ಸಿಎಲ್‌ಪಿ ಸಭೆ ಕರೆಯಲು ಒತ್ತಾಯ

7
ಬಜೆಟ್‌ನಲ್ಲಿ ತಾರತಮ್ಯ; ಕಾಂಗ್ರೆಸ್‌ ಶಾಸಕರ ಅಸಮಾಧಾನ

ಸಿಎಲ್‌ಪಿ ಸಭೆ ಕರೆಯಲು ಒತ್ತಾಯ

Published:
Updated:
ಎಚ್.ಕೆ. ಪಾಟೀಲ

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ತಾರತಮ್ಯದಿಂದ ಕೂಡಿದೆ ಎಂದು ಸಿಡಿದೆದ್ದಿರುವ ‘ದೋಸ್ತಿ’ ಪಕ್ಷ ಕಾಂಗ್ರೆಸ್ಸಿನ ಕೆಲವು ಶಾಸಕರು, ಶಾಸಕಾಂಗ ಪಕ್ಷದ ಸಭೆ (ಸಿಎಲ್‌ಪಿ) ಕರೆಯುವಂತೆ ಆಗ್ರಹಿಸಿದ್ದಾರೆ.

ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಹಿರಿಯ ಶಾಸಕ ಎಚ್.ಕೆ. ಪಾಟೀಲ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ಪತ್ರ ಬರೆದ ಬೆನ್ನಲ್ಲೆ ಹಲವು ಶಾಸಕರು ಈ ಬೇಡಿಕೆ ಮುಂದಿಟ್ಟಿದ್ದಾರೆ.

ಈ ಬಗ್ಗೆ, ವೇಣುಗೋಪಾಲ್‌ ಪಕ್ಷದ ರಾಜ್ಯ ನಾಯಕರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದೂ ಗೊತ್ತಾಗಿದೆ.

‘ಬಜೆಟ್‌ನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಹೆಚ್ಚಿಸಿರುವುದು, ವಿದ್ಯುತ್ ದರ ಏರಿಸಿರುವುದು, ಪ್ರಾದೇಶಿಕ ತಾರತಮ್ಯ ಇವೆಲ್ಲವುಗಳಿಂದ ಪಕ್ಷಕ್ಕೆ ಹಾನಿಯಾಗಲಿದೆ. ಕ್ಷೇತ್ರಗಳಲ್ಲಿ ಜನರಿಗೆ ಮುಖ ತೋರಿಸುವುದು ಕಷ್ಟ. ಹೀಗಾಗಿ ಶಾಸಕಾಂಗ ಪಕ್ಷದ ಸಭೆ ಕರೆದು ಈ ಬಗ್ಗೆ ಚರ್ಚಿಸಬೇಕು. ದರ ಹೆಚ್ಚಳ ಪ್ರಸ್ತಾವ ಕೈ ಬಿಡುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಬೇಕು’ ಪಕ್ಷದ ಕಾಂಗ್ರೆಸ್ ನಾಯಕರಿಗೆ ಶಾಸಕರು ಮನವಿ ಮಾಡಿದ್ದಾರೆ.

ಬಜೆಟ್‌ನಲ್ಲಿ ಜೆಡಿಎಸ್ ತನ್ನ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಒತ್ತು ನೀಡಿದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಬಲ ಹೆಚ್ಚಾದರೆ ಕಾಂಗ್ರೆಸ್‌ ಮತ್ತಷ್ಟು ದುರ್ಬಲವಾಗಲಿದೆ. ಹೀಗಾಗಿ, ಈ ಬಗ್ಗೆ ಗಮನಹರಿಸುವಂತೆ ಈ ಶಾಸಕರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !