2022ರೊಳಗೆ ಭಾರತೀಯ ಗಗನಯಾತ್ರಿ ಬಾಹ್ಯಾಕಾಶಕ್ಕೆ

7
ಗುರಿ ಕಠಿಣ– ಆದರೂ ಸಾಧಿಸುವ ವಿಶ್ವಾಸವಿದೆ: ಇಸ್ರೊ

2022ರೊಳಗೆ ಭಾರತೀಯ ಗಗನಯಾತ್ರಿ ಬಾಹ್ಯಾಕಾಶಕ್ಕೆ

Published:
Updated:

ಬೆಂಗಳೂರು: ಭಾರತೀಯ ಗಗನಯಾತ್ರಿಯನ್ನು 2022ರೊಳಗೆ ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಬುಧವಾರ ಪ್ರಕಟಿಸಿದರು.

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಈ ವಿಚಾರ ಪ್ರಸ್ತಾಪಿಸಿದ ಪ್ರಧಾನಿ, ‘ಭಾರತವು 2022ರಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿದ್ದು, ಅಷ್ಟರೊಳಗೆ ದೇಶದ ಸುಪುತ್ರಿ ಅಥವಾ ಸುಪುತ್ರ ರಾಷ್ಟ್ರಧ್ವಜದೊಂದಿಗೆ ಬಾಹ್ಯಾಕಾಶ ಯಾನ ನಡೆಸಲಿದ್ದಾರೆ’ ಎಂದು ತಿಳಿಸಿದರು.

ಇದಕ್ಕೆ ಇಲ್ಲಿ ಪ್ರತಿಕ್ರಿಯಿಸಿರುವ ಇಸ್ರೊ ಅಧ್ಯಕ್ಷ ಡಾ.ಕೆ. ಶಿವನ್‌, ‘ಇದೊಂದು ಕಠಿಣವಾದ ಸವಾಲು. ಆದರೂ, ನಾವಿದನ್ನು ನಿಗದಿತ ಗಡುವಿನೊಳಗೆ ಸಾಧಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಈ ಯೋಜನೆಯನ್ನು ಘೋಷಣೆ ಮಾಡಿದ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಶಿವನ್‌, ‘ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಸಂಸ್ಥೆ ಕೈಗೆತ್ತಿಕೊಂಡ ಯಾವುದೇ ಯೋಜನೆಯೂ ವಿಳಂಬವಾಗಿಲ್ಲ. ಇದು ಸಾಧಿಸಲು ಅಸಾಧ್ಯವಾದ ಸವಾಲೇನೂ ಅಲ್ಲ. ನಮಗೆ ಗೊತ್ತಿರದ ಹೊಸ ತಂತ್ರಜ್ಞಾನವನ್ನೂ ನಾವಿದಕ್ಕೆ ಬಳಸಬೇಕಾಗಿಲ್ಲ. ಗಡುವಿನೊಳಗೆ ಈ ಸಾಧನೆ ಮಾಡಲಿದ್ದೇವೆ’ ಎಂದರು.

‘ಇದಕ್ಕೆ ಬೇಕಾದ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಿದ್ದೇವೆ. ದಶಕಕ್ಕೂ ಹೆಚ್ಚು ಕಾಲ ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದೇವೆ’ ಎಂದು ತಿಳಿಸಿದರು.

ಪ್ರಧಾನಿ ಅವರ ಘೋಷಣೆ ಮೊದಲೇ ಗೊತ್ತಿತ್ತೇ ಎಂಬ ಪ್ರಶ್ನೆಗೆ, ‘ಇಸ್ರೊ ಒಪ್ಪಿಗೆ ಪಡೆದು ಅವರು ಈ ಯೋಜನೆಯನ್ನು ಪ್ರಕಟಿಸಬೇಕಾಗಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯೂ ಅವರ ಬಳಿಯೇ ಇರುವುದರಿಂದ ಸಂಸ್ಥೆಯಲ್ಲಿ ಏನೆಲ್ಲ ತಯಾರಿಗಳು ನಡೆದಿವೆ ಎಂಬುದು ಅವರಿಗೆ ತಿಳಿದಿರುತ್ತದೆ. ಈ ನೆಲದಿಂದ ಬಾಹ್ಯಾಕಾಶಕ್ಕೆ ಗಗನಯಾತ್ರಿಯನ್ನು ಕಳುಹಿಸಲು ಇದು ಸಕಾಲ ಎಂಬ ಕಾರಣಕ್ಕೆ ಅವರು ಯೋಜನೆಯನ್ನು ಪ್ರಕಟಿಸಿರಬಹುದು’ ಎಂದು ಪ್ರತಿಕ್ರಿಯಿಸಿದರು.

‘ಈ ಯೋಜನೆಗೆ ಎಷ್ಟು ವೆಚ್ಚವಾಗಲಿದೆ ಎಂಬ ಬಗ್ಗೆ ನಿಖರ ಲೆಕ್ಕಾಚಾರವನ್ನು ಇನ್ನಷ್ಟೇ ಮಾಡಬೇಕಿದೆ. ಸದ್ಯಕ್ಕೆ ₹ 10 ಸಾವಿರ ಕೋಟಿ ಬೇಕಾಗಬಹುದು. ಗಗನಯಾನಕ್ಕೆ ಸಂಬಂಧಿಸಿದ ಸೂಕ್ಷ್ಮ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸಂಸ್ಥೆಯು 2004ರಿಂದಲೇ ಕಾರ್ಯತತ್ಪರವಾಗಿದೆ. ಈ ಸಲುವಾಗಿ ಈಗಾಗಲೇ ₹ 300 ಕೋಟಿಯಷ್ಟು ವೆಚ್ಚಮಾಡಿದೆ. ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವು ಬಾಹ್ಯಾಕಾಶ ಯಾನಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಮಂಜೂರಾದ ಮೊತ್ತವನ್ನು ಇದಕ್ಕೆ ಬಳಸಿಕೊಂಡಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಜಿಎಸ್‌ಎಲ್‌ವಿ ಮಾರ್ಕ್‌– 3 ಗಗನನೌಕೆಯನ್ನು ಈ ಅಭಿಯಾನಕ್ಕೆ ಬಳಸಿಕೊಳ್ಳಲಾಗುತ್ತದೆ. ಮಾನವಸಹಿತ ಗಗನನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದಕ್ಕೆ ಮುನ್ನ ಮಾನವರಹಿತ ಜಿಎಸ್‌ಎಲ್‌ವಿ ಮಾರ್ಕ್‌– 3 ನೌಕೆಯನ್ನು ಗಗನಕ್ಕೆ ಕಳುಹಿಸುತ್ತೇವೆ. ಒಂದೆರಡು ಇಂಥಹ ಪ್ರಯೋಗದ ಬಳಿಕ ಮಾನವಸಹಿತ ಯಾನ ಆರಂಭಿಸಲಿದ್ದೇವೆ. ಯೋಜನೆಗೆ ಸಂಬಂಧಿಸಿದ ಯೋಜನಾ ವರದಿಯನ್ನು ಎರಡು ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಅವರು ವಿವರಿಸಿದರು. 

ಜಿಎಸ್‌ಎಲ್‌ವಿ ಮಾರ್ಕ್–3 ಸಾಮರ್ಥ್ಯದ ಬಗ್ಗೆ ವ್ಯಕ್ತವಾಗಿರುವ ಸಂದೇಹದ ಕುರಿತು ಪ್ರತಿಕ್ರಿಯಿಸಿದ ಅವರು, ‘ಮಾನವಸಹಿತ ಯಾನದ ವೇಳೆ ಈ ರಾಕೆಟ್‌ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬ ವಿಶ್ವಾಸವಿದೆ. ಈಗಾಗಲೇ 10ರಿಂದ 15 ರಾಕೆಟ್‌ಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿವೆ’ ಎಂದರು.

‘ಈ ಯೋಜನೆ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನದ ಗುಣಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ಬಾಹ್ಯಾಕಾಶ ಪ್ರವಾಸ ಕಾರ್ಯಕ್ರಮ ಆರಂಭಿಸುವುದಕ್ಕೂ ಇದು ಅನುವು ಮಾಡಿಕೊಡಲಿದೆ. ಎಂದು ಡಾ.ಕೆ. ಶಿವನ್‌, ವಿಶ್ವಾಸ ವ್ಯಕ್ತಪಡಿಸಿದರು.

*
ಇದು ದೊಡ್ಡ ಘೋಷಣೆ. ಈ ಯೋಜನೆ ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವಂತೆ ಮಾಡಲಿದೆ.
–ಕೆ.ಶಿವನ್‌, ಇಸ್ರೊ ಅಧ್ಯಕ್ಷ  

Tags: 

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !