ಸೋಮವಾರ, ಜೂಲೈ 6, 2020
22 °C
ಕೋವಿಡ್‌ಗೆ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ನಿಧಿ ಬಳಕೆ

ವಿಲೇವಾರಿಯಾಗದ ಕಬ್ಬಿಣ ಅದಿರು ಮಾರಾಟಕ್ಕೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ‘ಸಿ’ ವರ್ಗದ ಗಣಿಗಳಲ್ಲಿ ಈ ಹಿಂದೆ 8 ದಶಲಕ್ಷ ಟನ್‌ ಕಬ್ಬಿಣದ ಅದಿರು ತೆಗೆದಿದ್ದು, ಸರ್ಕಾರದ ಆದಾಯ ಹೆಚ್ಚಿಸುವ ಉದ್ದೇಶದಿಂದ ಅದನ್ನು ಮಾರಾಟ ಮಾಡುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿದ್ದ ‘ಸಿ’ ವರ್ಗದ ಗಣಿ ಗುತ್ತಿಗೆಗಳನ್ನು ಸುಪ್ರೀಂಕೋರ್ಟ್‌ 2016 ರಲ್ಲಿ ರದ್ದು ಮಾಡಿತ್ತು. ಆ ಸಂದರ್ಭದಲ್ಲಿ ಸರ್ಕಾರ ಅದಿರನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಅದರಿಂದ ಅದಿರು ಮಾರಾಟವಾಗದೇ ಉಳಿದಿತ್ತು. ಈಗ ಮಾರಾಟಕ್ಕೆ ಇರುವ ತಾಂತ್ರಿಕ ತೊಂದರೆಗಳ ನಿವಾರಣೆ ಸಂಬಂಧ ಮಹಾಲೇಖಪಾಲರ ಜತೆ ಚರ್ಚಿಸಲು ಅಧಿಕಾರಿಗಳಿಗೆ ಯಡಿಯೂರಪ್ಪ ಸೂಚಿಸಿದರು.

ರಾಜ್ಯದಲ್ಲಿ ಪರವಾನಗಿ ಇಲ್ಲದೆ, ಅಕ್ರಮ ಕಲ್ಲು ಗಣಿಗಾರಿಕೆ ಮಾಡುತ್ತಿರುವುದನ್ನು ತಡೆಯಲು ಡ್ರೋನ್‌ ಮೂಲಕ ಸರ್ವೇ ಮಾಡಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದಾಗಿಯೂ ಮುಖ್ಯಮಂತ್ರಿ ಭರವಸೆ ನೀಡಿದರು.

ಅಲ್ಲದೆ, ಅರಣ್ಯ ಪ್ರದೇಶದಲ್ಲಿ ಕಬ್ಬಿಣ ಅದಿರಿನ  ಪತ್ತೆಗೆ ಶೀಘ್ರವಾಗಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಅನ್ವೇಷಣೆ ಕಾರ್ಯ ಕೈಗೊಳ್ಳುವಂತೆಯೂ ಸೂಚಿಸಿದರು.

ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಮತ್ತು ಜನರ ಜೀವನ ಮಟ್ಟ ಉತ್ತಮಪಡಿಸಲು ಗುತ್ತಿಗೆದಾರರಿಂದ ರಾಜಧನದ ರೂಪದಲ್ಲಿ ₹1,928 ಕೋಟಿ ಸಂಗ್ರಹವಾಗಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೋವಿಡ್‌–19 ಸೋಂಕು ತಡೆಗಾಗಿ ಈ ಮೊತ್ತ ಬಳಸಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ ಹೇಳಿದರು.

ರಾಜ್ಯದಲ್ಲಿ ಅಂದಾಜು 45ದಶಲಕ್ಷ ಮೆಟ್ರಿಕ್‌ ಟನ್‌ ಮರಳಿಗೆ ಬೇಡಿಕೆ ಇದೆ. 35 ದಶಲಕ್ಷ ಟನ್‌ ಪೂರೈಕೆ ಮಾಡಲಾಗುತ್ತಿದೆ. ಹೊಸ ಮರಳು ನೀತಿ ಅನುಷ್ಠಾನದಿಂದ ಸರ್ಕಾರಕ್ಕೆ ಹೆಚ್ಚಿನ ರಾಜಧನ ಸಂಗ್ರಹವಾಗಲಿದೆ ಎಂದು ತಿಳಿಸಿದರು.

ಕೆಎಂಎಂಸಿಆರ್‌ ನಿಯಮಾವಳಿಗಳ ತಿದ್ದುಪಡಿ ನಂತರ ಬಾಕಿ ಇರುವ ಅರ್ಹ ಅರ್ಜಿಗಳಿಗೆ ಗಣಿ ಗುತ್ತಿಗೆಗಳ ಮಂಜೂರಾತಿ ಮತ್ತು ಹರಾಜು ಮೂಲಕ ಕಟ್ಟಡ ಕಲ್ಲು ಗಣಿಗಾರಿಕೆಗೆ ಗುತ್ತಿಗೆ ಮಂಜೂರಾತಿ ನೀಡಲಾಗುವುದು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು