ಮಂಗಳವಾರ, ಅಕ್ಟೋಬರ್ 15, 2019
29 °C
ಸುಮಾರು 54 ಗಂಟೆಗಳ ವಿಚಾರಣೆ

ಜಿ.ಎಚ್.ನಾಗರಾಜ್ ಮನೆ ಮೇಲೆ ಐಟಿ ದಾಳಿ: ತನಿಖೆ ಮುಕ್ತಾಯ

Published:
Updated:

ಚಿಕ್ಕಬಳ್ಳಾಪುರ: ನಗರದ ಪ್ರಶಾಂತ್ ನಗರದಲ್ಲಿರುವ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಸೋದರಳಿಯ ಜಿ.ಎಚ್.ನಾಗರಾಜ್ ಅವರ ಮನೆಯಲ್ಲಿ ಗುರುವಾರ ಬೆಳಿಗ್ಗೆಯಿಂದ ಕೈಗೊಂಡಿದ್ದ ತಪಾಸಣೆ ಕಾರ್ಯವನ್ನು ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಶನಿವಾರ ಮಧ್ಯಾಹ್ನ ಮುಕ್ತಾಯಗೊಳಿಸಿದರು. 

ಗುರುವಾರ ಬೆಳಿಗ್ಗೆ 8 ರಿಂದ ಐಟಿ ಅಧಿಕಾರಿಗಳು ಕೈಗೆತ್ತಿಕೊಂಡಿದ್ದ ನಾಗರಾಜ್ ಅವರ ಹಣಕಾಸು ವ್ಯವಹಾರ, ಆಸ್ತಿಗಳು, ಆದಾಯ, ತೆರಿಗೆ ಪಾವತಿಗೆ ಸಂಬಂಧಿಸಿದ ದಾಖಲೆಗಳನ್ನು ಕಲೆ ಹಾಕುವ ಕಾರ್ಯ ಸುಮಾರು 54 ತಾಸುಗಳ ಬಳಿಕ ಮುಕ್ತಾಯವಾಯಿತು. ಮಧ್ಯಾಹ್ನ 1.55ರ ಸುಮಾರಿಗೆ ಅಧಿಕಾರಿಗಳು ನಾಗರಾಜ್ ಅವರ ಮನೆಯಿಂದ ನಿರ್ಗಮಿಸಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜ್, ‘ನಮ್ಮ ಮನೆಯಲ್ಲಿ ನಮ್ಮ ವ್ಯವಹಾರಕ್ಕೆ ಸಂಬಂಧಿಸಿದ ₹12.39 ಲಕ್ಷ ನಗದು ಇತ್ತು. ಸರಿಯಾದ ಲೆಕ್ಕ ನೀಡುವಂತೆ ಅದರಲ್ಲಿ ₹10 ಲಕ್ಷ ಮಾತ್ರ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ನಮ್ಮಲ್ಲಿ ನಾಲ್ಕು ಕೆ.ಜಿ ಚಿನ್ನ ಇದೆ. ನಾವು ಪ್ರತಿಯೊಂದು ವ್ಯವಹಾರಕ್ಕೆ ಪಾರದರ್ಶಕ ಲೆಕ್ಕವಿಟ್ಟಿದ್ದೇವೆ. ಬಂಗಾರ, ಆಸ್ತಿಗಳಿಗೆ ದಾಖಲೆಗಳನ್ನು ಇಟ್ಟಿದ್ದೇವೆ. ಹೀಗಾಗಿ ಅಧಿಕಾರಿಗಳು ಉಳಿದಂತೆ ಏನನ್ನು ತೆಗೆದುಕೊಂಡು ಹೋಗಿಲ್ಲ’ ಎಂದು ತಿಳಿಸಿದರು.

‘ಒಂದೇ ದಿನದಲ್ಲಿ ಪರಿಶೀಲನೆ ಕಾರ್ಯ ಮುಗಿಸಬಹುದಿತ್ತು. ಹಿಂದೆಲ್ಲ ಬೆಳಿಗ್ಗೆ ಬಂಂದ ಅಧಿಕಾರಿಗಳು ಸಂಜೆ ಹೊತ್ತಿಗೆ ವಾಪಾಸಾಗಿದ್ದಾರೆ. ಈಗಲೂ ಶುಕ್ರವಾರವೇ ತನಿಖೆ ಮುಗಿದಿದೆ. ಆದರೂ ಅಧಿಕಾರಿಗಳು ಸುಮ್ಮನೇ ಅದು ಇದು ಲೆಕ್ಕ ಕೇಳುತ್ತ ದಿನದೂಡಿದ್ದಾರೆ. ಅದಕ್ಕಾಗಿ ನಾನು ಗಲಾಟೆ ಕೂಡ ಮಾಡಿದ್ದೇನೆ. ನಮಗೆ ಕಿರುಕುಳು ನೀಡಬೇಕು ಎನ್ನುವ ಉದ್ದೇಶಕ್ಕೆ ಮೂರು ದಿನ ಸುಮ್ಮನೆ ಕೆದಕುವ ಕೆಲಸ ಮಾಡಿದ್ದಾರೆ’ ಎಂದು ಆರೋಪಿಸಿದರು. 

‘ನಾನು ಈ ತನಿಖೆಗೆ ಹೆದರಿಕೊಂಡಿಲ್ಲ. ಸರಿಯಾದ ಸಮಯಕ್ಕೆ ಊಟ, ನಿದ್ದೆ ಮಾಡಿಕೊಂಡು ಆರಾಮದಿಂದ ಇದ್ದೆ. ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡಿದ್ದೇವೆ. ಬೇಸರವಿಲ್ಲದೆ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದೇವೆ. ನಮ್ಮ ಮನೆಯಲ್ಲಾಗಲಿ, ಸಂಸ್ಥೆಯಲ್ಲಿ ಆಗಲಿ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ’ ಎಂದು ಹೇಳಿದರು. 

‘ಅಧಿಕಾರಿಗಳು ಖುಷಿಯಾಗಿಯೇ ವರದಿ ಕೊಟ್ಟು ಹೋಗಿದ್ದಾರೆ. ಮುಂದೆ ಏನಾಗುತ್ತೋ ನೋಡೋಣ. ಅ.15 ರಂದು ಬೆಂಗಳೂರಿನ ಪ್ರಧಾನ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ತನಿಖೆ ಸಂಪೂರ್ಣ ಮುಗಿಯಲಿ. ಬಳಿಕ ನಾನೇ ಪತ್ರಿಕಾಗೋಷ್ಠಿ ಕರೆದು ಮಾತನಾಡುವೆ. ಇದು ನಿಜವಾಗಿ ಹೇಯವಾದದ್ದು. ಡಿ.ಕೆ.ಶಿವಕುಮಾರ್ ಅವರು ಇಂತಹದ್ದನ್ನೆಲ್ಲ ಹೇಗೆ ಸಹಿಸಿಕೊಂಡರೋ? ನಿಜಕ್ಕೂ ಅವರನ್ನು ಮೆಚ್ಚಬೇಕು’ ಎಂದು ತಿಳಿಸಿದರು.

Post Comments (+)