ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ಲಾಕ್‌ಡೌನ್ ಪರಿಣಾಮ: ಅಂತರರಾಜ್ಯ ಕಾರ್ಮಿಕರು ಅತಂತ್ರ

ತವರಿಗೆ ಹೋಗುವ ತವಕ, ಸರ್ಕಾರದಿಂದ ಬಾರದ ಆದೇಶ
Last Updated 28 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯ ನಾಲ್ಕು ತಾತ್ಕಾಲಿಕ ನಿರಾಶ್ರಿತ ಪರಿಹಾರ ಕೇಂದ್ರಗಳಲ್ಲೇ ಉಳಿದಿರುವ ವಿವಿಧ ರಾಜ್ಯಗಳ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ಧ್ಯಾನ ನೆಟ್ಟಿದ್ದಾರೆ. ನೆಮ್ಮದಿ ದೂರವಾಗಿದೆ.

ಅಂತರ ಜಿಲ್ಲಾ ಕಾರ್ಮಿಕರನ್ನು ಸರ್ಕಾರದ ಆದೇಶದ ಮೇರೆಗೆ ಕೆಲವು ದಿನಗಳ ಹಿಂದೆ ಅವರವರ ಜಿಲ್ಲೆಗಳಿಗೆ ಕಳಿಸಿಕೊಟ್ಟ ಬಳಿಕ, ಉಳಿದ ಕಾರ್ಮಿಕರನ್ನು ಕಳಿಸಲು ಜಿಲ್ಲಾಡಳಿತ ಸಿದ್ಧವಾಗಿದ್ದರೂ, ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದೆ.

ಜಿಲ್ಲೆಯ ಬಳ್ಳಾರಿ, ಹೊಸಪೇಟೆ, ಕೂಡ್ಲಿಗಿ ಮತ್ತು ಹರಪನಹಳ್ಳಿಯ ಪರಿಹಾರ ಕೇಂದ್ರಗಳಲ್ಲಿ ಈಗ ಆಂಧ್ರ ಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಾಸ್ತಾನ, ಪಶ್ಚಿಮ ಬಂಗಾಳ, ಬಿಹಾರ, ತಮಿಳು ನಾಡು ಹಾಗೂ ಮಹಾರಾಷ್ಟ್ರ ಕಾರ್ಮಿಕರು ಆಶ್ರಯ ಪಡೆದಿದ್ದಾರೆ. ಈ ಕಾರ್ಮಿಕರ ಪೈಕಿ ಹರಪನಹಳ್ಳಿಯ ಕೇಂದ್ರದಲ್ಲಿ ತೆಲಂಗಾಣದ ಕಾರ್ಮಿಕರು ಅತಿ ಹೆಚ್ಚಿನ (41) ಸಂಖ್ಯೆಯಲ್ಲಿದ್ದಾರೆ.

‘ಇವರೆಲ್ಲರಿಗೂ ಸದ್ಯಕ್ಕೆ ಜಿಲ್ಲೆಯಲ್ಲೇ ಅಥವಾ ಅವರು ಕೆಲಸ ಮಾಡುತ್ತಿದ್ದ ಜಿಲ್ಲೆಯಲ್ಲೇ ಉದ್ಯೋಗ ದೊರಕಿಸುತ್ತೇವೆಂದರೂ ಅವರು ಅಲ್ಲಿಗೆ ಹೋಗಲು ತಯಾರಿಲ್ಲ. ಮೊದಲು ಒಮ್ಮೆ ತಮ್ಮ ಊರಿಗೆ ಹೋಗಿಬರಬೇಕು ಎಂಬ ತವಕವೇ ಹೆಚ್ಚಿದೆ’ ಎಂದು ಕೇಂದ್ರಗಳ ಉಸ್ತುವಾರಿ ಹೊತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಪ್ಪ ‘ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು.

ಕಂಫರ್ಟ್‌ ಕಿಟ್‌: ‘ಈ ಎಲ್ಲ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದ ವತಿಯಿಂದ ಕಂಫರ್ಟ್‌ ಕಿಟ್‌ ಕೊಡಲಾಗಿದೆ. ಇಲಾಖೆಯ ವತಿಯಿಂದಲೂ ಅಗತ್ಯ ಸಲಕರಣೆಗಳ ಕಿಟ್‌ ಅನ್ನು ನೀಡಲಾಗಿತ್ತು’ ಎಂದು ಹೇಳಿದರು.

ಉಪವಾಸ, ಪರಾರಿ ಯತ್ನ: ವಲಸೆ ಕಾರ್ಮಿಕರಿಗೆ ಆಶ್ರಯ ನೀಡಿದ ಜಿಲ್ಲಾಡಳಿತಕ್ಕೆ ಅವರ ಮಾನಸಿಕ ತೊಳಲಾಟವನ್ನು ಸಮಾಧಾನಿಸುವ ಸವಾಲೂ ಎದುರಾಗಿತ್ತು.

‘ಹಡಗಲಿಯಲ್ಲಿದ್ದ ಕಾರ್ಮಿಕರು ತಮ್ಮನ್ನು ಊರಿಗೆ ಕರೆದೊಯ್ಯುವವರೆಗೂ ಊಟ ಮಾಡುವುದಿಲ್ಲ ಎಂದು ಹಠ ಹಿಡಿದಿದ್ದರು. ನಂತರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಪ್ತಸಮಾಲೋಚಕರ ನೆರವು ಪಡೆದು ಅವರಿಗೆ ಸಾಂತ್ವನ ತುಂಬಲಾಯಿತು’ ಎಂದು ಸ್ಮರಿಸಿದರು.

‘ಕೆಲವು ಕಾರ್ಮಿಕರು ಪರಿಹಾರ ಕೇಂದ್ರದಿಂದ ಪರಾರಿಯಾಗುವ ಪ್ರಯತ್ನವನ್ನೂ ನಡೆಸಿದ್ದರು. ಅವರೆಲ್ಲರನ್ನೂ ಹೆದ್ದಾರಿ ಕಾವಲು ಪೊಲೀಸರು ಪತ್ತೆಹಚ್ಚಿ ಮತ್ತೆ ಕೇಂದ್ರಕ್ಕೆ ಕರೆತಂದರು’ ಎಂದು ಹೇಳಿದರು.

ಬಳ್ಳಾರಿಯ ಮಯೂರ ಹೋಟೆಲ್‌ ಹಿಂಭಾಗದ ಮೆಟ್ರಿಕ್‌ ಪೂರ್ವ ಬಾಲಕರ ನಿಲಯ, ವಿಮ್ಸ್‌ ಬಳಿ ಇರುವ ನಿರಾಶ್ರಿತರ ಪರಿಹಾರ ಕೇಂದ್ರ, ಕೂಡ್ಲಿಗಿ ಹಾಗೂ ಹೊಸಪೇಟೆಯ ಹಿಂದುಳಿದ ವರ್ಗಗಳ ಮೆಟ್ರಿಕ್‌ಪೂರ್ವ ಬಾಲಕರ ನಿಲಯ ಹಾಗೂ ಹರಪನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಾರ್ಮಿಕರನ್ನು ಇರಿಸಲಾಗಿದೆ.

ಗರ್ಭಿಣಿ ಕುಟುಂಬ ರವಾನೆ
ಅಂತರರಾಜ್ಯ ಕಾರ್ಮಿಕರ ಪೈಕಿ ಗರ್ಭಿಣಿ, ಆಕೆಯ ಪತಿ ಹಾಗೂ ಮೈದುನನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಿ ಅವರ ಊರಾದ ತೆಲಂಗಾಣಕ್ಕೆ ಕಳಿಸಕೊಡಲಾಗಿದೆ.

‘ಅಂತರ ಜಿಲ್ಲಾ ಕಾರ್ಮಿಕರ ಪೈಕಿ, ಐದು ಮಂದಿಯನ್ನು ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಟ್ಟಿಗೆ ಪ್ರತ್ಯೇಕ ಬಸ್‌ನಲ್ಲಿ ಕರೆದೊಯ್ಯಲಾಯಿತು. ಕಾರ್ಮಿಕರನ್ನು ಅತ್ಯಂತ ಮುತುವರ್ಜಿಯಿಂದ ಕಳಿಸಿದ್ದು ಧನ್ಯತೆ ಮೂಡಿಸಿದೆ’ ಎಂದು ರಾಜಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT