ಸಚಿವ ಡಿಕೆಶಿಗೆ ಮಧ್ಯಂತರ ಜಾಮೀನು

7
ದೆಹಲಿಯಲ್ಲಿ ಐ.ಟಿ ವಶಪಡಿಸಿಕೊಂಡ ₹ 8.60 ಕೋಟಿ ಹಣದ ಪ್ರಕರಣ

ಸಚಿವ ಡಿಕೆಶಿಗೆ ಮಧ್ಯಂತರ ಜಾಮೀನು

Published:
Updated:

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿಯಲ್ಲಿ ವಶಪಡಿಸಿಕೊಂಡಿರುವ ₹8.60ಕೋಟಿ ಲೆಕ್ಕ ಕೊಡದ ಹಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಅವರ ಮೂವರು ಆಪ್ತರಿಗೆ ಆರ್ಥಿಕ ಅಪರಾಧಗಳ ವಿಚಾರಣಾ ನ್ಯಾಯಾಲಯ ಗುರುವಾರ ಮಧ್ಯಂತರ ಜಾಮೀನು ನೀಡಿತು.

ಶಿವಕುಮಾರ್‌, ಶರ್ಮಾ ಟ್ರಾನ್ಸ್‌ಪೋರ್ಟ್‌ನ ಸುನಿಲ್‌ ಕುಮಾರ್‌ ಶರ್ಮಾ, ದೆಹಲಿ ಕರ್ನಾಟಕ ಭವನ ನೌಕರ ಆಂಜನೇಯ, ಸುಖದೇವ್‌ ವಿಹಾರ ನಿವಾಸಿ ರಾಜೇಂದ್ರ ಅವರು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಮನವಿ ಮಾಡಿದ ಬಳಿಕ ಮಧ್ಯಂತರ ಜಾಮೀನು ನೀಡಲಾಯಿತು. ನಾಲ್ವರು ತಲಾ ₹ 50 ಸಾವಿರದ ಬಾಂಡ್‌ ನೀಡಿದರು. 

ಸಚಿವರ ಮತ್ತೊಬ್ಬ ಆಪ್ತ ಸಚಿನ್‌ ನಾರಾಯಣ್‌ ಅವರ ವಿಚಾರಣೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿರುವ ವಿಷಯವನ್ನು ಕೋರ್ಟ್‌ ಗಮನಕ್ಕೆ ತರಲಾಯಿತು. ಆನಂತರ ನ್ಯಾಯಾಧೀಶರು ಪ್ರಕರಣದ ವಿಚಾರಣೆಗೆ ತಾತ್ಕಾಲಿಕ ತಡೆ ನೀಡಿ, ಸೆಪ್ಟೆಂಬರ್‌ 20ಕ್ಕೆ ಮುಂದೂಡಿದರು.

’ಈ ಮೊಕದ್ದಮೆ ದಾಖಲಿಸುವ ಮೊದಲು ಸಕ್ಷಮ ಪ್ರಾಧಿಕಾರದ ಒಪ್ಪಿಗೆ ಪಡೆದಿಲ್ಲ. ಐ.ಟಿ ಕಾಯಿದೆ 279ರಂತೆ ಇಲಾಖೆ ಆಯುಕ್ತರ ಅನುಮತಿ ಪಡೆಯಬೇಕು. ಆದರೆ, ಪ್ರಧಾನ ನಿರ್ದೇಶಕರ ಒಪ್ಪಿಗೆ ಪಡೆಯಲಾಗಿದೆ. ಈ ಕಾರಣಕ್ಕೆ ಹೈಕೋರ್ಟ್‌ನಲ್ಲಿ ಸಚಿನ್‌ ವಿಚಾರಣೆಗೆ ತಾತ್ಕಾಲಿಕ ತಡೆ ಸಿಕ್ಕಿದೆ’ ಎಂದು ಸಚಿವರ ವಕೀಲರು ವಾದಿಸಿದರು.

ಮುಂದಿನ ವಿಚಾರಣೆ ಸಮಯದಲ್ಲಿ ಹೈಕೋರ್ಟ್‌ನಲ್ಲಿರುವ ಅರ್ಜಿಯ ಸ್ಥಿತಿಗತಿ ತಿಳಿಸುವಂತೆ ನ್ಯಾಯಾಲಯವು ಶಿವಕುಮಾರ್‌ ವಕೀಲರಿಗೆ ಸೂಚಿಸಿತು.

ಆರ್ಥಿಕ ಅಪರಾಧಗಳ ವಿಚಾರಣಾ ನ್ಯಾಯಾಲಯಕ್ಕೆ ಐ.ಟಿ ಅಧಿಕಾರಿಗಳು ಸಲ್ಲಿಸಿರುವ 33 ಪುಟಗಳ ದೂರಿನಲ್ಲಿ, ಶಿವಕುಮಾರ್‌, ಸಚಿನ್‌ ನಾರಾಯಣ್‌, ಸುನಿಲ್‌ ಕುಮಾರ್‌ ಶರ್ಮಾ, ಆಂಜನೇಯ ಹಾಗೂ ರಾಜೇಂದ್ರ, ದೆಹಲಿ ಆರ್‌.ಕೆ. ಪುರಮಿನ ಮನೆ ಹಾಗೂ ಸಫ್ದರ್‌ಜಂಗ್‌ ಎನ್‌ಕ್ಲೇವ್‌ನ ಫ್ಲ್ಯಾಟ್‌ಗಳಲ್ಲಿ ಸಿಕ್ಕಿರುವ ₹ 8.60ಕೋಟಿ ಹಣದ ಮೂಲದ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದೆ.

‘ಈ ಹಣ ಸಚಿವರಿಗೆ ಸೇರಿದ್ದು ಎಂದು ಆಂಜನೇಯ ಹೇಳಿದ್ದಾರೆ. ಇದು ತಮ್ಮ ಹಣ ಎಂದು ಶರ್ಮಾ ತಿಳಿಸಿದ್ದಾರೆ. ಇದರಲ್ಲಿ ಭಾಗಶಃ ಹಣ ಕೃಷಿಯಿಂದ ಬಂದ ಆದಾಯ’ ಎಂದು ಶಿವಕುಮಾರ್‌ ವಿವರಿಸಿದ್ದಾರೆ. ಆದರೆ, ಹಣದ ಮೂಲವನ್ನು ಖಚಿತವಾಗಿ ಯಾರೂ ಬಹಿರಂಗಪಡಿಸಿಲ್ಲ’ ಎಂದು ಐ.ಟಿ ಅಧಿಕಾರಿಗಳು ದೂರಿನಲ್ಲಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !