ಬುಧವಾರ, ಫೆಬ್ರವರಿ 26, 2020
19 °C
10 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಐಪಿಎಸ್‌ ವರ್ಗಾವಣೆ ಪರ್ವ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೋಸ್ತಿ ಸರ್ಕಾರದ ಮಿತ್ರರ ನಡುವಿನ ಮನಸ್ತಾಪದ ನಡುವೆಯೇ ಐಪಿಎಸ್‌ ವರ್ಗಾವಣೆ ಪರ್ವ ಶುರುವಾಗಿದ್ದು, ಮೊದಲ ಹಂತದಲ್ಲಿ ಹತ್ತು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಲಾಗಿದೆ.

ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ನಂಬಿಕಸ್ಥ ಅಧಿಕಾರಿ ಎನ್ನಲಾದ ಕೆ.ವಿ.ಶರತ್‌ಚಂದ್ರ ಅವರನ್ನು ದಕ್ಷಿಣ ವಲಯದ (ಮೈಸೂರು) ಐಜಿಪಿ ಹುದ್ದೆಗೆ ವರ್ಗಾಯಿಸಲಾಗಿದೆ. ಮೈಸೂರಿನವರೇ ಆದ ಶರತ್‌ಚಂದ್ರ, ಹಿಂದೆ ಜೆಡಿಎಸ್ ಸರ್ಕಾರದ ಆಡಳಿತಾವಧಿಯಲ್ಲಿ ಹಾಸನದ ಎಸ್ಪಿಯಾಗಿ ಹಾಗೂ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಆ ನಂತರ ಅವರಿಗೆ ಪ್ರಮುಖ ಹುದ್ದೆಗಳು ಸಿಕ್ಕಿರಲಿಲ್ಲ.

ರಾಜ್ಯದಲ್ಲಿ ಮೂರೂ ಪಕ್ಷಗಳ ನಾಯಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವ ಎಸ್ಪಿ ಡಿ.ದೇವರಾಜ್, ಬೆಂಗಳೂರು ಕೇಂದ್ರ ವಿಭಾಗಕ್ಕೆ ವರ್ಗವಾಗಿದ್ದಾರೆ. ಬೀದರ್ ಎಸ್ಪಿಯಾಗಿದ್ದ ಅವರನ್ನು, ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರ ರಚಿಸಿದ್ದ ಮೊದಲೇ ದಿನವೇ ಬೆಂಗಳೂರಿಗೆ ವರ್ಗಾವಣೆ ಮಾಡಿದ್ದರು. ಆದರೆ, ಬಿಜೆಪಿ ಅಧಿಕಾರ ಕಳೆದುಕೊಂಡ ಕೂಡಲೇ ಆ ಆದೇಶವೂ ರದ್ದಾಗಿತ್ತು. ಈಗ ಅದೇ ಸ್ಥಾನಕ್ಕೆ ದೇವರಾಜ್ ವರ್ಗವಾಗಿದ್ದಾರೆ.

ಡಿಐಜಿ ರೇವಣ್ಣ ಬೆಂಗಳೂರು ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ, ಹಾಲಿ ಆ ಹುದ್ದೆ ನಿಭಾಯಿಸುತ್ತಿರುವ ಸತೀಶ್‌ ಕುಮಾರ್ ಬೆನ್ನಿಗೆ ಕಾಂಗ್ರೆಸ್‌ನ ಪ್ರಭಾವಿ ಸಚಿವ ಕೆ.ಜೆ.ಜಾರ್ಜ್‌ ನಿಂತಿದ್ದಾರೆ. ಇದರಿಂದಾಗಿ ರೇವಣ್ಣ ಅವರಿಗೆ ಆ ಹುದ್ದೆ ಕೈತಪ್ಪಿದೆ ಎಂದು ಇಲಾಖೆ ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಸೋಮವಾರ ಪೊಲೀಸ್ ಸಿಬ್ಬಂದಿ ಮಂಡಳಿ (ಪಿಇಬಿ) ಸಭೆ ನಡೆಸಿ, ವರ್ಗಾವಣೆ ಆದೇಶ ಅಂತಿಮಗೊಳಿಸಿದ್ದಾರೆ. ‘ಹಂತ ಹಂತವಾಗಿ ಐಪಿಎಸ್ ವರ್ಗಾವಣೆ ನಡೆಯಲಿದೆ. ಬೆಂಗಳೂರು ಹಾಗೂ ಮೈಸೂರು ಕಮಿಷನರ್ ಬದಲಾವಣೆ ಸಂಬಂಧ ಚರ್ಚೆ ನಡೆದಿಲ್ಲ’ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

***

ಯಾರು ಎಲ್ಲಿಗೆ?
ಅಲಿಕಾನ ಎಸ್‌.ಮೂರ್ತಿ– ಡಿಜಿಪಿ, ರಾಜ್ಯ ಮಾನವ ಹಕ್ಕುಗಳು

ಎಸ್‌.ಮುರುಗನ್‌– ಐಜಿಪಿ, ಕರ್ನಾಟಕ ಲೋಕಾಯುಕ್ತ

ಕೆ.ವಿ.ಶರತ್‌ಚಂದ್ರ–  ಐಜಿಪಿ, ದಕ್ಷಿಣ ವಲಯ, ಮೈಸೂರು

ಮನೀಷ್‌ ಖರ್ಬಿಕರ್‌– ಐಜಿಪಿ, ಈಶಾನ್ಯ ವಲಯ, ಕಲಬುರ್ಗಿ

ಸೌಮೇಂದು ಮುಖರ್ಜಿ– ಐಜಿಪಿ, ಆಂತರಿಕ ಭದ್ರತಾ ವಿಭಾಗ

ಎಂ.ಚಂದ್ರಶೇಖರ್‌– ಐಜಿಪಿ, ಎಸ್‌ಐಟಿ, ಕರ್ನಾಟಕ ಲೋಕಾಯುಕ್ತ, ಬೆಂಗಳೂರು

ಎಚ್‌.ಎಸ್‌.ರೇವಣ್ಣ– ಡಿಐಜಿಪಿ , ಅಗ್ನಿ ಶಾಮಕ ಸೇವೆ, ಬೆಂಗಳೂರು

ಡಾ.ಚಂದ್ರಗುಪ್ತ– ಡಿಸಿಪಿ, ಸಂಚಾರ ವಿಭಾಗ, ಪಶ್ಚಿಮ, ಬೆಂಗಳೂರು

ಡಿ.ದೇವರಾಜ– ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು ನಗರ

ಟಿ.ಶ್ರೀಧರ– ಎಸ್ಪಿ, ಬೀದರ್‌

 

 

 

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು