ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮ: ಜಗತ್ತಿನ 3ನೇ ಸ್ಥಾನದಲ್ಲಿ ರಾಜ್ಯ

ರಾಜ್ಯದ ವಿವಿಧೆಡೆಯಿಂದ ಬಂದ ಕರೆಗಳಿಗೆ ಉತ್ತರಿಸಿದ ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌
Last Updated 26 ಸೆಪ್ಟೆಂಬರ್ 2019, 1:41 IST
ಅಕ್ಷರ ಗಾತ್ರ

ಬೆಂಗಳೂರು:‘ನವೋದ್ಯಮಗಳ ಸ್ಥಾಪನೆಯಲ್ಲಿ ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನವನ್ನೇ ಕಾಯ್ದುಕೊಂಡಿದೆ. ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ’ ಎಂದು ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್‌ ಕೃಷ್ಣ ತಿಳಿಸಿದರು.

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಇದು ಕೇವಲ ಐಟಿ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ವೈವಿಧ್ಯ ಕ್ಷೇತ್ರಗಳಲ್ಲಿ ನವೋದ್ಯಮಗಳು ಸ್ಥಾಪನೆಯಾಗುತ್ತಿವೆ. ಇವುಗಳಿಗೆ ರಾಜ್ಯ ಸರ್ಕಾರ ಸಾಕಷ್ಟು ಉತ್ತೇಜನಗಳನ್ನು ನೀಡುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನವೋದ್ಯಮಗಳು ಸ್ಥಾಪನೆಗೊಂಡು ಸುರಕ್ಷಿತವಾಗಿ ಮುನ್ನಡೆ ಸಾಧಿಸಿವೆ’ ಎಂದು ಅವರು ವಿವರಿಸಿದರು.

‘ದೇಶದಲ್ಲಿ ಶೇ 30 ರಷ್ಟು ನವೋದ್ಯಮಗಳು ಕರ್ನಾಟಕದಲ್ಲೇ ಇವೆ. ಬೆಂಗಳೂರು ಅಲ್ಲದೆ ಇತರ ಮಹಾನಗರಗಳಲ್ಲೂ ನವೋದ್ಯಮಗಳು ಸ್ಥಾಪನೆಗೊಳ್ಳುತ್ತಿವೆ. ಉತ್ಪಾದನಾ ವಲಯ, ಕೃಷಿ, ಕೃಷಿ ತಂತ್ರಜ್ಞಾನ, ಆರೋಗ್ಯ, ವೈದ್ಯಕೀಯ ತಂತ್ರಜ್ಞಾನ, ವೈಮಾನಿಕ ಸೇರಿದಂತೆ ಹಲವು ವಿಶಿಷ್ಟ ವಲಯಗಳಲ್ಲೂ ನವೋದ್ಯಮಗಳು ತಲೆಯೆತ್ತಿವೆ. ಸುಮಾರು 4,000 ಕ್ಕೂ ಹೆಚ್ಚು ನವೋದ್ಯಮಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ’ ಎಂದು ಗುಂಜನ್‌ ವಿವರಿಸಿದರು.

ಕೆ.ಜಿ.ಎಫ್‌: 2 ಸಾವಿರ ಎಕರೆಯಲ್ಲಿ ಉದ್ಯಮ: ‘ಕೆ.ಜಿ.ಎಫ್‌ನಲ್ಲಿ ಸುಮಾರು 2,000 ಎಕರೆಗೂ ಹೆಚ್ಚು ಜಮೀನಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸಲು ಉದ್ದೇಶಿಸಿದ್ದು, ಈ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ’ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ ತಿಳಿಸಿದರು.

‘ಭೂದಾಖಲಾತಿ ಸಮಸ್ಯೆ ಇಲ್ಲದ ಖಾಲಿ ಜಾಗ ಮತ್ತು ಬಿಇಎಂಎಲ್‌ ಬಳಕೆ ಮಾಡದೇ ಉಳಿದಿರುವ ಜಮೀನು ಸೇರಿ 2,000 ಎಕರೆಗೂ ಹೆಚ್ಚು ಜಮೀನು ಇದೆ. ಅದನ್ನು ಉದ್ಯಮಗಳ ಸ್ಥಾಪನೆಗೆ ಬಳಸಿಕೊಳ್ಳಲಾಗುವುದು. ಯಾವ ಬಗೆಯ ಉದ್ಯಮ ಇಲ್ಲಿಗೆ ಸೂಕ್ತವಾಗುತ್ತದೆ ಎಂಬ ‘ಬೇಡಿಕೆ ಸಮೀಕ್ಷೆ’ ಮಾಡಬೇಕು. ಸದ್ಯಕ್ಕಂತೂ ನಿರ್ದಿಷ್ಟ ಉದ್ಯಮಗಳ ಸ್ಥಾಪನೆಯ ಉದ್ದೇಶವಿಲ್ಲ. ಸಾಮಾನ್ಯ ರೀತಿಯ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಲಾಗುವುದು’ ಎಂದು ಗೌರವ್‌ ಗುಪ್ತಾ ತಿಳಿಸಿದರು.

ಕೈಗಾರಿಕಾ ಸ್ನೇಹಿ ವಾತಾವರಣ ಸನ್ನಿಹಿತ...

ವಿಜಯಕುಮಾರ್‌ ಗೌಡರ್‌,ಗಜೇಂದ್ರಗಡ,ಚಂದ್ರಶೇಖರ್‌,ಕಲಬುರ್ಗಿ,ಯಲ್ಲಾಲಿಂಗ,ವಿಜಯಪುರ

lಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಯೋಜನೆಯ ಬಗ್ಗೆ ಹೇಳುತ್ತಲೇ ಇದ್ದರೂ ಯಾವುದೇ ಪ್ರಗತಿ ಆಗಿಲ್ಲ ಏಕೆ?

ಶೆಟ್ಟರ್‌: ಸರ್ಕಾರ ಹೊರತರಲಿರುವ ನೂತನ ಕೈಗಾರಿಕಾ ನೀತಿಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿನ ಕೈಗಾರಿಕೆಗಳ ಉತ್ತೇಜನಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಕೈಗಾರಿಕೆ ಅಭಿವೃದ್ಧಿಗೆ ಅಗತ್ಯ ಮೂಲಸೌಲಭ್ಯವನ್ನು ಸರ್ಕಾರ ಒದಗಿಸಿಕೊಡಲಿದೆ. ಆ ಭಾಗದಲ್ಲಿ ನೇಕಾರರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಬಾಗಲಕೋಟೆ, ಗಜೇಂದ್ರಗಡಗಳಲ್ಲಿ ಕೈಗಾರಿಕಾ ವಲಯ ಸ್ಥಾಪಿಸುತ್ತೇವೆ. ಹೂಡಿಕೆದಾರರು ಬಂಡವಾಳ ತೊಡಗಿಸಿ, ಕೈಗಾರಿಕೆ ಸ್ಥಾಪಿಸಿದರೆ ಮಾತ್ರ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲು ಸಾಧ್ಯವಾಗುತ್ತದೆ.

***

ದೀಕ್ಷಿತ್‌,ಹಾರೋಹಳ್ಳಿ

lಜರ್ಮನಿಯ ಕಂಪನಿಯೊಂದಕ್ಕೆ ಕೈಗಾರಿಕಾ ನಿವೇಶನ ನೀಡುವಲ್ಲಿ ವಿಳಂಬವಾಗುತ್ತಿದೆ. ಭೂಸ್ವಾಧೀನಾಧಿಕಾರಿ ನಿರ್ಲಕ್ಷ್ಯದಿಂದಾಗಿ ಇಂತಹ ಸ್ಥಿತಿ ಬಂದಿದೆ.ಇದರಿಂದ ಉದ್ಯೋಗಾಸಕ್ತರಿಗೆ ಬಹಳ ತೊಂದರೆಯಾಗಿದೆ, ಸರಿಪಡಿಸಿ.

ಇದಕ್ಕೆ ತಕ್ಷಣ ಪರಿಹಾರ ಹುಡುಕುತ್ತೇವೆ. ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು ಸರ್ಕಾರದ ಆದ್ಯತೆ, ಯಾವುದೇ ಅಡ್ಡಿ ಆಗದಂತೆ ನೋಡಿಕೊಳ್ಳುತ್ತೇವೆ.

ಹರೀಶ್‌,ರಾಮನಗರ

lರಾಮನಗರ ಜಿಲ್ಲೆ ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ, ಉದ್ಯೋಗಕ್ಕಾಗಿ ಬೆಂಗಳೂರಿಗೇ ಬರಬೇಕಾದ ಸ್ಥಿತಿ ಇದೆ. ತಕ್ಷಣ ಗಮನ ಹರಿಸಿ

ರಾಮನಗರ, ಹಾರೋಹಳ್ಳಿ, ಬಿಡದಿಗಳಲ್ಲಿ ಕೈಗಾರಿಕೆಗಳನ್ನು ತರಲು ಪ್ರಯತ್ನ ಸಾಗಿದೆ. 1 ಸಾವಿರ ಎಕರೆ ಪ್ರದೇಶವನ್ನು ಅದಕ್ಕಾಗಿ ಗುರುತಿಸಲಾಗಿದೆ.

***

ಬಸವರಾಜು,ಸೇಡಂ

lಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸಣ್ಣ ಉದ್ಯಮ ಸ್ಥಾಪನೆಗೆ ಬಗ್ಗೆ ಅರಿವು ಮೂಡಿಸಿ

ಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರ ಮಾಡಲಿದೆ.ಮುಖ್ಯಮಂತ್ರಿ ಉದ್ಯೋಗಶೀಲತಾ ಯೋಜನೆಯ ಬಗ್ಗೆ ಈಗಾಗಲೇ ಅರಿವು ಮೂಡಿಸುವ ಪ್ರಯತ್ನ ಸಾಗಿದೆ.

***

ವಿ. ಎಂ. ಕರಜಿಗ,ವಿಜಯಪುರ

lಮುದ್ದೇಬಿಹಾಳದಲ್ಲಿಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಬೇಕು

ಅಲ್ಲಿ ಅರ್ಧಕ್ಕೆ ನಿಂತಿರುವ ಕೈಗಾರಿಕಾ ಪ್ರದೇಶವನ್ನು ಶೀಘ್ರವೇ ಅಭಿವೃದ್ಧಿಪಡಿಸಿ ಕೈಗಾರಿಕೆಗಳಿಗೆ ಆಹ್ವಾನ ನೀಡಲಾಗುವುದು.

**

ಮುನಿಸ್ವಾಮಿ,ಚಿಂತಾಮಣಿ

lಕೋಲಾರ ಜಿಲ್ಲೆಯಲ್ಲಿ ರೈಲ್ವೆ ಕೋಚ್‌ ಫ್ಯಾಕ್ಟರಿ ಸ್ಥಾಪನೆ ಯೋಜನೆ ಎಲ್ಲಿಗೆ ಬಂತು?

ರೈಲ್ವೆಯವರು ಕೇಳಿದರೆ ಕೆಐಎಡಿಬಿ ವತಿಯಿಂದಭೂಸ್ವಾಧೀನ ಮಾಡುತ್ತೇವೆ. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆಯನ್ನು ಸಂಪರ್ಕಿಸುತ್ತೇವೆ.

***

ಬಸವಲಿಂಗಪ್ಪ,ಗದಗ

lಕೈಗಾರಿಕಾ ಅಭಿವೃದ್ಧಿ ಆಗಿಲ್ಲ, ಏನಾದರೂ ಮಾಡಿ

ಗದಗದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಎಲ್ಲ ಪ್ರಯತ್ನ ಮಾಡುತ್ತೇವೆ.

***

ರಾಜು ಕಾಟ್ಕರ್,ಹುಬ್ಬಳ್ಳಿ

lಸಣ್ಣ ಉದ್ಯಮಕ್ಕೆ ಸಾಲ ಕೊಡಿಸುವ ವ್ಯವಸ್ಥೆ ಮಾಡಿ

ಮುದ್ರಾ ಯೋಜನೆಯ ಲಾಭವನ್ನು ಜನ ಪಡೆಯಬೇಕು. ಕೆಎಸ್‌ಎಫ್‌ಸಿಯಿಂದ ಶೇ 4ರ ಬಡ್ಡಿ ದರದಲ್ಲಿ ಸಾಲ ಕೊಡಿಸಲಾಗುತ್ತದೆ.

***

ರಮೇಶ್‌ ಎರಗಲ್‌,ವಿಜಯಪುರ

lವಿಜಯಪುರದಲ್ಲಿ ಕೈಗಾರಿಕೆ ಅಭಿವೃದ್ಧಿಪಡಿಸಿ. ಇದ್ದ ಕೈಗಾರಿಕೆಗಳೂ ಮುಚ್ಚಿವೆ

ಅಲ್ಲಿ ಕೈಗಾರಿಕೆ ಸ್ಥಾಪಿಸಲು ಎಲ್ಲ ವ್ಯವಸ್ಥೆಗಳನ್ನೂ ಮಾಡುತ್ತಿದ್ದೇವೆ. ಹೂಡಿಕೆದಾರರು ಹೆಚ್ಚು ಹೆಚ್ಚು ಬರಬೇಕು.

***

ಶ್ರೀನಿವಾಸ, ಲೋಕೇಶ್‌,ಸಾಗರ,ವಾಸುದೇವ,ತೀರ್ಥಹಳ್ಳಿ,ನಾಗರಾಜ್‌,ಭದ್ರಾವತಿ

lಭದ್ರಾವತಿಯಲ್ಲಿನ ಎಂಪಿಎಂನಲ್ಲಿ ದಿನಗೂಲಿ ನೌಕರರಿಗೆ ಉದ್ಯೋಗ ಭದ್ರತೆ, ಬಾಕಿ ಪಾವತಿ ಒದಗಿಸಿಕೊಡಿ.

ಈಗಾಗಲೇ ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಅದನ್ನು ಮುಂದುವರಿಸುತ್ತೇವೆ.

***

ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಿ

ರಾಜು,ಬೊಮ್ಮಸಂದ್ರ

lಬೆಂಗಳೂರಿನಲ್ಲಿರುವ ಇಲಾಖೆಯ ಮೂವರು ಅಧಿಕಾರಿಗಳು (ಹೆಸರನ್ನು ಸಚಿವರು, ಅಧಿಕಾರಿಗಳು ಗುರುತಿಸಿ ಇಟ್ಟುಕೊಂಡಿದ್ದಾರೆ) ಬಹಳ ದೊಡ್ಡಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಲಂಚ ಕೊಡದಿದ್ದರೆ ಕೆಲಸವೇ ಮಾಡಿಕೊಡುವುದಿಲ್ಲ. ಅವರನ್ನು ತಕ್ಷಣ ವರ್ಗಾಯಿಸಿ.

ಶೆಟ್ಟರ್‌:ಅವರ ವಿರುದ್ಧ ಕ್ರಮ ಖಂಡಿತ.

***

ಖಂಡಪ್ಪ,ಬೀದರ್‌

lಹುಮ್ನಾಬಾದ್‌–ಕಲಬುರ್ಗಿ ರಸ್ತೆಯಲ್ಲಿ ಕೈಗಾರಿಕಾ ಪ್ರದೇಶದಿಂದ ಬಹಳ ದುರ್ವಾಸನೆ ಬರುತ್ತದೆ. ಕ್ರಮ ಕೈಗೊಳ್ಳಿ

ಅದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ

***

ನೇಕಾರಿಕೆ: ಇನ್ನಷ್ಟು ಶೆಡ್‌ಗಳು ಬೇಕು

ಆದೇಶ ಹುಲಗೂರ್‌,ಗದಗ

lನೇಕಾರಿಕೆಗಾಗಿ ಇನ್ನಷ್ಟು ಶೆಡ್‌ಗಳನ್ನು ಕಟ್ಟಿಸಿಕೊಡಿ, ಶಬ್ದದ ಪ್ರಮಾಣವನ್ನು 50 ಡೆಸಿಬಲ್‌ನಿಂದ 75 ಡಿಸಿಬಲ್‌ಗೆ ಹೆಚ್ಚಿಸಲು ಅವಕಾಶ ಕೊಡಿ.ವಿದ್ಯುತ್‌ ಮಗ್ಗಗಳಿಗಾಗಿ ಎಕ್ಸ್‌ಪ್ರೆಸ್‌ ವಿದ್ಯುತ್‌ ಲೈನ್‌ ಬೇಕು.

ಈ ಬಗ್ಗೆಡಿಐಸಿಗೆ ಸೂಚನೆ ಕೊಡುತ್ತೇನೆ. ಶಬ್ದ ಮಾಲಿನ್ಯ ಕುರಿತಂತೆಹೈಕೋರ್ಟ್‌ನಲ್ಲಿ ಸೂಕ್ತ ವಾದ ಮಂಡಿಸುವ ವ್ಯವಸ್ಥೆ ಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT