ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲಾಗದ ಒಂದೇ ಒಂದು ಪ್ರಕರಣ!

ನಿಯಮ ಉಲ್ಲಂಘಿಸಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ; ಮುಟ್ಟುಗೋಲು ಹೊಣೆ ಮರೆತ ಅಧಿಕಾರಿಗಳು, ಪರಸ್ಪರ ಬೆರಳು ತೋರುವ ಧೋರಣೆ
Last Updated 6 ಜೂನ್ 2018, 11:34 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಪರಿಸರಕ್ಕೆ ಹಾನಿ ಉಂಟು ಮಾಡುವ ಹಲವು ಬಗೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧಿಸಿ ಅರಣ್ಯ, ಪರಿಸರ ಮತ್ತು ಜೀವ ವಿಜ್ಞಾನ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿ ಎರಡು ವರ್ಷಗಳು ಕಳೆದಿವೆ. ಆದರೆ ಈವರೆಗೆ ಜಿಲ್ಲೆಯಲ್ಲಿ ಈ ಕಾನೂನು ಉಲ್ಲಂಘಿಸಿದವರ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ!

ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡುವವರ ವಿರುದ್ಧದ ಕಾನೂನಿನಡಿಯಲ್ಲಿ ಕ್ರಮ ಜರುಗಿಸಲು ಜಿಲ್ಲಾಧಿಕಾರಿಯಿಂದ ಹಿಡಿದು ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳ ವರೆಗೆ ಹತ್ತಾರು ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ವಿಶೇಷ ಅಧಿಕಾರವಿದೆ. ಆದರೆ ಅಧಿಕಾರಿಗಳು ತಮಗೆ ಏನೂ ಗೊತ್ತಿಲ್ಲದವರಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ ಕಾನೂನಿಗೆ ಕಿಮ್ಮತ್ತು ಇಲ್ಲದಂತಾಗಿ ಆಗಾಗ ನಗರ, ಪಟ್ಟಣಗಳು ಅಂದಗೆಡುತ್ತಲೇ ಇವೆ ಎಂಬುದು ಸ್ಥಳೀಯರ ಅಸಮಾಧಾನ.

ವರ್ಷದಲ್ಲಿ ವಿವಿಧ ದಿನಾಚರಣೆಗಳ ಸಂದರ್ಭದಲ್ಲಿ ಪ್ಲಾಸ್ಟಿಕ್ ನಿಸರ್ಗದ ಮೇಲೆ ಉಂಟು ಮಾಡುವ ಹಾನಿ ಕುರಿತು ಸೊಗಸಾಗಿ ಭಾಷಣ ಮಾಡುವ ಅಧಿಕಾರಿಗಳೆಲ್ಲರೂ ವರ್ಷವಿಡೀ ಕಣ್ಣೆದುರೆ ಕಾಣುವ ಅನಿಯಮಿತ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಕಾಳಜಿ ತೋರಿದ ಉದಾಹರಣೆಗಳಿಲ್ಲ. ನಗರಸಭೆ, ಪುರಸಭೆಯವರು ಆಗಾಗ ಅಂಗಡಿಗಳ ಮೇಲೆ ದಾಳಿ ಮಾಡುವ ‘ಶಾಸ್ತ್ರ’ ನಡೆಸುವುದು ಬಿಟ್ಟರೆ ಬದ್ಧತೆಯಿಂದ ಯಾವೊಬ್ಬ ಅಧಿಕಾರಿ ಕೆಲಸ ಮಾಡಿದ ಉದಾಹರಣೆಗಳಿಲ್ಲ ಎಂಬುದು ನಗರಸಭೆ ಅಧಿಕಾರಿಯೊಬ್ಬರ ಹೇಳಿಕೆ.

ಪರಿಸರ ಮಾಲಿನ್ಯ ಉಂಟು ಮಾಡಬಲ್ಲ ಇಂತಹ ಕೆಲಸವನ್ನು ತಡೆಯಬೇಕಾದದ್ದು ಮಾಲಿನ್ಯ ನಿಯಂತ್ರಣ ಮಂಡಳಿಯ ಕೆಲಸವಲ್ಲವೆ ಎನ್ನುವುದು ನಗರದ ಪ್ರಜ್ಞಾವಂತ ನಾಗರಿಕರ ಪ್ರಶ್ನೆ. ಈ ಪ್ರಶ್ನೆಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕೇಂದ್ರದ ಪರಿಸರ ಅಧಿಕಾರಿ ಮಧುಸೂದನ್‌ ಅವರ ಮುಂದಿಟ್ಟರೆ, ‘ನಾವು ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸುವ ಘಟಕಗಳನ್ನು ಬಂದ್‌ ಮಾಡಬಹುದೆ ವಿನಾ ಅಂತಹ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ನಮಗಿಲ್ಲ’ ಎನ್ನುತ್ತಾರೆ.

‘ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ಕಡಿವಾಣ ಹಾಕುವ ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವ ಕೆಲಸ ನಮ್ಮೊಬ್ಬರದೇ ಅಲ್ಲ. ಜಿಲ್ಲಾಧಿಕಾರಿ, ಉಪ ಆಯುಕ್ತ, ತಹಶೀಲ್ದಾರ್‌, ಆರ್‌ಟಿಒ, ನಗರಸಭೆ ಸೇರಿದಂತೆ ಅನೇಕ ಇಲಾಖೆಗಳ ಅಧಿಕಾರಿಗಳಿಗೆ ನಿಷೇಧಿತ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವಿದೆ. ಅವರೆಲ್ಲರೂ ಕೈಜೋಡಿಸಿದಾಗ ಇದನ್ನು ಯಶಸ್ವಿಯಾಗಿ ಜಾರಿಗೆ ತರಬಹುದು. ಆದರೆ ಯಾವ ಅಧಿಕಾರಿ ಕೂಡ ಈ ಬಗ್ಗೆ ಆಸಕ್ತಿ, ಉತ್ಸಾಹ ತೋರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ತಯಾರಿಸುವ ಘಟಕಗಳು ಇಲ್ಲ. ಆದರೆ ತಮಿಳುನಾಡು, ಬೆಂಗಳೂರಿನಿಂದ ವರ್ತಕರು ಕದ್ದುಮುಚ್ಚಿ ತಂದು ಮಾರಾಟ ಮಾಡುತ್ತಾರೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕಾದರೆ ಸ್ಥಳೀಯ ಸಂಸ್ಥೆಗಳ ಸಹಕಾರ ತುಂಬಾ ಅಗತ್ಯ’ ಎಂದು ಹೇಳಿದರು.

ಈ ಕುರಿತು ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಉಮಾಕಾಂತ್ ಅವರನ್ನು ವಿಚಾರಿಸಿದರೆ, ‘ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುವವರ ವಿರುದ್ಧ ಯಾರು ಪ್ರಕರಣ ದಾಖಲಿಸಬೇಕು ಎನ್ನುವ ವಿಚಾರದಲ್ಲಿ ನಮಗೆ ಈವರೆಗೆ ಸ್ಪಷ್ಟ ನಿರ್ದೇಶನವಿರಲಿಲ್ಲ. ಹೀಗಾಗಿ ಈವರೆಗೆ ನಾವು ಬರೀ ದಂಡ ವಸೂಲಿ ಮಾಡುತ್ತಿದ್ದೆವು’ ಎಂದು ತಿಳಿಸಿದರು.

‘ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಪ್ರಕರಣ ದಾಖಲಿಸುವ ಅಧಿಕಾರವಿದೆ ಎಂದು ತಿಳಿದು ಬಂತು. ಇನ್ನು ಮುಂದೆ ನಾವು ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಮಾಡುವವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮಕ್ಕೆ ಶಿಫಾರಸು ಮಾಡುತ್ತೇವೆ’ ಎಂದರು.

‘ಮಾರುಕಟ್ಟೆಯ ತುಂಬಾ ಎಗ್ಗಿಲ್ಲದೆ ಪ್ಲಾಸ್ಟಿಕ್ ಬಳಕೆ ಮುಂದುವರಿದಿದೆ. ಇನ್ನು ಜಯಂತಿ, ಉತ್ಸವ, ಹಬ್ಬಗಳ ಸಂದರ್ಭದಲ್ಲಿಯಂತೂ ರಾಜಕಾರಣಿಗಳಿಂದ ಹಿಡಿದು ಮರಿ ಪುಢಾರಿಗಳ ತನಕ ಪೈಪೋಟಿಯಲ್ಲಿ ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌ ಕಟ್ಟುತ್ತಾರೆ. ಅಧಿಕಾರಿಗಳು ಇದನ್ನೆಲ್ಲ ಕಂಡರೂ ಕಾಣದಂತೆ ವರ್ತಿಸುತ್ತ ಪರಿಸರ ಮಾಲಿನ್ಯಕ್ಕೆ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ’ ಎಂದು ಪ್ರಶಾಂತ್ ನಗರ ನಿವಾಸಿ ಅಶ್ವತ್ಥ್ ಅಸಮಾಧಾನ ವ್ಯಕ್ತಪಡಿಸಿದರು.

ಏನೆಲ್ಲ ನಿಷೇಧ, ಏನು ಶಿಕ್ಷೆ?

ಅಲ್ಪಾವಧಿ ಹಾಗೂ ದೀರ್ಘಾವಧಿಯಲ್ಲಿ ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್‌ನಿಂದ ತಯಾರಿಸಿದ ಕೈಚೀಲ, ತೋರಣ, ಬಂಟಿಂಗ್ಸ್, ಬ್ಯಾನರ್, ಫ್ಲೆಕ್ಸ್, ತಟ್ಟೆ, ಬಾವುಟ, ಲೋಟ, ಊಟದ ಟೇಬಲ್‌ಗಳ ಮೇಲೆ ಹಾಸಲು ಬಳಸುವ ಹಾಳೆ, ಥರ್ಮಾಕೋಲ್‌ನಿಂದ ತಯಾರಿಸಿದ ತಟ್ಟೆಗಳನ್ನು ಸದ್ಯ ಕಾನೂನಿನ ಪ್ರಕಾರ ಉತ್ಪಾದನೆ, ಸರಬರಾಜು, ಸಂಗ್ರಹಣೆ, ಮಾರಾಟ ಹಾಗೂ ವಿತರಣೆ ಮಾಡುವಂತಿಲ್ಲ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ನಿಷೇಧ ಕಾನೂನು ಉಲ್ಲಂಘಿಸಿದವರಿಗೆ 5 ವರ್ಷ ಜೈಲು ಶಿಕ್ಷೆ ಅಥವಾ ₹ 1 ಲಕ್ಷದವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಇದೆ.

ಯಾರಿಗೆಲ್ಲ ಅಧಿಕಾರವಿದೆ?

ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಕಂದಾಯ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಆರ್‌ಟಿಒ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಂತಹ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳು, ಪರಿಸರ ಅಧಿಕಾರಿಗಳು, ತಹಶೀಲ್ದಾರ್‌, ವಾಣಿಜ್ಯ ತೆರಿಗೆ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ, ತೂಕ ಮತ್ತು ಮಾಪನ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳ ಅಧಿಕಾರಿಗಳಿಗೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ತರುವ ಅಧಿಕಾರವಿದೆ.

ಕರ್ತವ್ಯ ಮರೆತ ಅಧಿಕಾರಿಗಳು

ಪರಿಸರಕ್ಕೆ ಹಾನಿ ಉಂಟು ಮಾಡುವ ಹಲವು ಬಗೆಯ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧಕ್ಕೆ ಸಂಬಂಧಿಸಿದಂತೆ 2015ರ ಅಕ್ಟೋಬರ್ 28ರಂದು ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿತ್ತು. ಬಳಿಕ ಸಾರ್ವಜನಿಕರ ಸಲಹೆ–ಆಕ್ಷೇಪಗಳನ್ನು ಪರಿಶೀಲಿಸಿದ ಕಳೆದ ಮಾರ್ಚ್11ರಂದು ಅಂತಿಮ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು. ಅಂದಿನಿಂದ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಅಧಿಕೃತವಾಗಿ ಜಾರಿಗೆ ಬಂದಿದೆ. ಅದು ಮಾತ್ರ ಜಿಲ್ಲೆಯಲ್ಲಿ ಈವರೆಗೆ ಪಾಲನೆಯಾಗಿಲ್ಲ.

ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 5ರ ಅನ್ವಯ ಕಾನೂನು ಉಲ್ಲಂಘಿಸಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡುವವರ ವಿರುದ್ಧ 1986ರ ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್19ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲು ಅನೇಕ ಇಲಾಖೆಗಳ ಅಧಿಕಾರಿಗಳಿಗೆ ಅಧಿಕಾರವಿದ್ದರೂ ಅದು ತನಗೆ ಸಂಬಂಧಿಸಿದ ಕೆಲಸವಲ್ಲ ಎನ್ನುವಂತೆ ಪ್ರತಿಯೊಬ್ಬ ಅಧಿಕಾರಿ ವರ್ತಿಸುತ್ತಿದ್ದಾರೆ.

ಚಿಕ್ಕಂದಿನಲ್ಲೇ ಅರಿವು ಮುಖ್ಯ

ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮದ ಬಗ್ಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ. ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾದರೆ ಸಾಲದು. ಆ ಪ್ರಜ್ಞೆ ನಮ್ಮಲ್ಲಿ ಸದಾ ಜಾಗೃತವಾಗಿರಬೇಕು. ಅಪ್ಪಿತಪ್ಪಿಯೂ ಹಾನಿಕಾರಕ ಉತ್ಪನ್ನಗಳನ್ನು, ವಸ್ತುಗಳನ್ನು ಬಳಕೆ ಮಾಡುವುದು ನಿಲ್ಲಿಸಬೇಕು. ಅಧಿಕಾರಿಗಳು ಸಹ ತಮ್ಮ ಕರ್ತವ್ಯ ಮರೆಯಬಾರದು
- ಆಶಾ, ಚಿಕ್ಕಬಳ್ಳಾಪುರ ನಿವಾಸಿ

ಕಳವಳಕಾರಿ ಸಂಗತಿ

ಪ್ಲಾಸ್ಟಿಕ್‌ ಅಪಾಯ ಎಂದು ಗೊತ್ತಿದ್ದರೂ ಜನರು ಯಥೆಚ್ಛವಾಗಿ ಅದನ್ನೇ ಬಳಕೆ ಮಾಡುತ್ತಿರುವುದು ಕಳವಳಕಾರಿ ಸಂಗತಿ. ನಿಸರ್ಗ, ಜೀವ ಸಂಕುಲದ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಅಗತ್ಯವಿದೆ
- ಗುಂಪುಮರದ ಆನಂದ್‌, ಪರಿಸರ ಪ್ರೇಮಿ

ಪರಿಸರ ಸ್ನೇಹಿ ವಸ್ತುಗಳ ಬಳಸಿ

ಪರಿಸರ ಕಲ್ಮಶ ರಹಿತವಾಗಿದ್ದ ಮಾತ್ರ ನಾವು ನೆಮ್ಮದಿಯಿಂದ ಬದುಕಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ವೈಯಕ್ತಿಕ ನೆಲೆಯಲ್ಲಿ ಪ್ಲಾಸ್ಟಿಕ್ ಬಳಕೆ ಕನಿಷ್ಠ ಮಟ್ಟಕ್ಕೆ ಕಡಿಮೆ ಮಾಡಿ ಪರಿಸರ ಸ್ನೇಹಿ ಗೃಹೋಪಯೋಗಿ ವಸ್ತುಗಳನ್ನು ಬಳಕೆ ಮಾಡುವುದು ರೂಢಿಸಿಕೊಳ್ಳಬೇಕು - ವಿಜಯಾ, ಪರಿಸರ ಅಧಿಕಾರಿ

ಮನಸ್ಥಿತಿ ಬದಲಾಗಬೇಕು

ಖಾಲಿ ಕೈಯಲ್ಲಿ ಮಾರುಕಟ್ಟೆಗೆ ಹೋಗಿ ಪ್ಲಾಸ್ಟಿಕ್ ಬ್ಯಾಗ್ ಹಿಡಿದು ಬರುವುದು ಶೋಕಿಯಾಗಿ ಬಿಟ್ಟಿದೆ. ಈ ಮನಸ್ಥಿತಿ ಮೊದಲು ಬದಲಾಗಬೇಕು. ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತುಗಳ ಬಳಕೆಗೆ ಸಂಬಂಧಪಟ್ಟ ಅಧಿಕಾರಿಗಳು ಉತ್ತೇಜನ ನೀಡಬೇಕು. ಪ್ಲಾಸ್ಟಿಕ್ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಜನರು ಸಹ ಬದಲಾಗುತ್ತಾರೆ
- ಸುಭಾನ್, ಪರಿಸರ ಪ್ರೇಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT