ವಾಣಿವಿಲಾಸ: ನಗರ ತಾಯಂದಿರ ಜನ್ಮಸ್ಥಳ ಆ ಮೊದಲ ಬೆಳ್ಳಿ ಬಟ್ಟಲು..

ಸೋಮವಾರ, ಮಾರ್ಚ್ 25, 2019
24 °C

ವಾಣಿವಿಲಾಸ: ನಗರ ತಾಯಂದಿರ ಜನ್ಮಸ್ಥಳ ಆ ಮೊದಲ ಬೆಳ್ಳಿ ಬಟ್ಟಲು..

Published:
Updated:

ಅದು 1935ರ ಮಾರ್ಚ್‌ ತಿಂಗಳು. ಬೆಂಗಳೂರಿಗೆ ಮೊದಲ ಹೆರಿಗೆ ಆಸ್ಪತ್ರೆಯೊಂದು ಶುರುವಾದ ವರ್ಷ. ಅದಕ್ಕೂ ಮುಖ್ಯ ಸಂಗತಿ ಎಂದರೆ ಅವತ್ತು ಮಾರ್ಚ್‌ 8ನೇ ತಾರೀಖು. ವಿಶ್ವ ಮಹಿಳಾ ದಿನ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಅರ್ಥಪೂರ್ಣ ದೂರದೃಷ್ಟಿ, ಪ್ರಗತಿಪರ ನಿಲುವು ಮತ್ತು ಮಹಿಳಾಪರ ನಿಲುವಿಗೆ ಎಂಥ ದೊಡ್ಡ ಸಾಕ್ಷಿ!  

ಬೆಂಗಳೂರಿನ ವಾಣಿವಿಲಾಸ ಹೆರಿಗೆ ಆಸ್ಪತ್ರೆಯ ಪ್ರಾರಂಭೋತ್ಸವವನ್ನು 1935ರ ಮಾರ್ಚ್‌ 8 ಶುಕ್ರವಾರ ಅಂತರರಾಷ್ಟ್ರೀಯ ಮಹಿಳಾ ದಿನದಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೆರವೇರಿಸಿದರು. ಅವರ ತಾಯಿ ಮಹಾರಾಣಿ ವಾಣಿವಿಲಾಸ ಅವರ ಹೆಸರನ್ನು ಈ ಆಸ್ಪತ್ರೆಗೆ ಇಡಲಾಯಿತು. ಈ ಹೊಸ ಆಸ್ಪತ್ರೆಯಲ್ಲಿ ಜನಿಸಿದ ಮೊದಲನೇ ಮಗುವಿನ ತಾಯಿಗೆ ಒಂದು ಬೆಳ್ಳಿಯ ಬಟ್ಟಲನ್ನು ಕಾಣಿಕೆಯಾಗಿ ನೀಡಲು ಆಸ್ಪತ್ರೆಯ ಅಧಿಕಾರಿಗಳು ಏರ್ಪಾಡು ಮಾಡಿದ್ದರು. ಆಸ್ಪತ್ರೆ ಪ್ರಾರಂಭದಲ್ಲಿ ದಾಖಲಾದ ಏಳು ಮಂದಿ ಗರ್ಣಿಭಿಯರ ಪೈಕಿ ಕಮಲಮ್ಮ ಎನ್ನುವವರು 1935ರ ಮಾರ್ಚ್‌ 11, ಸೋಮವಾರದಂದು ಹೆಣ್ಣು ಮಗುವಿಗೆ ಜನ್ಮ ನೀಡಿ ಬೆಳ್ಳಿ ಬಟ್ಟಲು ಬಹುಮಾನ ತಮ್ಮದಾಗಿಸಿಕೊಂಡರು.

ಪ್ರಾರಂಭದಲ್ಲಿ ಸ್ತ್ರೀಯರಿಗೆ 150 ಮತ್ತು ಮಕ್ಕಳಿಗೆ 100 ಹಾಸಿಗೆಗಳ ಸೌಲಭ್ಯವಿತ್ತು. ಈಗ ಸ್ತ್ರೀಯರಿಗೆ 400, ಕುಟುಂಬ ನಿಯಂತ್ರಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ 20 ಮತ್ತು ಮಕ್ಕಳಿಗೆ 80 ಹಾಗೂ ಮಕ್ಕಳ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಕಾಯಿಲೆಗಳಿಗೆ 36 ಹಾಸಿಗೆಗಳು ಲಭ್ಯವಿದೆ.

ಹೆಸರಾಂತ ತಮಿಳು ಸೂಪರ್‌ಸ್ಟಾರ್‌ ರಜನೀಕಾಂತ್‌ ಹುಟ್ಟಿದ್ದು (ಡಿಸೆಂಬರ್‌ 12, 1950) ಇದೇ ಆಸ್ಪತ್ರೆಯಲ್ಲಿ.

ಒಬ್ಬ ಹೆಣ್ಣುಮಗಳು ಮಗುವಿಗೆ ಜನ್ಮ ನೀಡುವ ಮೂಲಕ ಅಂದೇ ತಾಯಿಯಾಗಿ ಅವಳಿಗೂ ಜನ್ಮದಿನವಲ್ಲವೇ? ಈ ಅರ್ಥದಲ್ಲಿ ವಾಣಿ ವಿಲಾಸ್‌ ಆಸ್ಪತ್ರೆ ಹಲವು ತಾಯಂದಿರ ಜನ್ಮಸ್ಥಳ!

ಕೇವಲ ನಾಲ್ಕು ಲಕ್ಷ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಗೊಂಡಿದ್ದು. 2002ರಲ್ಲಿ ಇದರ ನವೀಕರಣಕ್ಕೆ ಖರ್ಚಾಗಿದ್ದು 4.2 ಕೋಟಿ ರೂಪಾಯಿಗಳು. ಇದು ಫೋರ್ಟ್‌ ಚರ್ಚ್‌ ಮತ್ತು ಫೋರ್ಟ್‌ ರುದ್ರಭೂಮಿಗೆ ಸೇರಿದ ಜಾಗವಾಗಿತ್ತು. ಚರ್ಚ್‌ ಆಫ್‌ ಇಂಗ್ಲೆಂಡ್‌ ಆಗಿನ ಮೈಸೂರು ಸರ್ಕಾರದಿಂದ ಈ ಭೂಮಿಯನ್ನು ವಶಪಡಿಸಿಕೊಂಡಿತ್ತು. ಇದಕ್ಕೆ ಪರಿಹಾರವಾಗಿ ಚಾಮರಾಜಪೇಟೆಯ ಹರ್ಡಿಂಗೆ (ಜೆ) ರಸ್ತೆ ಸಮೀಪದ ಜಾಗವನ್ನು ನೀಡಲಾಯಿತು. ಈಗ ಅಲ್ಲಿ ಸೇಂಟ್‌ ಲ್ಯೂಕ್‌ ಚರ್ಚ್‌ ಇದೆ.

ಮಾಹಿತಿ ಆಧಾರ: 1. ‘ವೃತ್ತಾಂತ ಪತ್ರಿಕೆ,’ 21 ಮಾರ್ಚ್‌, 1935, ಪುಟ-6. 2. ‘ಬೆಂಗಳೂರು ದರ್ಶನ’, ಸಂಪುಟ-2, ಪುಟ- 532.


ಮಕ್ಕಳಿಗಾಗಿ ಹೊಸ ವಿಭಾಗವೊಂದನ್ನು 1964ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಲೋಕಾರ್ಪಣೆಗೊಳಿಸಿದರು. ಆರೋಗ್ಯ ಸಚಿವ ನಾಗಪ್ಪ ಆಳ್ವ ಅವರನ್ನೂ ಕಾಣಬಹುದು

 


ವಾಣೀವಿಲಾಸ ಆಸ್ಪತ್ರೆ ಉದ್ಘಾಟನೆಯ ಸಾಕ್ಷಿಗಲ್ಲು

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !