ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ವೇಷಣಾ ಪ್ರಾಧಿಕಾರ, ವಿಷನ್‌ ಗ್ರೂಪ್‌ ರಚನೆ

ಸ್ಟಾರ್ಟ್ಅಪ್‌ಗಳಿಗಾಗಿ ರಾಜ್ಯ ಸರ್ಕಾರದ ಯೋಜನೆ, ನ.18ರಿಂದ ಬೆಂಗಳೂರು ತಂತ್ರಜ್ಞಾನ ಸಮಾವೇಶ
Last Updated 19 ಸೆಪ್ಟೆಂಬರ್ 2019, 20:47 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 2 ಮತ್ತು 3ನೇ ಹಂತದ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ), ಜೈವಿಕ ತಂತ್ರಜ್ಞಾನ (ಬಿಟಿ) ಸ್ಟಾರ್ಟ್‌ ಅಪ್‌ಗಳನ್ನು ಸ್ಥಾಪಿಸಲು, ಬಂಡವಾಳ ಆಕರ್ಷಿಸಲು ಕರ್ನಾಟಕ ಅನ್ವೇಷಣಾ ಪ್ರಾಧಿಕಾರ ಹಾಗೂವಿಷನ್‌ ಗ್ರೂಪ್‌ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಗುರುವಾರ ಹೇಳಿದರು.

ಇಲ್ಲಿ ಐಟಿ, ಬಿಟಿ ಉದ್ಯಮಗಳ ಪ್ರಮುಖರರೊಂದಿಗೆ ಸಂವಾದ ನಡೆಸಿದ ಅವರು, ಸ್ಟಾರ್ಟ್‌ಅಪ್‌ ವ್ಯವಸ್ಥೆಗಳು ಇರುವಂತಹ ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಶಿವಮೊಗ್ಗ, ಬೆಳಗಾವಿಯಂತಹ ನಗರಗಳಲ್ಲಿ ಉದ್ಯಮಿಗಳು ಹೂಡಿಕೆ ಮಾಡಬೇಕು ಎಂದು ಕೋರಿದರು.

‘ಅದಕ್ಕಾಗಿಸರ್ಕಾರ ಶೀಘ್ರ ಮಾಹಿತಿ ತಂತ್ರಜ್ಞಾನ ನೀತಿ ಪ್ರಕಟಿಸಲಿದೆ, ನೂತನ ಪ್ರಾಧಿಕಾರಕ್ಕೆ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅಧ್ಯಕ್ಷರಾಗಿರುತ್ತಾರೆ‘ ಎಂದರು. ಸಂವಾದದಲ್ಲಿ 15ಕ್ಕೂ ಅಧಿಕ ದೇಶಗಳ ರಾಯಭಾರಿಗಳು ಮತ್ತು ರಾಜತಾಂತ್ರಿಕ ಪಾಲ್ಗೊಂಡಿದ್ದರು.

ಶೇ 40ರಷ್ಟು ಪಾಲು:‘₹ 5 ಲಕ್ಷ ಕೋಟಿ (ಟ್ರಿಲಿಯನ್‌) ಆರ್ಥಿಕತೆಯನ್ನು ಸಾಧಿಸಲು ಹೊರಟಿರುವ ಭಾರತದಲ್ಲಿ ಡಿಜಿಟಲ್‌ ಜಗತ್ತಿನಿಂದ ಶೇ 20ರಷ್ಟು ಅಂದರೆ ₹ 1 ಟ್ರಿಲಿಯನ್‌ ಆರ್ಥಿಕತೆ ಸೃಷ್ಟಿಯಾಗುವ ಗುರಿ ಇದೆ. ಇದರಲ್ಲಿ ರಾಜ್ಯದ ಪಾಲು ಶೇ 40ರಷ್ಟು ಇರಬೇಕು ಎಂಬ ಗುರಿಯೊಂದಿಗೆ ಐಟಿ, ಬಿಟಿ ಉದ್ದಿಮೆಗಳಿಗೆ ಉತ್ತೇಜನ ನೀಡಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದೇ ಉದ್ದೇಶದೊಂದಿಗೆ ಮೂಲಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ’ ಎಂದು ಡಿಸಿಎಂ ಡಾ. ಸಿ. ಎನ್‌. ಅಶ್ವತ್ಥನಾರಾಯಣ ಹೇಳಿದರು.

‘ನವೀನ ಅನ್ವೇಷಣೆಗಾಗಿ ರಾಜ್ಯ ಸರ್ಕಾರ ಕಾನೂನು ಚೌಕಟ್ಟು ರೂಪಿಸಲಿದ್ದು, 2 ಮತ್ತು 3ನೇ ಹಂತದ ನಗರಗಳಲ್ಲಿ ವಿಶ್ವವಿದ್ಯಾಲಯ ತೊಡಗಿಸುವ ಮೂಲಕ ನವ ಯುಗದ ಅನ್ವೇಷಣಾ ಜಾಲವನ್ನು (ಎನ್‌ಎಐಎಸ್‌) ರಚಿಸಿಕೊಳ್ಳಲಿದೆ. 30 ಎಂಜಿನಿ ಯರಿಂಗ್‌ ಕಾಲೇಜುಗಳನ್ನು 293 ಯೋಜನೆಗಳಲ್ಲಿ ತೊಡಗಿಸಿ ಕೊಂಡಿದ್ದು, 100ಕ್ಕೂ ಅಧಿಕ ಮಾದರಿ ತಯಾರಿಸಲಾಗಿದೆ’ ಎಂದರು.

ತಂತ್ರಜ್ಞಾನ ಸಮಾವೇಶ:ನವೆಂಬರ್‌ 18ರಿಂದ 20ರವರೆಗೆ 22ನೇ ‘ಬೆಂಗಳೂರು ಟೆಕ್‌ ಸಮಿಟ್‌‘ (ಬಿಟಿಎಸ್‌)ನಡೆಯಲಿದ್ದು, ಸ್ಟಾರ್ಟ್ಅಪ್‌ಗಳು ಮತ್ತು ಅನ್ವೇಷಣೆಗಳಿಗೆ ಈ ಬಾರಿ ವಿಶೇಷ ಗಮನ ಹರಿಸಲಾಗುವುದು. ಜತೆಗೆ ‘ಇಂಡಿಯಾ ಬಯೊ 2019’ ಸಮಾವೇಶವೂ ನಡೆಯಲಿದೆ ಎಂದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ. ವಿ. ರಮಣ ರೆಡ್ಡಿ, ಐಟಿ ವಿಷನ್‌ ಗ್ರೂಪ್‌ನ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣ, ಬಿಟಿ ವಿಷನ್‌ ಗ್ರೂಪ್‌ನ ಅಧ್ಯಕ್ಷೆ ಡಾ. ಕಿರಣ್‌ ಮಜುಂದಾರ್‌ ಷಾ ಇದ್ದರು.

ಕೌಶಲ ವೃದ್ಧಿಗೆ ಯೋಜನೆ ಸಿದ್ಧ
ಇದೇ ವೇಳೆ ಕಿಯೋನಿಕ್ಸ್‌ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 1 ಕೋಟಿ ನೀಡಲಾಯಿತು.‌

ರಾಜ್ಯದ ಐಟಿ, ಬಿಟಿ ಉದ್ಯಮ ಕ್ಷೇತ್ರದಲ್ಲಿ ಶೇ 40ರಷ್ಟು ಕನ್ನಡಿಗರಿದ್ದಾರೆ. ಈ ‍ಪ್ರಮಾಣ ಇನ್ನಷ್ಟು ಹೆಚ್ಚಬೇಕಾದರೆ ನಮ್ಮ ಯುವಜನತೆ ಕೌಶಲವನ್ನು ವೃದ್ಧಿಸುವ ಪ್ರಯತ್ನವೂ ನಡೆಯಬೇಕಾಗಿದೆ. ಇದಕ್ಕಾಗಿ ಸರ್ಕಾರ ನವ ಯುಗದ ಅನ್ವೇಷಣಾ ಜಾಲ (ಎನ್‌ಎಐಎನ್‌) ಕಾರ್ಯಕ್ರಮದ ಮೂಲಕ ಎಂಜಿನಿಯರಿಂಗ್‌ ಕಾಲೇಜುಗಳಿಂದಲೇ ಕೆಲಸಕ್ಕೆ ಯೋಗ್ಯರಾಗುವಂತಹ ಉದ್ಯೋಗಿಗಳನ್ನು ಸಿದ್ಧಪಡಿಸುವ ಯೋಜನೆ ರೂಪಿಸಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ. ಎನ್‌. ಅಶ್ವತ್ಥನಾರಾಯಣ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT