ಗುರುವಾರ , ಸೆಪ್ಟೆಂಬರ್ 19, 2019
21 °C
ವಾರೆಂಟ್‌ ಇಲ್ಲದ್ದಕ್ಕೆ ಸಿಎಂ ಕೊಠಡಿ ಪ್ರವೇಶಿಸಲಾಗದ ಅಧಿಕಾರಿಗಳು

ಸಚಿವರ ಕೊಠಡಿಗಳ ತಪಾಸಣೆ

Published:
Updated:
Prajavani

ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆ ಪ್ರಚಾರಕ್ಕಾಗಿ ನಗರದ ಡೆನಿಸನ್‌ ಹೋಟೆಲ್‌ನಲ್ಲಿ ಉಳಿದುಕೊಂಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಕೊಠಡಿ ತಪಾಸಣೆಗೆ ಮುಂದಾಗಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಾರೆಂಟ್‌ ಇಲ್ಲದ್ದರಿಂದ ಚೆಕ್‌ ಮಾಡದೇ ಬರಿಗೈಲಿ ತೆರಳಿದ್ದಾರೆ.

ಕುಂದಗೋಳದಲ್ಲಿ ಪ್ರಚಾರ ಮುಗಿಸಿಕೊಂಡು ಕುಮಾರಸ್ವಾಮಿ ಅವರು ರಾತ್ರಿ 11ರ ವೇಳೆಗೆ ಹೋಟೆಲ್‌ಗೆ ಬಂದಾಗ ಅವರ ತಂಗಿದ್ದ ಕೊಠಡಿಯನ್ನು ಐಟಿ ಅಧಿಕಾರಿ ವೈ.ಎನ್‌. ನವಲಗುಂದ ನೇತೃತ್ವದ ತಂಡ ತಪಾಸಣೆಗೆ ಮುಂದಾಯಿತು. ಆಗ ಸಿಎಂ ಅವರು, ವಾರೆಂಟ್‌ ಎಲ್ಲಿ ಎಂದು ಪ್ರಶ್ನಿಸಿದರು. ವಾರೆಂಟ್‌ ಇಲ್ಲದ್ದರಿಂದ ಅಧಿಕಾರಿಗಳು ತಪಾಸಣೆ ಕೈಬಿಟ್ಟರು ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ರಾತ್ರಿ 9.45ರ ವೇಳೆ ಹೋಟೆಲ್ ಪ್ರವೇಶಿಸಿದ ಗೋವಾ ಹಾಗೂ ಬೆಳಗಾವಿ ವಿಭಾಗದ ಐಟಿ ಅಧಿಕಾರಿಗಳ ತಂಡವು ಸಚಿವರ ಹಾಗೂ ರಾಜಕೀಯ ಮುಖಂಡ ಕೊಠಡಿಗಳನ್ನು ಪರಿಶೀಲಿಸಿದೆ.

ಸಚಿವ ಜಮೀರ್ ಅಹ್ಮದ್ ಅವರು ತಂಗಿದ್ದ ಕೊಠಡಿಯನ್ನು ತೀವ್ರ ತಪಾಸಣೆಗೆ ಒಳಪಡಿಸಿದರು. ನಂತರ ಸಚಿವರಾದ ಬಂಡೆಪ್ಪ ಕಾಶೆಂಪುರ, ಆರ್.ವಿ. ದೇಶಪಾಂಡೆ, ಎಂ.ಟಿ.ಬಿ. ನಾಗರಾಜ್, ಕಾಂಗ್ರೆಸ್ ಮುಖಂಡ ಸಂತೋಷ ಲಾಡ್ ಸೇರಿದಂತೆ ಹಲವು ಕೊಠಡಿಗಳನ್ನು ಚೆಕ್‌ ಮಾಡಲಾಯಿತು. ಗ್ರಾಹಕರ ಕೊಠಡಿಗಳನ್ನೂ ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.

Post Comments (+)