ಎತ್ತಿನಹೊಳೆಯಲ್ಲಿ ಅಕ್ರಮದ ಘಾಟು

7
ಅನುಮಾನ ಮೂಡಿಸಿದ ಜಂಟಿ ಸಹಭಾಗಿತ್ವದ ಮೂಲಕ ಪ್ಯಾಕೇಜ್‌ ಗುತ್ತಿಗೆ

ಎತ್ತಿನಹೊಳೆಯಲ್ಲಿ ಅಕ್ರಮದ ಘಾಟು

Published:
Updated:

ಬೆಳಗಾವಿ: ರಾಜ್ಯದ ಬಯಲುಸೀಮೆ ಜಿಲ್ಲೆಗಳಿಗೆ ನೀರು ಪೂರೈಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ₹17 ಸಾವಿರ ಕೋಟಿಯ ಎತ್ತಿನಹೊಳೆ ಯೋಜನೆಯಲ್ಲಿ ಅಕ್ರಮದ ಘಾಟು ಕೇಳಿ ಬಂದಿದೆ.

ವಿಶ್ವೇಶ್ವರಯ್ಯ ಜಲ ನಿಗಮವು ಈ ಯೋಜನೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದು, ಅರಸೀಕೆರೆ ವಿಭಾಗದಲ್ಲಿ 10 ಪ್ಯಾಕೇಜ್‌ಗಳ‌ಲ್ಲಿ ಕಾಮಗಾರಿ ನಡೆಯುತ್ತಿದೆ. ಗುರುತ್ವಾಕರ್ಷಣೆ ಮೂಲಕ ನೀರು ಹರಿಸುವ 100 ಕಿ.ಮೀ. ಉದ್ದದ ಕಾಮಗಾರಿ ಮೊತ್ತ ₹2,300 ಕೋಟಿ. ಶಂಕರನಾರಾಯಣ ಕನ್‌ಸ್ಟ್ರಕ್ಷನ್‌, ಜಿ. ಶಂಕರ್‌, ಅಮೃತಾ, ಡಿ.ವೈ.ಉಪ್ಪಾರ ಅವರಿಗೆ ಪ್ರಮುಖ ಪ್ಯಾಕೇಜ್‌ಗಳ ಗುತ್ತಿಗೆ ನೀಡಲಾಗಿದೆ. ₹86 ಕೋಟಿ ಮೌಲ್ಯದ ಒಂದು ಪ್ಯಾಕೇಜ್‌ ಅನ್ನು ಜಂಟಿ ಸಹಭಾಗಿತ್ವದ ಮೂಲಕ ಗುತ್ತಿಗೆ ವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.

49.50 ಕಿ.ಮೀ.ಯಿಂದ 51.50 ಕಿ.ಮೀ.ವರೆಗೆ ಕಾಮಗಾರಿ ನಿರ್ವಹಿಸುವ ಪ್ಯಾಕೇಜ್‌ ಐದು ಇದಾಗಿದ್ದು, ಈ ಭಾಗದಲ್ಲಿ ಒಂದು ಟನೆಲ್‌ ನಿರ್ಮಾಣವಾಗುತ್ತದೆ. ಟೆಂಡರ್ ನಿಯಮಾವಳಿಗಳ ಪ್ರಕಾರ ಇಲ್ಲಿ ಕೆಲವು ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುವುದಿಲ್ಲ. ತಮಗೆ ಬೇಕಾದ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಒಂದು ಪ್ಯಾಕೇಜನ್ನು ಮಾತ್ರ ಜಂಟಿ ಸಹಭಾಗಿತ್ವದ ಮೂಲಕ ನಡೆಸಲಾಗಿದೆ. ಗುತ್ತಿಗೆ ವಹಿಸಿಕೊಂಡಿರುವ ಕಂಪನಿ ಬೇನಾಮಿ ಎಂಬ ಆರೋಪಗಳು ಇವೆ.

’ಯೋಜನೆಯ ಅಧೀನದ ವಿಶೇಷ ಘಟಕದ ಯೋಜನೆ ಹಾಗೂ ಗಿರಿಜನ ಉಪಯೋಜನೆಯ ಕಾಮಗಾರಿಗಳಲ್ಲೂ ಅಕ್ರಮಗಳು ಆಗಿವೆ. ಇದರ ಗುತ್ತಿಗೆಯನ್ನು ಕರ್ನಾಟಕ ಗ್ರಾಮೀಣ ಮೂಲಸಕರ್ಯ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿದೆ. ಇಲ್ಲಿ ಈ ಸಂಸ್ಥೆ ನೆಪ ಮಾತ್ರಕ್ಕೆ ಇದೆ. ಈ ಕಾಮಗಾರಿಗಳನ್ನು ತುಂಡು ಗುತ್ತಿಗೆಗಳನ್ನಾಗಿ ಮಾಡಿ ಬೇಕಾದ ಗುತ್ತಿಗೆದಾರರಿಗೆ ನೀಡಲಾಗಿದೆ. ಈ ಬಗ್ಗೆ ಧ್ವನಿ ಎತ್ತಿದ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ನಿಷ್ಠ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮವಾಹಿನಿಯಾಗಿ ಹರಿದು ನೇತ್ರಾವತಿ ಹಾಗೂ ಇತರ ನದಿಗಳ ಮೂಲಕ ಅರಬ್ಬಿ ಸಮುದ್ರ ಸೇರುವ ಜಲಧಾರೆಗಳನ್ನು ಪೂರ್ವಕ್ಕೆ ತಿರುಗಿಸಿ ಬಯಲುಸೀಮೆಗೆ ನೀರು ಕೊಡುವುದು ಯೋಜನೆಯ ಮುಖ್ಯ ಆಶಯ.

ನೇತ್ರಾವತಿಯ ಉಪ ನದಿಗಳಾದ ಎತ್ತಿನಹೊಳೆ, ಕಾಡುಮನೆ ಹೊಳೆ, ಕೆರೆಹೊಳೆ ಮತ್ತು ಹೊಂಗದಹಳ್ಳ ಹೊಳೆಗಳಿಗೆ ಎಂಟು ಕಡೆ ಸಣ್ಣ ಅಣೆಕಟ್ಟೆಗಳನ್ನು ಕಟ್ಟಿ, ಅಲ್ಲಿ ಸಂಗ್ರಹಿಸಿದ ನೀರನ್ನು ಹರವನಹಳ್ಳಿ ವಿತರಣಾ ಕೇಂದ್ರಕ್ಕೆ ಪಂಪ್‌ ಮಾಡಲಾಗುತ್ತದೆ. ಅಲ್ಲಿಂದ ಗುರುತ್ವಾಕರ್ಷಣೆ ಮೂಲಕ 233 ಕಿ.ಮೀ. ಉದ್ದದ ಕಾಲುವೆಯಲ್ಲಿ ತುಮಕೂರಿಗೆ ನೀರು ಹರಿಸಲಾಗುತ್ತದೆ. ನಂತರ ಕಾಲುವೆ ಮೂಲಕ ಬೇರೆ ಜಿಲ್ಲೆಗಳಿಗೆ ನೀರು ಹರಿಸುವುದು ಯೋಜನೆಯಲ್ಲಿ ಸೇರಿದೆ.

ಯೋಜನೆ ಆರಂಭವಾದ ದಿನದಿಂದಲೂ ಪರ, ವಿರೋಧದ ಚರ್ಚೆ ನಡೆಯುತ್ತಲೇ ಇದೆ. ’ಇದು ಮೂರ್ಖರಿಂದ ಮೂರ್ಖರಿಗಾಗಿ ಮಾಡಿದ ಯೋಜನೆ. ಎತ್ತಿನಹೊಳೆಯಿಂದ 24 ಟಿಎಂಸಿ ಅಡಿ ನೀರು ಸಿಗುವುದು ಬಿಡಿ, 9 ಟಿಎಂಸಿ ಅಡಿಯೂ ನೀರು ಸಿಗುವುದಿಲ್ಲ‘ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ ಬಹಿರಂಗ ಸವಾಲು ಹಾಕಿದ್ದರು. 

ಲೋಕಸಭಾ ಚುನಾವಣೆಗೆ ಮುನ್ನ 2014ರಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಆರಂಭದಲ್ಲಿ ಈ ಯೋಜನೆಯ ಗಾತ್ರ ₹12 ಸಾವಿರ ಕೋಟಿ ಆಗಿತ್ತು. 

‘ಹಾಸನ ಜಿಲ್ಲೆಯ ಹಲವು ಕಡೆಗಳಲ್ಲಿ ಆರಂಭವಾಗಿದ್ದ ಕಾಮಗಾರಿ ಕುಂಠಿತವಾಗಿದೆ. ಹಣಕಾಸಿನ ಸಮಸ್ಯೆ ಇಲ್ಲದಿದ್ದರೂ ತ್ವರಿತ ಕಾಮಗಾರಿ ನಡೆಯುತ್ತಿಲ್ಲ. ಮೈತ್ರಿ ಸರ್ಕಾರದ ಪಾಲುದಾರ ಪಕ್ಷವಾದ ಜೆಡಿಎಸ್‌ಗೆ ಆಸಕ್ತಿ ಇಲ್ಲ‘ ಎಂದು ಕಾಂಗ್ರೆಸ್‌ ಮುಖಂಡರು ಇತ್ತೀಚೆಗೆ ಆರೋಪಿಸಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !