ಸಮ್ಮಿಶ್ರ ಸರ್ಕಾರದಲ್ಲಿ ಅನಿವಾರ್ಯ ಮಂತ್ರಿ ನಾನು

7

ಸಮ್ಮಿಶ್ರ ಸರ್ಕಾರದಲ್ಲಿ ಅನಿವಾರ್ಯ ಮಂತ್ರಿ ನಾನು

Published:
Updated:

ಧಾರವಾಡ: ‘ಸಮ್ಮಿಶ್ರ ಸರ್ಕಾರದಲ್ಲಿ ಅನಿವಾರ್ಯವಾಗಿ ನಾನು ಮಂತ್ರಿಯಾಗಿದ್ದೇನೆ. ನಾನು ಕಾಂಗ್ರೆಸ್‌ ಅಲ್ಲ, ಜೆಡಿಎಸ್‌ ಅಲ್ಲ ಹಾಗೆಯೇ ಬಿಜೆಪಿಯೂ ಅಲ್ಲ. ಹೀಗಾಗಿ ಈ ಮೂರು ಪಕ್ಷಗಳ ನಾಯಕರು ನನಗೆ ಸಲಹೆ ಮಾರ್ಗದರ್ಶನ ನೀಡಿ’ ಎಂದು ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಯೋಜಿಸಿದ್ದ ಶಿಕ್ಷಣ ಕಾರ್ಯಾಗಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಸೋಮವಾರ ಪಾಲ್ಗೊಂಡು ಅವರು ಕೆಲವೊಂದು ಸ್ವಾರಸ್ಯಕರ ಸಂಗತಿ ಹಂಚಿಕೊಂಡರು.

‘ಸಚಿವನಾದ ನಂತರ ಇದು ನನ್ನ ಮೊದಲ ಬಹಿರಂಗ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಭಾರತದಲ್ಲಿ ಮೊದಲ ಶಾಲೆ ಆರಂಭಿಸಿ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದು ನಿಜಕ್ಕೂ ಹೆಮ್ಮೆ ಎನಿಸಿತು. ಏಕೆಂದರೆ ಕೊಳ್ಳೆಗಾಲದ ಶಂಕನಪುರದಲ್ಲಿರುವ ನನ್ನ ಕುಟುಂಬದ ಮೊದಲ ಅಕ್ಷರಸ್ಥ ನಾನು. ಇದು ಸಾಧ್ಯವಾಗಿದ್ದು ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರಂಥ ದಾರ್ಶನಿಕರ ಪ್ರಯತ್ನದಿಂದಾಗಿ ನನ್ನಂತೆ ಹಲವು ಕುಟುಂಬಗಳು ಅಕ್ಷರ ಜ್ಞಾನ ಪಡೆದಿವೆ’ ಎಂದರು.

‘ಹೀಗಾಗಿ ನನ್ನ ಊರಿನ ಮೊದಲ ಪದವೀಧರ, ಮೊದಲ ಕೆಎಎಸ್ ಅಧಿಕಾರಿ, ಮೊದಲ ಶಾಸಕ ಹಾಗೂ ಮೊದಲ ಸಚಿವ ನನೇ ಆಗಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಇವೆಲ್ಲವೂ ದೇಶದ ಪ್ರಬಲ ಸಂವಿಧಾನದ ಕೊಡುಗೆಯಿಂದ ಸಾಧ್ಯವಾಗಿದೆ’ ಎಂದರು.

‘ಮಕ್ಕಳು ಕಲ್ಲುಗಳಿದ್ದಂತೆ, ಅವರನ್ನು ಸುಂದರ ಶಿಲ್ಪಗಳನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರದ್ದು. ಬಾಲ್ಯದಲ್ಲಿರುವಾಗ ನನ್ನ ನಾಲಿಗೆ ಸರಿಯಾಗಿ ಹೊರಳುತ್ತಿರಲಿಲ್ಲ ಎಂದು ದನ ಅಥವಾ ಕುರಿಕಾಯಲು ಕಳುಹಿಸುವಂತೆ ಬಾಲಕನ ಪೋಷಕರಿಗೆ ಹೇಳುತ್ತಾರೆ ಎಂದರೆ ಆತ ಎಂಥ ಅಮಾನವೀಯ ಶಿಕ್ಷಕನಿರಬೇಕು ಎಂದೆನಿಸುತ್ತಿದೆ. ಏಕೆಂದರೆ ಆ ಬ್ಲಡಿ ಚೈಲ್ಡ್‌ ನಾನೇ. ಅಂದು ಕುರಿ ಕಾಯಲು ಹೋಗಿದ್ದರೆ ಇಂದು ಹೀಗೆ ಇರುತ್ತಿರಲಿಲ್ಲ’ ಎಂದು ಬಾಲ್ಯದ ದಿನಗಳನ್ನು ಸಚಿವ ಮಹೇಶ್ ನೆನಪಿಸಿಕೊಂಡರು.

‘ಸಮಸ್ಯೆ ಮಕ್ಕಳಲಲ್ಲಿ, ಶಿಕ್ಷಕರಲ್ಲಿದೆ ಎಂಬುದನ್ನು ನಾವು ಅರಿಯಬೇಕು. ಶಿಕ್ಷಕರ ಸಮಸ್ಯೆ ಪರಿಹರಿಸಲು ನಾನಿದ್ದೇನೆ. ಆದರೆ ಮಕ್ಕಳ ಸಮಸ್ಯೆಗಳನ್ನು ಪರಿಹರಿಸಿ ಅವರಿಗೆ ಗುಣಾತ್ಮಕ ಹಾಗೂ ಕ್ರಿಯಾತ್ಮಕ ಶಿಕ್ಷಣದ ಜತೆಗೆ ಕೌಶಲ್ಯಭರಿತ ಜ್ಞಾನ ನೀಡುವ ಭರವಸೆಯನ್ನು ಶಿಕ್ಷಕರು ನನಗೆ ನೀಡಬೇಕು. ಇದಕ್ಕೆ ನೀವೆಲ್ಲರೂ ಒಪ್ಪಿಕೊಳ್ಳುತ್ತೀರಾ...?’ ಎಂದು ಮೂರು ಬಾರಿ ಕೇಳಿದರು. ಜತೆಗೆ ಶಿಕ್ಷಕರಿಗೆ ಒಂದಷ್ಟು ಕಿವಿ ಮಾತು ಮೂಲಕ ಸಚಿವರು ಪಾಠ ಮಾಡಿದರು.

ಬರಹ ಇಷ್ಟವಾಯಿತೆ?

 • 33

  Happy
 • 2

  Amused
 • 3

  Sad
 • 0

  Frustrated
 • 3

  Angry

Comments:

0 comments

Write the first review for this !