ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಕ್ಷಾಮ: ಶಿರಸಿ ತಾಲ್ಲೂಕು ಬಿಳೂರು ವಿದ್ಯಾರ್ಥಿಗಳ ಜಲಸಂರಕ್ಷಣೆ ತುಡಿತ

ಕಾಲೇಜು ಸುತ್ತಲಿನ ಗ್ರಾಮಗಳಲ್ಲಿ ಕೆರೆ, ಕೊಳವೆ ಬಾವಿಗಳ ಅಧ್ಯಯನ
Last Updated 23 ಡಿಸೆಂಬರ್ 2018, 20:06 IST
ಅಕ್ಷರ ಗಾತ್ರ

ಶಿರಸಿ: ಊರಿನ ಸುತ್ತ ಹತ್ತಾರು ಕೆರೆಗಳು ಇದ್ದರೂ, ಪ್ರತಿ ಬೇಸಿಗೆಯಲ್ಲಿ ಎದುರಾಗುವ ಜಲಕ್ಷಾಮಕ್ಕೆ ಕಾರಣ ಹುಡುಕಲು ಹೊರಟ ಈ ವಿದ್ಯಾರ್ಥಿಗಳ ಅಧ್ಯಯನವು ಅನೇಕ ಅಚ್ಚರಿಗಳನ್ನು ತೆರೆದಿಟ್ಟಿದೆ. ತಾಲ್ಲೂಕಿನ ಬನವಾಸಿ ಹೋಬಳಿಯಲ್ಲಿರುವ ಬಿಳೂರು ತೀರಾ ಕುಗ್ರಾಮದ ಪ್ರದೇಶ.

ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಬರುವ ಶೇ 100ರಷ್ಟು ವಿದ್ಯಾರ್ಥಿಗಳು ಕೃಷಿಕರು ಹಾಗೂ ಕೃಷಿ ಕೂಲಿ ಕಾರ್ಮಿಕರ ಮಕ್ಕಳು. ಮಲೆನಾಡಿನ ಕಾಡಿನ ನಡುವೆ ಇರುವ ಈ ಗ್ರಾಮ ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಬರವನ್ನು ಅನುಭವಿಸುತ್ತದೆ. ಬಹುತೇಕ ಮನೆಗಳ ತೆರೆದ ಬಾವಿಗಳು ಬತ್ತುತ್ತವೆ, ಕೆರೆಗಳು ಬರಿದಾಗುತ್ತವೆ, ಶಾಲೆಯ ಬಿಸಿಯೂಟಕ್ಕೂ ನೀರಿನ ಕೊರತೆಯ ಬಿಸಿ ತಟ್ಟುತ್ತದೆ.

‘ವಿದ್ಯಾರ್ಥಿಗಳು ಕಾಲೇಜಿಗೆ ಬರದಿದ್ದರೆ, ನಾವು ಅವರ ಮನೆಗೆ ಭೇಟಿ ನೀಡಿ ಗೈರಾಗಿರುವುದರ ಕಾರಣ ಕೇಳುತ್ತೇವೆ. ಹೀಗೆ ಭೇಟಿ ನೀಡಿದ ಅನೇಕ ಸಂದರ್ಭಗಳಲ್ಲಿ, ನೀರಿಲ್ಲದೇ ಕೃಷಿಗೆ ತೊಂದರೆಯಾಗುತ್ತಿರುವ ಬಗ್ಗೆ ಪಾಲಕರು ಹೇಳಿಕೊಳ್ಳುತ್ತಿದ್ದರು. ಊರಿನಲ್ಲಿ ಓಡಾಡುವಾಗ ಅಲ್ಲಲ್ಲಿ ಪುರಾತನ ಕೆರೆಗಳು ಕಾಣುತ್ತವೆ. ಆದರೂ, ಪ್ರತಿ ವರ್ಷ ನೀರಿನ ಸಮಸ್ಯೆ ಎದುರಾಗುವುದನ್ನು ಕಂಡು, ಅಧ್ಯಯನ ನಡೆಸುವ ವಿಚಾರ ಬಂತು’ ಎನ್ನುತ್ತಾರೆ ಉಪನ್ಯಾಸಕ ಉಮೇಶ ನಾಯ್ಕ.

ಸುಮಾರು 20 ಮಕ್ಕಳು ಒಂದು ತಿಂಗಳು ಅಧ್ಯಯನ ನಡೆಸಿದ್ದಾರೆ. ಬಿಳೂರು, ಸುತ್ತಲಿನ ಮಾಳಂಜಿ, ಬಂಕನಾಳ, ಗೋಣೂರು, ಕೋಟೆಕೊಪ್ಪದಲ್ಲಿ 27 ಕೆರೆಗಳನ್ನು ಗುರುತಿಸಿದ್ದಾರೆ. ಕೆರೆಯ ಸನಿಹದ ಕೃಷಿ ಭೂಮಿ, ಮಾಲ್ಕಿ ಜಮೀನಿನಲ್ಲಿ 399ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಲೆಕ್ಕ ಹಾಕಿದ್ದಾರೆ. ಆರೆಂಟು ಕಿ.ಮೀ ವ್ಯಾಪ್ತಿಯಲ್ಲಿರುವ ಈ ಕೊಳವೆಬಾವಿಗಳ ಪೈಕಿ ಸದ್ಯಕ್ಕೆ 174ರಲ್ಲಿ ಮಾತ್ರ ನೀರು ಸಿಗುತ್ತಿದೆ. ಇನ್ನುಳಿದ 225 ಕೊಳವೆ ಬಾವಿಗಳು ವಿಫಲವಾಗಿವೆ ಎಂಬುದನ್ನು ದಾಖಲಿಸಿದ್ದಾರೆ.

‘ಅಧ್ಯಯನದಿಂದ ಜಲಮೂಲ ಸಂರಕ್ಷಣೆಯ ತುಡಿತ ಹೆಚ್ಚಿದೆ. ಗ್ರಾಮಸ್ಥರು ಬೆಂಬಲ ನೀಡಿದರೆ, ಪ್ರಾಯೋಗಿಕವಾಗಿ ಕೆರೆಯೊಂದರ ಹೂಳೆತ್ತಲು ಆರಂಭಿಸುವ ಯೋಚನೆ ಇದೆ’ ಎನ್ನುತ್ತಾರೆ ವಿದ್ಯಾರ್ಥಿಗಳಾದ ಶರತ್ ಬಡಗಿ, ವರ್ಷಾ ನಾಯ್ಕ.

* ಕೆರೆ ಪುನರುಜ್ಜೀವನದ ದೃಷ್ಟಿಯಿಂದ ವಿದ್ಯಾರ್ಥಿಗಳು ನಡೆಸಿರುವ ಅಧ್ಯಯನ ವರದಿಯನ್ನು ಜನಪ್ರತಿನಿಧಿಗಳಿಗೆ ಸಲ್ಲಿಸಲಾಗುವುದು

-ಆರ್‌.ಜಿ.ಭಟ್ಟ, ಬಿಳೂರು ಪಿಯು ಕಾಲೇಜಿನ ಪ್ರಾಚಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT