ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಲಿ ಶಾಸಕ ಗಣೇಶ್‌ಗೆ ಅನ್ಯಾಯ

ಶಾಸಕನ ಪತ್ನಿ ಭೇಟಿ ಮಾಡಿದ ಬಳಿಕ ರಮೇಶ ಜಾರಕಿಹೊಳಿ ಹೇಳಿಕೆ
Last Updated 19 ಫೆಬ್ರುವರಿ 2019, 17:59 IST
ಅಕ್ಷರ ಗಾತ್ರ

ಹೊಸಪೇಟೆ: ‘ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಅವರಿಗೆ ಅನ್ಯಾಯವಾಗಿದ್ದು, ಅವರು ಬಲಿಪಶು ಆಗಿದ್ದಾರೆ’ ಎಂದು ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು.

ಮಂಗಳವಾರ ಇಲ್ಲಿನ ಚಪ್ಪರದಹಳ್ಳಿಯ ಗಣೇಶ್‌ ಅವರನಿವಾಸದಲ್ಲಿ ಅವರ ಪತ್ನಿ ಶ್ರೀದೇವಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಘಟನೆಯಲ್ಲಿ ಗಣೇಶ್‌ ಅವರಿಗೆ ಪೆಟ್ಟಾಗಿದೆ. ಜಾತಿ ನಿಂದನೆ ಕೂಡ ಮಾಡಲಾಗಿದೆ. ಈ ಕುರಿತು ಗಣೇಶ್‌ ಅವರು ಠಾಣೆಗೆ ದೂರು ಕೊಡಲು ಮುಂದಾಗಿದ್ದರು. ಆದರೆ, ಕೆಲ ಪ್ರಭಾವಿ ಕಾಂಗ್ರೆಸ್‌ ಮುಖಂಡರು, ‘ನಮ್ಮೊಳಗೆ ಸಮಸ್ಯೆ ಬಗೆಹರಿಸೋಣ. ದೂರು ಕೊಡುವುದು ಬೇಡ’ ಎಂದು ಗಣೇಶ್‌ ಅವರಿಗೆ ಹೇಳಿದ್ದರು. ಹೀಗಾಗಿ ಅವರು ಮೌನವಾಗಿದ್ದರು. ನಂತರ ಗಣೇಶ್‌ ವಿರುದ್ಧವೇ ಕೊಲೆ ಯತ್ನ ದೂರು ಕೊಡಲಾಗಿದೆ’ ಎಂದು ಹೇಳಿದರು.

‘ಗಣೇಶ್‌ ಅವರು ಆನಂದ್‌ ಸಿಂಗ್‌ ವಿರುದ್ಧ ಜಾತಿ ನಿಂದನೆ ದೂರು ಕೊಡಲು ನಿರ್ಧರಿಸಿದ್ದರು. ಆದರೆ, ದೊಡ್ಡ ಸ್ಥಾನದಲ್ಲಿರುವವರು ದೂರು ಕೊಡುವುದು ಬೇಡ. ಈ ವಿಷಯವಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಗೃಹಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಮಾತುಕತೆ ನಡೆಸಿ, ನ್ಯಾಯ ಕೊಡಿಸುವ ಭರವಸೆ ದೂರವಾಣಿಯಲ್ಲಿ ನೀಡಿದ್ದರಿಂದ ಸುಮ್ಮನಾದರು’ ಎಂದು ತಿಳಿಸಿದರು.

‘ಘಟನೆ ನಡೆದ ಸಂದರ್ಭದಲ್ಲಿ ಶಾಸಕ ಭೀಮಾ ನಾಯ್ಕ ಅಲ್ಲಿಯೇ ಇದ್ದರು. ವಾಸ್ತವವಾಗಿ ಅಲ್ಲಿ ನಡೆದದ್ದೇನು ಎನ್ನುವುದನ್ನು ಅವರು ತಿಳಿಸಬೇಕು. ಭೀಮಾ ನಾಯ್ಕ, ಗಣೇಶ್‌ ಅವರ ಸ್ನೇಹಿತನಾಗಿದ್ದುಕೊಂಡು ಇದುವರೆಗೆ ಸತ್ಯ ಹೇಳದಿರುವುದು ಸರಿಯಲ್ಲ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಒಂದುವೇಳೆ ಗಣೇಶ್‌ ತಪ್ಪು ಮಾಡಿದರೆ ಅವರಿಗೆ ಶಿಕ್ಷೆಯಾಗಬೇಕು. ಆದರೆ, ಬಲಿಪಶು ಆಗಬಾರದು ಎಂಬುದು ನನ್ನ ಕಳಕಳಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT