ಬುಧವಾರ, ಅಕ್ಟೋಬರ್ 23, 2019
27 °C
ಬೇಲೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯಲ್ಲಿ ಆಕ್ರೋಶ

ಕಾಫಿ ಬೆಳೆಗಾರರ ನೆರವಿಗೆ ಬಾರದ ಕೇಂದ್ರ

Published:
Updated:
Prajavani

ಬೇಲೂರು: ದೇಶಕ್ಕೆ ಸಾವಿರಾರು ಕೋಟಿ ಆದಾಯ ತಂದುಕೊಡುತ್ತಿರುವ ಕಾಫಿ ಉದ್ಯಮ ಸಂಕಷ್ಟದಲ್ಲಿದ್ದು ಶೇ 90ರಷ್ಟು ಕಾಫಿ ಬೆಳೆಗಾರರು ಕಷ್ಟದಲ್ಲಿದ್ದರೂ ಕೇಂದ್ರ ಸರ್ಕಾರ ಅವರ ನೆರವಿಗೆ ಬಾರದೆ ಮೌನವಹಿಸಿದೆ. ಇದರಿಂದಾಗಿ ಕಾಫಿ ಬೆಳೆಗಾರರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣಗೊಂಡಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಆತಂಕ ವ್ಯಕ್ತಪಡಿಸಿದರು.

ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘದ ವತಿಯಿಂದ ಇಲ್ಲಿನ ಚನ್ನಕೇಶವ ದೇಗುಲದ ಮುಂಭಾಗದ ಏರ್ಪಡಿಸಿದ್ದ 5ನೇ ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ‘ವಿಶ್ವದ ಮಾರುಕಟ್ಟೆಯಲ್ಲಿ ಭಾರತ ಕಾಫಿ ರಫ್ತಿನಲ್ಲಿ 6ನೇ ಸ್ಥಾನದಲ್ಲಿದೆ. ಆದರೂ ಕೇಂದ್ರ ಸರ್ಕಾರ ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬರುತ್ತಿಲ್ಲ. ಅತಿವೃಷ್ಟಿಯಿಂದಾಗಿಯೂ  ಕಾಫಿ ಬೆಳೆಗಾರರು ತೊಂದರೆಗೊಳಗಾಗಿದ್ದಾರೆ. ಅವರ ನೆರವಿಗೂ ಕೇಂದ್ರ, ರಾಜ್ಯ ಸರ್ಕಾರಗಳು ಮುಂದಾಗಿಲ್ಲ’ ಎಂದು ದೂರಿದರು.

‘ಕಾಫಿ ಮನುಷ್ಯನ ಜೀವನ ಸಂಗಾತಿಯಾಗಿದೆ. ಒತ್ತಡದ ಮನಸ್ಸಿನಿಂದ ಹೊರಬರಲು ಕಾಫಿ ಕುಡಿಯುವುದು ಅವಶ್ಯವಾಗಿದೆ. ಗ್ರೀನ್‌ ಟೀ ಯಂತೆ ಗ್ರೀನ್‌ ಕಾಫಿ ಮಾರುಕಟ್ಟೆ ಪ್ರವೇಶಿಸುತ್ತಿರುವುದು ಕಾಫಿ ಬೆಳೆಗಾರರಿಗೆ ಆಶಾದಾಯಕವಾಗಿದೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ‘ಕಾಫಿ ಬೆಳೆಗಾರರು ಎಂದರೆ, ಸಮಾಜದಲ್ಲಿ ಶ್ರೀಮಂತರು ಎಂಬ ಭಾವನೆಯಿತ್ತು. ಆದರೆ, ಅದು ಸುಳ್ಳಾಗಿದ್ದು ಮಾರುಕಟ್ಟೆಯ ಏರುಪೇರು, ಬೆಳೆಹಾನಿಯಿಂದ ಕಾಫಿ ಬೆಳೆಗಾರರು ನಷ್ಟಕ್ಕೊಳಗಾಗಿದ್ದಾರೆ. ಮನಮೋಹನ್‌ಸಿಂಗ್‌ ಪ್ರಧಾನಿಯಾಗಿದ್ದಾಗ ಕಾಫಿ ಬೆಳೆಗಾರರ ನೆರವಿಗೆ ₹ 1800 ಕೋಟಿ ನೀಡಿದ್ದರು’ ಎಂದರು.

ಶಾಸಕ ಕೆ.ಎಸ್‌.ಲಿಂಗೇಶ್‌, ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘದ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಕಾರ್ಯದರ್ಶಿ ವಿಶ್ವನಾಥ ನಾಯಕ್‌, ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್‌) ದ ಅಧ್ಯಕ್ಷ ಯು.ಎಂ.ತೀರ್ಥಮಲ್ಲೇಶ್‌, ಕಾರ್ಯದರ್ಶಿ ಮುರುಳೀಧರ್‌, ಮಾಜಿ ಅಧ್ಯಕ್ಷ ಅತ್ತಿಕಟ್ಟೆ ಜಗನ್ನಾಥ್‌,

ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದಶೆಟ್ಟಿ, ಬಿಜೆಪಿ ಮುಖಂಡ ಎಚ್‌.ಎಂ.ವಿಶ್ವನಾಥ್‌,  ಪ್ರಮುಖರಾದ ಪ್ರದೀಪ್‌, ಪರಮೇಶ್‌, ಚೇತನ್‌ಕುಮಾರ್‌ ಮತ್ತಿತರರು ಇದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)