿ ಜೋಡಣೆ ಮಾಡಲಾಗುವುದು. ಈ ರೀತಿ ತಯಾರಾದ ಉತ್ಪನ್ನಗಳ ಮಾರಾಟಕ್ಕೆ ಜಿಲ್ಲೆಗಳಲ್ಲಿ ಮಾಲ್‌ಗಳನ್ನು ತೆರೆಯಲಾಗುತ್ತದೆ.

ಬೆಳೆ ಸಮೀಕ್ಷೆಗೆ ಜನರ ನೆರವು: ‘ರಾಜ್ಯದಲ್ಲಿ 2.20 ಕೋಟಿ ಹಿಡುವಳಿಗಳಿವೆ. ಕಳೆದ ವರ್ಷ ಮೊಬೈಲ್‌ ಆ್ಯಪ್‌ ನೆರವಿನಿಂದ ಬೆಳೆ ಸಮೀಕ್ಷೆ ನಡೆಸಲಾಗಿತ್ತು. 1.60 ಕೋಟಿ ಹಿಡುವಳಿಗಳ ಸಮೀಕ್ಷೆ ನಡೆಸಲಾಗಿತ್ತು. ಈ ಕೆಲಸಕ್ಕೆ ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿತ್ತು. ಈ ಸಲ ಗ್ರಾಮದ ಪ್ರಮುಖರು ಹಾಗೂ ಯುವಕರ ಸಹಕಾರ ಪಡೆಯಲಾಗುತ್ತದೆ. ಈ ಯೋಜನೆಗೆ ₹25 ಕೋಟಿ ಮೀಸಲಿಡಲಾಗಿದೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

‘ಮೊಬೈಲ್‌ ಆ್ಯಪ್‌ ಸಮೀಕ್ಷೆಯಿಂದ ನಿಖರ ಮಾಹಿತಿ ಸಿಗಲಿದೆ. ಇಲ್ಲಿನ ಮಾಹಿತಿಯನ್ನು ಆರ್‌ಟಿಸಿಗೂ ಬಳಸಬಹುದು. ಫಸಲ್‌ ಬಿಮಾ ಯೋಜನೆ ಹಾಗೂ ಬೆಂಬಲ ಬೆಲೆ ಮಧ್ಯಪ್ರವೇಶ ಯೋಜನೆಯ ಅನುಷ್ಠಾನದ ವೇಳೆಯೂ ಬಳಸಿಕೊಳ್ಳಬಹುದು’ ಎಂದು ಅವರು ಹೇಳಿದರು.

ಸಂಪುಟದ ಇತರ ನಿರ್ಧಾರಗಳು:

*ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ರೂಸಾ ಯೋಜನೆಯಡಿ ₹24 ಕೋಟಿ ವೆಚ್ಚದಲ್ಲಿ ಸರ್ಕಾರಿ ಮಾದರಿ ಪದವಿ ಕಾಲೇಜುಗಳ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ.

*ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ₹15 ಕೋಟಿ ವೆಚ್ಚದಲ್ಲಿ ಪೆಟ್‌ ಸಿ.ಟಿ. ಸ್ಕ್ಯಾನರ್‌ ಸೌಲಭ್ಯ ಸ್ಥಾಪನೆ. ಸಂಸ್ಥೆಯಲ್ಲಿ ₹12 ಕೋಟಿ ವೆಚ್ಚದಲ್ಲಿ ಬೋನ್‌ ಮ್ಯಾರೋ ಟ್ರಾನ್ಸ್‌ಫ್ಲಾಂಟ್‌ ಚಿಕಿತ್ಸಾ ಘಟಕ ಸ್ಥಾಪನೆ.

*ಇಂಡಿಯಾ ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್‌ ಸಂಸ್ಥೆಯ ಸಹಯೋಗದಲ್ಲಿ ಬೆಂಗಳೂರಿನಲ್ಲಿ ₹56.31 ಕೋಟಿ ವೆಚ್ಚದಲ್ಲಿ ಸೆಮಿಕಂಡಕ್ಟರ್ ಫ್ಯಾಬ್‌ಲೆಸ್‌ ಆಕ್ಸಲೇಷರ್‌ ಲ್ಯಾಬ್‌ ಸ್ಥಾಪನೆ. ಇದು ಐದು ವರ್ಷಗಳಲ್ಲಿ ಅನುಷ್ಠಾನವಾಗಲಿದೆ. ಇದಕ್ಕೆ ರಾಜ್ಯ ಸರ್ಕಾರ 21.53 ಕೋಟಿ ಹಾಗೂ ಸಂಸ್ಥೆ ₹29.40 ಕೋಟಿ ಹೂಡಿಕೆ ಮಾಡಲಿವೆ. ಐಟಿ ಕ್ಷೇತ್ರದ ಜತೆಗೆ ಹಾರ್ಡ್‌ವೇರ್‌ ಕೈಗಾರಿಕಾ ಕ್ಷೇತ್ರವನ್ನೂ ಬೆಳೆಸಲು ಕ್ರಮ.

*ಉತ್ತರ ಕನ್ನಡ ಜಿಲ್ಲೆಯ ಖಾನಾಪುರ–ತಾಳಗುಪ್ಪ ರಾಜ್ಯ ಹೆದ್ದಾರಿ 93ರಲ್ಲಿ ಬೇಡ್ತಿ ನದಿಗೆ ಸೇತುವೆ ನಿರ್ಮಾಣಕ್ಕೆ ₹23.67 ಕೋಟಿಯ ಪರಿಷ್ಕೃತ ಅನುಮೋದನೆ.

*ಕರ್ನಾಟಕ ವಸತಿ ಶಿಕ್ಷಣ ಸಂಘದ ವತಿಯಿಂದ ನಡೆಸಲಾಗುತ್ತಿರುವ ವಸತಿ ಶಾಲೆ/ಕಾಲೇಜುಗಳ ವಿದ್ಯಾರ್ಥಿಗಳಿಗೆ ₹17.83 ಕೋಟಿ ವೆಚ್ಚದಲ್ಲಿ ನಿರ್ಮಲ ಹಾಗೂ ಸ್ಫೂರ್ತಿ ಕಿಟ್‌ಗಳನ್ನು ಕರ್ನಾಟಕ ಸೋಪ್ಸ್‌ ಆ್ಯಂಡ್‌ ಡಿಟರ್ಜೆಂಟ್‌ ಸಂಸ್ಥೆಯಿಂದ ಖರೀದಿಸಲು ಒಪ್ಪಿಗೆ.

*ಕೌಶಲ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಚಳ್ಳಕೆರೆ, ಮಡಿಕೇರಿ, ಹಾವೇರಿಗಳಲ್ಲಿ ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರಗಳ ಕಟ್ಟಡ ನಿರ್ಮಾಣ, ಗೌರಿಬಿದನೂರು ಹಾಗೂ ಹುಮನಾಬಾದ್‌ನಲ್ಲಿ ಹಾಲಿ ಇರುವ ಕೇಂದ್ರಗಳ ಮೇಲ್ದರ್ಜೆಗೆ ಏರಿಸಲು ₹49.35 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಅನುಮೋದನೆ.

*ಬೆಂಗಳೂರು ಉಪನಗರ ರೈಲು ಯೋಜನೆ (ಹಂತ–1)ರ ಅನುಷ್ಠಾನಕ್ಕೆ ಬಾಣಸವಾಡಿಯಲ್ಲಿ ಮೆಮು ನಿರ್ವಹಣಾ ಶೆಡ್‌ ನಿರ್ಮಾಣಕ್ಕೆ ₹29.05 ಕೋಟಿಯ ಪರಿಷ್ಕೃತ ಅಂದಾಜು ಮೊತ್ತಕ್ಕೆ ಒಪ್ಪಿಗೆ.

*ಹಾವೇರಿ, ಚಿತ್ರದುರ್ಗ, ಬೀದರ್, ಕಲಬುರ್ಗಿ, ಕೋಲಾರ, ಚಾಮರಾಜನಗರ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರದಲ್ಲಿ ವಸತಿಸಹಿತ ಪದವಿ ಕಾಲೇಜುಗಳ ಆರಂಭಕ್ಕೆ ಹಿಂದಿನ ಬಜೆಟ್‌ನಲ್ಲಿ ₹250 ಕೋಟಿ ಇಡಲಾಗಿತ್ತು. ಈ ಮೊತ್ತವನ್ನು ₹267.19 ಕೋಟಿಗೆ ಪರಿಷ್ಕರಿಸಿ ಅನುಮೋದನೆ.

*ಹಾಸನ ಮತ್ತು ಕಾರವಾರದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತಲಾ ₹18.25 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್‌ ಕೇರ್‌ ಘಟಕ ಸ್ಥಾಪನೆ.

*ಚಾಮರಾಜನಗರದ ಕೊಳ್ಳೆಗಾಲ ಹಾಗೂ ಯಳಂದೂರು ತಾಲ್ಲೂಕಿನ 64 ಹಳ್ಳಿಗಳಿಗೆ ₹113.60 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ. ರಾಯಚೂರಿನ ಲಿಂಗಸಗೂರು ತಾಲ್ಲೂಕಿನ 10 ಗ್ರಾಮಗಳಿಗೆ ₹25.52 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ.

ಚನ್ನಪಟ್ಟಣ, ರಾಮನಗರ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ₹456 ಕೋಟಿ ವೆಚ್ಚದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ. ಇದನ್ನು ನಗರಾಭಿವೃದ್ಧಿ ಇಲಾಖೆಯಿಂದ ಅನುಷ್ಠಾನ ಮಾಡಲಾಗುತ್ತದೆ. ನೆಟ್ಕಲ್‌ ಜಲಾಶಯದಿಂದ ನೀರು ಹರಿಸಲಾಗುತ್ತದೆ.

*ಹೊಳೆನರಸೀಪುರ ಕ್ಷೇತ್ರದ ಹರದನಹಳ್ಳಿಯಲ್ಲಿ ವಸತಿಯುತ ಸರ್ಕಾರಿ ಮಹಿಳಾ ಕಾಲೇಜು ಸ್ಥಾಪನೆಗೆ ₹15 ಕೋಟಿ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !