ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಗೋಪಾಲಕೃಷ್ಣ ಕೆರೆಯಲ್ಲಿ ಮೀನುಗಳ ಮಾರಣಹೋಮ

ಆಮ್ಲಜನಕದ ಕೊರತೆ, ಸಂಸ್ಕರಣೆಯಾಗದ ತ್ಯಾಜ್ಯ ನೀರಿನಿಂದ ಮತ್ಸ್ಯಗಳ ಸಾವು
Last Updated 25 ಡಿಸೆಂಬರ್ 2018, 19:57 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರ ಹೊರವಲಯ ರಾಷ್ಟ್ರೀಯ ಹೆದ್ದಾರಿ–7ಕ್ಕೆ ಹೊಂದಿಕೊಂಡಿರುವ ಅಮಾನಿ ಗೋಪಾಲಕೃಷ್ಣ ಕೆರೆ ಅಂಗಳದ ದೊಡ್ಡ ಕುಂಟೆಯಲ್ಲಿ ನಾಲ್ಕೈದು ದಿನಗಳಲ್ಲಿ ಸಾವಿರಾರು ಮೀನುಗಳು ಸತ್ತಿವೆ. ಇದರಿಂದ ಗುತ್ತಿಗೆದಾರರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಮೀನುಗಳ ಮಾರಣಹೋಮಕ್ಕೆ ಆಮ್ಲಜನಕದ ಕೊರತೆ ಕಾರಣ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಗುತ್ತಿಗೆದಾರರು ಕೆರೆ ಸಮೀಪದ ನಗರಸಭೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಸಂಸ್ಕರಣೆಯಾಗದ ಕೊಳಚೆ ನೀರು ಕಾರಣ ಎಂದು ಆರೋಪಿಸಿದ್ದಾರೆ.

ಸಣ್ಣ ನೀರಾವರಿ ಇಲಾಖೆ ಉಸ್ತುವಾರಿಯಲ್ಲಿರುವ ಅಮಾನಿ ಗೋಪಾಲಕೃಷ್ಣ ಕೆರೆಯು ಸತತ ಮಳೆ ಕೊರತೆಯಿಂದ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ. ಕೆರೆಯಲ್ಲಿರುವ ದೊಡ್ಡ ಕುಂಟೆಗಳಲ್ಲಿ ಮಳೆಗಾಲದಲ್ಲಿ ಸಂಗ್ರಹವಾಗುವ ನೀರಿನಲ್ಲಿ ಗುತ್ತಿಗೆದಾರರು ಮೀನು ಬೆಳೆಯುತ್ತಾರೆ.

ಗುತ್ತಿಗೆದಾರ ಗಂಗಾಧರ್ ಕೆರೆಯಲ್ಲಿರುವ ಕುಂಟೆಯನ್ನು ಮೀನು ಬೆಳೆಯಲು ₹38 ಸಾವಿರಕ್ಕೆ ಹರಾಜು ಪಡೆದಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಒಂದೂವರೆ ಟನ್ ಮೀನು ಮರಿ ನೀರಿಗೆ ಬಿಟ್ಟಿದ್ದರು. ಆ ಪೈಕಿ ಬಹುತೇಕ ಮೀನುಗಳು ಸತ್ತು ದಡ ಸೇರುತ್ತಿವೆ.

ಮೀನುಗಳ ಸಾವಿನ ಕುರಿತು ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಆರ್.ಎಸ್.ನಾಗೇಂದ್ರ ಬಾಬು, ‘ಚಳಿಗಾಲದಲ್ಲಿ ಆಮ್ಲಜನಕ ಕೊರತೆಯಿಂದ ಮೀನುಗಳು ಸಾಯುವುದು ಸಾಮಾನ್ಯ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಕರಣ ವರದಿಯಾಗಿದೆ’ ಎಂದು ಹೇಳಿದರು.

‘ಕಾಟ್ಲಾ, ಸಿಸಿ, ಮಿರಗಲ್, ರೋಹು ತಳಿಗಳ ಮರಿಗಳನ್ನು ಬಿಟ್ಟಿದ್ದೆ. ಒಂದು ಟನ್‌ನಷ್ಟು ಮೀನುಗಳು ಸತ್ತಿವೆ. ಇದರಿಂದ ₹3 ಲಕ್ಷ ನಷ್ಟವಾಗಿದೆ. ತ್ಯಾಜ್ಯ ಸಂಸ್ಕರಣಾ ಘಟಕದ ಅಶುದ್ಧ ನೀರನ್ನು ಹರಿಸಿದ್ದರಿಂದ ಮೀನುಗಳು ಸತ್ತಿವೆ’ ಎಂದು ಗುತ್ತಿಗೆದಾರ ಗಂಗಾಧರ್ ಅಳಲು ತೋಡಿಕೊಂಡರು.

* ಮಳೆ ಇಲ್ಲದೆ ಎಲ್ಲಾ ಕೆರೆಗಳು ಬತ್ತಲು ಆರಂಭಿಸಿವೆ. ಕುಂಟೆಯಲ್ಲಿ ಅಳಿದುಳಿದ ನೀರಿನಲ್ಲಿ ಮೀನು ಬೆಳೆಸಿ ಬದುಕೋಣ ಎಂದರೆ ಇದೀಗ ಅದಕ್ಕೂ ಕಲ್ಲು ಬಿದ್ದಂತಾಗಿದೆ

-ಗಂಗಾಧರ್ ,ಗುತ್ತಿಗೆದಾರ

ಮುಖ್ಯಾಂಶಗಳು
* ನಾಲ್ಕೈದು ದಿನಗಳಿಂದ ಮೀನುಗಳ ಸರಣಿ ಸಾವು

* ಮೀನುಗಳಿಗೆ ಕಂಟಕವಾದ ಸೂಕ್ಷ್ಮಾಣು ಜೀವಿಗಳು

* ಗುತ್ತಿಗೆದಾರರಿಗೆ ಬರೆ ಎಳೆದ ಕಲುಷಿತ ನೀರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT