ಎಲ್ಲಿಂದಲೋ ಬಂದವರು...

ಮಂಗಳವಾರ, ಮಾರ್ಚ್ 26, 2019
26 °C

ಎಲ್ಲಿಂದಲೋ ಬಂದವರು...

Published:
Updated:
Prajavani

‘ಮನಸಿಟ್ಟು ಕೆಲಸ ಮಾಡ್ಬೇಕು. ಜಾಸ್ತಿ ಸಂಬಳ ತಗೋಬೇಕು’ ಬೇರೇನೂ ಯೋಚನೆ ಬರೋದಿಲ್ಲ.... –ಬಟ್ಟೆ ಅಂಗಡಿಯೊಂದರ ಸೇಲ್ಸ್‌ ಗರ್ಲ್ ರೀತಾಳ ಬಣ್ಣದ ತುಟಿಯಂಚಿನಲ್ಲಿ ವಿಷಾದ ಮುಚ್ಚುವ ನಗುವಿತ್ತು.

‘ನಾವು ಈಶಾನ್ಯ ರಾಜ್ಯಗಳಿಂದ ಹೊಟ್ಟೆಪಾಡಿಗಾಗಿ ರಾಜಧಾನಿಗೆ ವಲಸೆ ಬಂದವರು. ಜನ ನಮ್ಮ ವೇಷಭೂಷಣ, ಅಲಂಕಾರ ನೋಡಿ ನಾವು ತುಂಬಾ ಸುಖವಾಗಿರ್ತೀವಿ ಅಂದುಕೊಳ್ತಾರೆ. ಬಣ್ಣದ ನೇಲ್ ಪಾಲಿಷ್, ಲಿಪ್‌ಸ್ಟಿಕ್, ನೇರವಾದ ಕೂದಲು, ನಳನಳಿಸುವ ಚರ್ಮ ನೋಡಿ ಇವರಿಗೆ ಕಷ್ಟವೇ ಇಲ್ಲ ಅಂತ ಭಾವಿಸ್ತಾರೆ. ನಿಜಕ್ಕೂ ಅವರಂದುಕೊಂಡಂತೆ ನಮ್ಮ ಬದುಕು ಇರೋದಿಲ್ಲ...’ ಅಂತ ತಮ್ಮ ಸುಂದರ ಮುಖದ ಹಿಂದಿನ ನೋವಿನ ಎಳೆ ಬಿಚ್ಚಿಡುತ್ತಾರೆ.

ರೀತಾಳ ಮಾತುಗಳಲ್ಲಿ ನಾಗಾಲ್ಯಾಂಡ್, ಮೇಘಾಲಯ, ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ತ್ರಿಪುರ ಮತ್ತಿತರ ಈಶಾನ್ಯರಾಜ್ಯಗಳಿಂದ ಬೆಂಗಳೂರಿಗೆ ದುಡಿಮೆಗೆಂದು ಬಂದ ಯುವತಿಯರ ಅಂತರಂಗವಿದು.

ಈ ರಾಜ್ಯಗಳಲ್ಲಿ ಬಹುತೇಕರ ಬದುಕಿಗೆ ಕೃಷಿಯೇ ಆಧಾರ. ಬಡತನ, ನಿರುದ್ಯೋಗದ ಕಾರಣ ತಮ್ಮ ರಾಜ್ಯವನ್ನು ಬಿಟ್ಟು ದೇಶದ ಇತರೆಡೆ ಕೆಲಸಕ್ಕೆ ಹೋಗುವವರೇ ಹೆಚ್ಚು. ಯುವತಿಯರೂ ಅಷ್ಟೇ.

‘ನನ್ನದು ನಾಗಾಲ್ಯಾಂಡ್‌ನ ದಿಮಾಪುರ್. ಮನೆಯಲ್ಲಿ ಬಡತನ. ಅಪ್ಪ ಅವರಿವರ ಹೊಲದಲ್ಲಿ ಕೆಲಸ ಮಾಡುತ್ತಿದ್ದ. ಅಮ್ಮ ಮುಗ್ಧೆ. ದೊಡ್ಡಣ್ಣನಿಗೆ ಜವಾಬ್ದಾರಿ ಅಷ್ಟಕಷ್ಟೆ. ತಂಗಿ 8ನೇ ತರಗತಿ ಓದುತ್ತಿದ್ದಾಳೆ. ಬಡತನದಿಂದಾಗಿ ನಾನು ಹತ್ತನೇ ತರಗತಿ ಮುಗಿಯುತ್ತಿದ್ದಂತೆ ಶಾಲೆ ಬಿಟ್ಟೆ. ಅಲ್ಲಿದ್ದು ಕೆಲಸ ಮಾಡಿದರೆ ತಿಂಗಳಿಗೆ ಎರಡೂವರೆ ಸಾವಿರ ಸಿಕ್ಕರೆ ಹೆಚ್ಚು. ಬೆಂಗಳೂರಿನಲ್ಲಿ ಜಾಸ್ತಿ ಸಂಬಳ ಸಿಗುತ್ತೆ ಅನ್ನೋ ಕಾರಣಕ್ಕಾಗಿ ಇಲ್ಲಿಗೆ ಬಂದೆ. ಇಲ್ಲಿ ತಿಂಗಳಿಗೆ ₹ 8 ಸಾವಿರ ಸಿಗುತ್ತದೆ. ಅದರಲ್ಲಿ ₹ 5 ಸಾವಿರ ಮನೆಗೆ ಕಳಿಸ್ತೀನಿ. ಉಳಿದ ₹ 3 ಸಾವಿರದಲ್ಲಿ ನನ್ನ ಖರ್ಚು ವೆಚ್ಚ ನೋಡಿಕೊಳ್ತೀನಿ’ ಅಂತ ತಮ್ಮ ಬದುಕಿನ ಪುಟ ತೆರೆದಿಡುತ್ತಾರೆ ರೀತಾ.

‘ಸಣ್ಣ ಸಣ್ಣ ಹಳ್ಳಿಗಳಿಂದ ದೊಡ್ಡ ನಗರಗಳಿಗೆ ದುಡಿಯಲು ಬರುವ ನಮ್ಮಂಥ ಯುವತಿಯರ ಬಗ್ಗೆ ಗ್ರಾಮಗಳಲ್ಲಿ ಒಳ್ಳೆಯ ಮಾತುಗಳು ಕೇಳಿಬರೋದಿಲ್ಲ. ನಮ್ಮ ಉಡುಗೆ–ತೊಡುಗೆಯಿಂದ ಹಿಡಿದು ನಡತೆಯ ತನಕ ಮಾತಾಡ್ತಾರೆ. ನಮ್ಮ ಕಷ್ಟಕ್ಕೆ ಅವರೇನೂ ಬರೋದಿಲ್ಲ. ನಮ್ಮ ಕಷ್ಟಕ್ಕೆ ನಾವೇ ಮರುಗಬೇಕು. ಅದಕ್ಕೆ ‘ಹಿಮ್ಮತ್‌’ನಿಂದ ಗಟ್ಟಿ ಮನಸು ಮಾಡಿಕೊಂಡು ಇಲ್ಲಿಗೆ ದುಡಿಯಲು ಬಂದ ನಮಗೆ ನಮ್ಮ ಕುಟುಂಬವಷ್ಟೇ ಮುಖ್ಯ. ಮನೆಯ ಸಮಸ್ಯೆಗಳಿರುವಾಗ ಟೀಕೆಗಳಿಗೆ ಸೊಪ್ಪೇ ಹಾಕುವುದಿಲ್ಲ. ವರ್ಷಕ್ಕೊಮ್ಮೆ ಊರಿಗೆ ಹೋಗ್ತೀವಿ. ಹೋಗುವಾಗಿನ ಸಂಭ್ರಮ ಬರೋವಾಗ ಇರುವುದಿಲ್ಲ. ಮನಸಿಟ್ಟು ಕೆಲಸ ಮಾಡಬೇಕು. ಜಾಸ್ತಿ ಸಂಬಳ ಪಡೆಯಬೇಕು ಇವಿಷ್ಟೇ ನಮ್ಮ ವೃತ್ತಿಪರ ಶಿಸ್ತು. ಬೇರೆಲ್ಲ ಯೋಚನೆಗಳು ನಗಣ್ಯ’ ಎಂದ ರೀತಾ ಮಾತು ಮತ್ತು ಆ ನಂತರದ ಮೌನದಲ್ಲೇ ಸ್ವಾಭಿಮಾನದ ದಿಟ್ಟ ನಿಲುವಿತ್ತು. ಅಗತ್ಯ ಶ್ರಮ, ಶಿಸ್ತಿನ ಸನ್ನಡೆ ಬದುಕಿನ ಭದ್ರತೆಗೆ ಅಡಿಪಾಯ ಎನ್ನುವುದನ್ನು ಧ್ವನಿಸುತ್ತಿತ್ತು.

ಮಹಿಳಾ ದಿನ ಗೊತ್ತಿಲ್ಲ
ನಿತ್ಯವೂ ಬ್ರಿಗೇಡ್ ರಸ್ತೆಯ ಅಂಗಡಿಯೊಂದರಲ್ಲಿ ಕೆಲಸಕ್ಕೆ ಬರ್ತೇನೆ. ಬೆಳಿಗ್ಗೆ 11ರಿಂದ ರಾತ್ರಿ 9ರವರೆಗೆ ಕೆಲಸ. ವಾರಾಂತ್ಯದಲ್ಲಿ ರಾತ್ರಿ 9.30ರ ತನಕ ಕೆಲಸವಿರುತ್ತೆ. ನಮಗೆ ವಾರದ ರಜೆ ಇರಲ್ಲ. ಮನೆ ಅಶೋಕ ನಗರದಲ್ಲಿದೆ. ಬ್ರಿಗೇಡ್ ರಸ್ತೆ, ಅಶೋಕನಗರ ಬಿಟ್ಟರೆ ಬೆಂಗಳೂರಿನಲ್ಲಿ ಬೇರೆ ಜಾಗಗಳು ಗೊತ್ತೇ ಇಲ್ಲ. ಒಮ್ಮೆಮ್ಮೊ ಅಂಗಡಿಯೇ ಮನೆಯಂತೆ ಭಾಸವಾಗುತ್ತೆ! ಅನ್ನುತ್ತಾರೆ ಡಾರ್ಜಲಿಂಗ್‌ನಿಂದ ಬಂದಿರುವ ಟ್ರೈಫೀನಾ.

ನಮಗೆ ಮಹಿಳಾ ದಿನ ಅಂದ್ರೇನು ಅಂತ ಗೊತ್ತಿಲ್ಲ. ಮಹಿಳೆಯರಿಗೂ ಒಂದು ದಿನವಿದೆ ಅಂತ ನೀವು ಹೇಳಿದ ಮೇಲೆ ಗೊತ್ತಾಯ್ತು. ನಮಗೆ ಕೆಲಸ ಮಾಡುವುದಷ್ಟೆ ಗೊತ್ತು. ಅಂಗಡಿ ಮಾಲೀಕ ಹೇಳಿದಂತೆ ಕೆಲಸ ಮಾಡಿಕೊಂಡು, ಮನೆಗೆ ನಮ್ಮ ಸಂಬಳ ಹಣ ಕಳಿಸಿದರೆ ಮಾತ್ರ ನಮ್ಮ ಬದುಕು ನಡೆಯೋದು ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !