ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡಗಳಿಗಿಂತ ಸಾಹಿತ್ಯಸೌಧ ಮುಖ್ಯ: ಜಯಮಾಲಾ

ಅಂತರರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದ ಸಚಿವೆ ಜಯಮಾಲ
Last Updated 5 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ದಿ ಇಂಡಿಯನ್ ಕ್ಲಬ್, ಬಹರೇನ್: ‘ಗಗನಚುಂಬಿ ಕಟ್ಟಡ ಹಾಗೂ ರಸ್ತೆಗಳಿಗಿಂತಲೂ ಬದುಕನ್ನು ಸಹ್ಯಗೊಳಿಸಲು ನಾವು ಕಟ್ಟುವ ಸಾಹಿತ್ಯ ಹಾಗೂ ಕಲಾ ಪ್ರಕಾರಗಳು ಜಗತ್ತಿಗೆ ಹೆಚ್ಚು ಮುಖ್ಯವಾದವು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ‌ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು, ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಕನ್ನಡ ಸಂಘ ಬಹರೇನ್ ಸಂಘಟಿಸಿರುವ ಎರಡು ದಿನಗಳ‌ ಪ್ರಥಮ ಅಂತರರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿಯ ನಿಜವಾದ ಮಾನದಂಡ ಜೀವಪರ ಸಾಂಸ್ಕೃತಿಕ ಪರಿಸರವೇ ಹೊರತು ಭೌತಿಕ ರಚನೆಗಳಲ್ಲ ಎಂದು ವಿಶ್ಲೇಷಿಸಿದರು.

‘ಅನಿವಾಸಿ ಭಾರತೀಯರಿಗೆ ಉತ್ತೇಜನ ನೀಡಲಿಕ್ಕಾಗಿ ಕರ್ನಾಟಕ ಸರ್ಕಾರ ಪ್ರತ್ಯೇಕ ನೀತಿ ರೂಪಿಸಿದೆ. ₹ 250 ಕೋಟಿಗಿಂತಲೂ ಹೆಚ್ಚು ಬಂಡವಾಳ ಹೂಡುವ ಉದ್ಯಮಿಗಳಿಗೆ‌ ಸರ್ಕಾರ ಸಬ್ಸಿಡಿಯ ಜೊತೆಗೆ ಭೂಮಿ ನೀಡಲಿದೆ. ಇದರ ಪ್ರಯೋಜನವನ್ನು ಬಹರೇನ್ ಕನ್ನಡಿಗರು ಪಡೆಯಬೇಕು’ ಎಂದರು.

ವಿಶ್ವಮಾನ್ಯ ಕನ್ನಡಿಗ: ಚಾರಿತ್ರಿಕ ನೆನಪುಗಳ ಹಿನ್ನೆಲೆಯಲ್ಲಿ ಮನಸ್ಸುಗಳನ್ನು ಒಡೆಯುತ್ತಿರುವ ಸಂದರ್ಭದಲ್ಲಿ, ಎಲ್ಲರನ್ನೂ ಒಳಗೊಳ್ಳುವ ಗುಣ ಬಹರೇನ್‌ ಮಣ್ಣಿನಲ್ಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ ಹೇಳಿದರು.

ಕರ್ನಾಟಕಕ್ಕೆ‌ ನಿಶ್ಚಿತ ಚೌಕಟ್ಟಿದೆಯೇ ಹೊರತು ಕನ್ನಡಿಗನಿಗಿಲ್ಲ. ಪ್ರತಿಭೆಯ ಕಾರಣದಿಂದಾಗಿ ಕನ್ನಡಿಗರು ವಿಶ್ವದ ಎಲ್ಲ ಭಾಗಗಳಲ್ಲಿ ಮನ್ನಣೆ ಪಡೆದಿದ್ದಾರೆ. ಅನಿವಾಸಿ ಕನ್ನಡಿಗರು ತಾವು ನೆಲೆಸಿರುವ ಪ್ರದೇಶದ ಮುಖ್ಯವಾಹಿನಿಯೊಂದಿಗೆ ಬೆರೆತೂ ತಮ್ಮತನ ಉಳಿಸಿಕೊಳ್ಳುವ ವಿಶೇಷ ಗುಣ ಹೊಂದಿದ್ದಾರೆ ಎಂದರು.

ಪರಿಷತ್ತಿನ 104 ವರ್ಷಗಳಲ್ಲಿ ಈ ಬಗೆಯ ಸಮ್ಮೇಳನ‌ ನಡೆಯುತ್ತಿರುವುದು ಇದೇ ಮೊದಲು ಎಂದು ಕ.ಸಾ.ಪ. ಅಧ್ಯಕ್ಷ ಮನು ಬಳಿಗಾರ್‌ ಹೇಳಿದರು.

ಪರಧರ್ಮವನ್ನು, ಪರ ವಿಚಾರವನ್ನು ಸಹಿಸಿಕೊಳ್ಳಬೇಕೆನ್ನುವ ಕವಿರಾಜಮಾರ್ಗಕಾರನ ಆಶಯವನ್ನು ಇಂಥ ಸಮ್ಮೇಳನಗಳು ವಿಶ್ವಕ್ಕೆ ಸಾರಿ ಹೇಳುತ್ತವೆ. ಕನ್ನಡದ ಅಡುಗೆಮನೆಗಳ ಒಳಗೂ‌ ಇಂಗ್ಲಿಷ್ ಬಂದಿದೆ. ಇಂಥ ಸಂದರ್ಭದಲ್ಲಿ ಕನ್ನಡದ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ‌ ಈ ಸಮ್ಮೇಳನ ಒಂದು ಸಣ್ಣ ಹೆಜ್ಜೆ ಎಂದರು.

ಕನ್ನಡ ವಿ.ವಿ. ಕುಲಪತಿ ಮಲ್ಲಿಕಾ ಘಂಟಿ, ಕವಿ ಎಚ್.ಎಸ್.ವೆಂಕಟೇಶಮೂರ್ತಿ ಹಾಗೂ ಬಹರೇನ್ ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ ಹಾಗೂ ಕಾರ್ಯದರ್ಶಿ ಕಿರಣ್ ಉಪಾಧ್ಯಾಯ ಇದ್ದರು. ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT