ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದಲ್ಲಿ ಅನ್ಯಗ್ರಹಗಳಿಗೆ ಮಾನವ

Last Updated 3 ಫೆಬ್ರುವರಿ 2019, 19:36 IST
ಅಕ್ಷರ ಗಾತ್ರ

ಬೆಂಗಳೂರು: ‘ಗಗನಯಾನ’ದ ಮೂಲಕ ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸಲಿರುವ ಇಸ್ರೊ ಭವಿಷ್ಯದಲ್ಲಿ ಚಂದ್ರ, ಮಂಗಳದಂತಹ ಗ್ರಹಗಳಿಗೆ ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಗಳಿಗೂ ಮಾನವರನ್ನು ಕಳಿಸುವ ಉದ್ದೇಶ ಹೊಂದಿದೆ.

ಈ ಉದ್ದೇಶದಿಂದಲೇ ಇಸ್ರೊ ‘ಮಾನವ ಬಾಹ್ಯಾಕಾಶ ಯಾನ ಕೇಂದ್ರ’ (ಹ್ಯೂಮನ್‌ ಸ್ಪೇಸ್‌ ಫ್ಲೈಟ್‌ ಸೆಂಟರ್‌) ಸ್ಥಾಪಿಸಿದೆ. ಇದು ‘ಗಗನಯಾನ’ಕ್ಕೆ ಸೀಮಿತವಾಗಿ ಸ್ಥಾಪಿಸಿಲ್ಲ. ಅಮೆರಿಕದ ನಾಸಾ, ಇಸಾ (ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ) ಮತ್ತು ಚೀನಾ ಬಾಹ್ಯಾಕಾಶ ಸಂಸ್ಥೆಗೆ ಸರಿ ಸಮಾನವಾಗಿ ಬೆಳೆಯುವ ಉದ್ದೇಶವನ್ನುಇಸ್ರೊ ಹೊಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾನವ ಬಾಹ್ಯಾಕಾಶ ಕೇಂದ್ರವು ನಾಸಾಗಿಂತ ಹೆಚ್ಚಿನ ಕಾರ್ಯ ವ್ಯಾಪ್ತಿಯನ್ನು ಹೊಂದಲಿದೆ. ಅಲ್ಲದೆ, ನಿರಂತರ ಕಾರ್ಯಕ್ರಮವಾಗಿಯೂ ಮುಂದುವರಿಯಲಿದೆ. ಬಾಹ್ಯಾಕಾಶ, ಅನ್ಯ ಗ್ರಹ– ಕಾಯಗಳಲ್ಲಿ ಜೀವ ರಕ್ಷಕ ವ್ಯವಸ್ಥೆ, ಪರಿಸರ, ಸೂಕ್ಷ್ಮ ಜೀವಿ ವ್ಯವಸ್ಥೆ ಮುಂತಾದವುಗಳ ಬಗ್ಗೆ ವಿಶೇಷ ಅಧ್ಯಯನ ವಿಭಾಗಗಳನ್ನು ಆರಂಭಿಸುವ ಸಂಶೋಧನೆಗಳ ಉದ್ದೇಶ ಹೊಂದಿದೆ ಎಂದು ಹೇಳಿದರು.

ಬಾಹ್ಯಾಕಾಶ ವಿಜ್ಞಾನ ಚಟುವಟಿಕೆಗಳ ವಿಸ್ತರಣೆಗೆ ಈ ಕೇಂದ್ರ ಸೂಕ್ತ ವೇದಿಕೆ ಆಗಲಿದೆ. ಅಮೆರಿಕ, ರಷ್ಯಾ, ಚೀನಾ ಮಾನವರನ್ನು ಬಾಹ್ಯಾಕಾಶ ಮತ್ತು ಚಂದ್ರನಲ್ಲಿಗೆ ಕಳಿಸಿವೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಾಕಷ್ಟು ಸಂಶೋಧನೆಗಳನ್ನು ನಡೆಸುತ್ತಿವೆ. ಭಾರತಕ್ಕೂ ಅಂತಹ ಸಾಮರ್ಥ್ಯ ಇದೆ ಎಂಬುದನ್ನು ಜಗತ್ತಿಗೆ ತೋರಿಸಲು ‘ಗಗನಯಾನ’ ಮೊದಲ ಮೆಟ್ಟಿಲಾಗಿದೆ. ಗ್ರಹಗಳಿಗೆ ಮಾತ್ರವಲ್ಲದೆ, ಕೆಲವು ಕ್ಷುದ್ರ ಕಾಯಗಳಿಗೂ ರೊಬಾಟ್‌ಗಳನ್ನೂ ಕಳುಹಿಸಿ ಅಧ್ಯಯನ ನಡೆಸಲು ಅವಕಾಶಗಳಿವೆ ಎಂದರು.

ಗಗನಯಾನಕ್ಕೆ ತೆರಳುವ ಮೂವರು ಗಗನಯಾತ್ರಿಗಳ ಆಯ್ಕೆಯ ಬಳಿಕ ಪ್ರಾಥಮಿಕ ಹಂತದ ತರಬೇತಿಗಳನ್ನು ಭಾರತದಲ್ಲಿಯೇ ನೀಡಲಾಗುತ್ತದೆ. ಮುಂದುವರಿದ ತರಬೇತಿಗೆ ಅಮೆರಿಕಾ ಅಥವಾ ರಷ್ಯಾವನ್ನು ಅವಲಂಬಿಸಬೇಕು. ಮಾನವ ಬಾಹ್ಯಾಕಾಶ ಯಾನ ಕೇಂದ್ರವನ್ನು ಸ್ಥಾಪಿಸಿರುವುದರಿಂದ ಮುಂದಿನ ದಿನಗಳಲ್ಲಿ ಅಂತಹ ಎಲ್ಲ ಬಗೆಯ ತರಬೇತಿಗಳೂ ಭಾರತದಲ್ಲೇ ನಡೆಯಲಿವೆ. ಅಲ್ಲದೆ, ವಾಣಿಜ್ಯ ಉದ್ದೇಶದ ಮಾನವ ಸಹಿತ ಯಾನಕ್ಕೂ ಅವಕಾಶಗಳನ್ನು ಕಲ್ಪಿಸಲಾಗುತ್ತದೆ ಎಂದು ಮಾಹಿತಿ
ನೀಡಿದರು.

‘ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವುದಕ್ಕೂ ಮೀರಿದ ಉದ್ದೇಶಗಳನ್ನು ಇಸ್ರೊ ಹೊಂದಿರುವುದರಿಂದ, ಹ್ಯೂಮನ್‌ ಸ್ಪೇಸ್‌ ಫ್ಲೈಟ್‌ ಸೆಂಟರ್‌ ಆರಂಭಿಸಲಾಗುತ್ತಿದೆ’ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ಇತ್ತೀಚೆಗೆ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದರು.

‘ಗಗನಯಾನ’ದ ಅಂತಿಮ ಉಡಾವಣೆಯಲ್ಲಿ ಮಾನವರು ಇರುತ್ತಾರೆ. ಅದಕ್ಕಿಂತ ಮೊದಲು ಎರಡು ಪರೀಕ್ಷಾರ್ಥ ಉಡಾವಣೆಗಳನ್ನು ನಡೆಸಲಾಗುವುದು. ಹಿಂದೆ ಮಾನವರನ್ನು ಕಳುಹಿಸುವುದರ ಬದಲು ನಾಯಿ ಅಥವಾ ಮಂಗಗಳನ್ನು ಕಳುಹಿಸಿ ಪರೀಕ್ಷೆ ನಡೆಸಿ ಬಳಿಕ ಮಾನವನನ್ನು ಕಳುಹಿಸುತ್ತಿದ್ದರು. ಈಗ ತಂತ್ರಜ್ಞಾನ ಮುಂದುವರಿದಿರುವುದರಿಂದ ಪ್ರಾಣಿಗಳನ್ನು ಕಳುಹಿಸುವ ಅಗತ್ಯವಿಲ್ಲ. ಬಾಹ್ಯಾಕಾಶದಲ್ಲಿನ ಪರಿಸರದ ಬಗ್ಗೆ ತಂತ್ರಜ್ಞಾನವೇ ಮಾಹಿತಿ ನೀಡಲಿದೆ’ ಎಂದೂ ಶಿವನ್‌ ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT