ಸೋಮವಾರ, ನವೆಂಬರ್ 18, 2019
27 °C

ವರ್ಗಾವಣೆ ಆದೇಶ ಪ್ರಶ್ನಿಸಿ ಗೆದ್ದ ಡಿಸಿಪಿ: ಆದೇಶ ರದ್ದುಪಡಿಸಿದ ಗೃಹ ಇಲಾಖೆ

Published:
Updated:

ಬೆಂಗಳೂರು: ಪಶ್ಚಿಮ ವಿಭಾಗದ ಡಿಸಿಪಿ ಬಿ. ರಮೇಶ್ ಅವರನ್ನು ವರ್ಗಾವಣೆ ಮಾಡಿ ಗೃಹ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಸೋಮವಾರ ತಡೆಯಾಜ್ಞೆ ನೀಡಿದೆ. ಸಿಎಟಿ ಆದೇಶ ಹೊರಬೀಳುತ್ತಿದ್ದಂತೆ ವರ್ಗಾವಣೆ ಆದೇಶವನ್ನೇ ಗೃಹ ಇಲಾಖೆ ರದ್ದುಪಡಿಸಿದೆ.

ರಾಮನಗರ ಜಿಲ್ಲಾ ಎಸ್ಪಿ ಆಗಿದ್ದ ಬಿ. ರಮೇಶ್ ಅವರನ್ನು ಐದು ತಿಂಗಳ ಹಿಂದೆ ಪಶ್ಚಿಮ ವಿಭಾಗದ ಡಿಸಿಪಿ ಆಗಿ ವರ್ಗಾವಣೆ ಮಾಡಲಾಗಿತ್ತು. ಈ ನಡುವೆಯೇ ಅವರನ್ನು ಕೆಎಸ್ಆರ್‌ಪಿ 9ನೇ ಬೆಟಾಲಿಯನ್‌ ಕಮಾಂಡೆಂಟ್ ಆಗಿ ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಎಸ್‌. ಗಿರೀಶ್ ಅವರನ್ನು ನೇಮಿಸಿ ಶನಿವಾರ ಆದೇಶ ಹೊರಡಿಸಲಾಗಿತ್ತು.

ವರ್ಗಾವಣೆ ಆದೇಶ ಪ್ರಶ್ನಿಸಿದ್ದ ರಮೇಶ್, ‘ನೇಮಕಾತಿ ನಿಯಮಗಳನ್ನು ಉಲ್ಲಂಘಿಸಿ ವರ್ಷಕ್ಕೂ ಮುನ್ನವೇ ನನ್ನನ್ನು ವರ್ಗಾವಣೆ ಮಾಡಲಾಗಿದೆ. ಈ ಆದೇಶವನ್ನು ರದ್ದುಪಡಿಸಬೇಕು’ ಎಂದು ಕೋರಿ ಸಿಎಟಿಗೆ ಸೋಮವಾರ ಬೆಳಿಗ್ಗೆ ಅರ್ಜಿ ಸಲ್ಲಿಸಿದ್ದರು. ಮಧ್ಯಾಹ್ನವೇ ಅರ್ಜಿ ವಿಚಾರಣೆ ನಡೆಸಿದ ಸಿಎಟಿ, ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಮುಂದಿನ ವಿಚಾರಣೆಯನ್ನು ನವೆಂಬರ್ 18ಕ್ಕೆ ಮುಂದೂಡಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ರಮೇಶ್, ‘ಸಿಎಟಿಯಲ್ಲಿ ನನ್ನ ಪರ ಆದೇಶ ಬಂದಿದೆ. ಗೃಹ ಇಲಾಖೆ ಬಗ್ಗೆ ಹೆಚ್ಚು ಮಾತನಾಡಲಾರೆ’ ಎಂದರು.

‘ಶನಿವಾರ ರಾತ್ರಿ ವರ್ಗಾವಣೆ ಆದೇಶ ಹೊರಬಿದ್ದಿತ್ತು. ಭಾನುವಾರ ರಜೆ ದಿನವಾಗಿದ್ದರಿಂದ ಅರ್ಜಿ ಸಲ್ಲಿಸಲು ಆಗಿರಲಿಲ್ಲ. ಸೋಮವಾರ ಬೆಳಿಗ್ಗೆ ಅರ್ಜಿ ಸಲ್ಲಿಸಿದ್ದೆ. ಇದೀಗ ವರ್ಗಾವಣೆ ಆದೇಶವನ್ನೇ ಇಲಾಖೆ ರದ್ದುಪಡಿಸಿದ್ದು, ಪಶ್ಚಿಮ ವಿಭಾಗದ ಡಿಸಿಪಿ ಆಗಿ ಮುಂದುವರಿಯಲಿದ್ದೇನೆ’ ಎಂದರು.

ಪ್ರತಿಕ್ರಿಯಿಸಿ (+)