ಭಾನುವಾರ, ಆಗಸ್ಟ್ 25, 2019
20 °C

ಪ್ರವಾಹ: ತ್ವರಿತ ವಿಮೆ ಪರಿಹಾರಕ್ಕೆ ಸೂಚನೆ

Published:
Updated:

ಬೆಂಗಳೂರು: ಪ್ರವಾಹ ಸಂತ್ರಸ್ತರು ಎದುರಿಸುತ್ತಿರುವ ಸಂಕಷ್ಟದ ತೀವ್ರತೆ ತಗ್ಗಿಸಲು ಜೀವ, ಆಸ್ತಿ–ಪಾಸ್ತಿ ವಿಮೆ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ವಿಮೆ ಸಂಸ್ಥೆಗಳಿಗೆ ತಾಕೀತು ಮಾಡಿದೆ.

ಕರ್ನಾಟಕದಲ್ಲಿ ಮಳೆ ಸೃಷ್ಟಿಸಿರುವ ಅಪಾರ ನಷ್ಟದ ಹಿನ್ನೆಲೆಯಲ್ಲಿ ವಿಮೆ ಪರಿಹಾರ ಪ್ರಕರಣಗಳನ್ನು ನೋಂದಾಯಿಸಿಕೊಳ್ಳಲು ಮತ್ತು ಪರಿಹಾರ ಧನ ವಿತರಿಸಲು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಸಾಮಾನ್ಯ ಮತ್ತು ಆರೋಗ್ಯ ವಿಮೆ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

ಪರಿಹಾರ ನೀಡುವ ಪ್ರಕರಣಗಳನ್ನು ತ್ವರಿತವಾಗಿ ಬಗೆಹರಿಸಲು ಸಮನ್ವಯ ಅಧಿಕಾರಿಗಳನ್ನು ನೇಮಕ ಮಾಡಬೇಕು. ಸಾವಿನ ಮತ್ತು ಮೃತದೇಹ ಪತ್ತೆಯಾಗದ ಪ್ರಕರಣಗಳಲ್ಲಿ, ಪ್ರವಾಹ ಪರಿಸ್ಥಿತಿಗೆ ಗುರಿಯಾಗಿದ್ದ ಇತರ ರಾಜ್ಯಗಳಲ್ಲಿನ ಈ ಹಿಂದಿನ ಮಾದರಿ ಅನುಸರಿಸಬೇಕು.

ಪರಿಹಾರ ವಿತರಣೆ ಸಂಬಂಧ ಸಂಪರ್ಕಿಸಬೇಕಾದ ಅಧಿಕಾರಿಗಳು, ವಿಶೇಷ ಶಿಬಿರಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಪ್ರವಾಹಪೀಡಿತ ಪ್ರದೇಶಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಸಮೀಕ್ಷಾ ಅಧಿಕಾರಿಗಳನ್ನು ಕಳಿಸಿಕೊಡಬೇಕು. ಪರಿಹಾರ ಪ್ರಕರಣಗಳ ಬಗ್ಗೆ ಪ್ರತಿ ನಿತ್ಯ ವರದಿ ಮಾಡಬೇಕು ಎಂದು ಮಾರ್ಗದರ್ಶಿ ಸೂತ್ರಗಳಲ್ಲಿ ತಿಳಿಸಲಾಗಿದೆ.

Post Comments (+)