ಸ್ಯಾಂಡಲ್‌ವುಡ್‌ಗೆ ಐ.ಟಿ ‘ಈಟಿ’

7
ಕನ್ನಡ ಚಿತ್ರರಂಗದ ನಟರು, ನಿರ್ಮಾಪಕರ ಮನೆಗಳಲ್ಲಿ ಮುಂಜಾನೆಯಿಂದ ರಾತ್ರಿವರೆಗೆ ಶೋಧ

ಸ್ಯಾಂಡಲ್‌ವುಡ್‌ಗೆ ಐ.ಟಿ ‘ಈಟಿ’

Published:
Updated:

ಬೆಂಗಳೂರು: ಶಿವರಾಜ್‌ ಕುಮಾರ್‌, ಪುನೀತ್‌ ರಾಜ್‌ಕುಮಾರ್, ಸುದೀಪ್‌ ಹಾಗೂ ಯಶ್‌ ಒಳಗೊಂಡಂತೆ ಕನ್ನಡ ಚಿತ್ರ ರಂಗದ ನಿರ್ಮಾಪಕರು ಹಾಗೂ ನಟಿಯರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ಗುರುವಾರ ಬೆಳಿಗ್ಗೆ  ದಾಳಿ ನಡೆಸಿದರು.

ಕೆಜಿಎಫ್‌ ಸಿನಿಮಾ ನಿರ್ಮಾಪಕ ವಿಜಯ್‌ ಕಿರಗಂದೂರು, ‘ದಿ ವಿಲನ್‌’ ಚಿತ್ರದ ನಿರ್ಮಾಪಕ ಹಾಗೂ ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಸಿ.ಆರ್. ಮನೋಹರ್‌, ಮತ್ತೊಬ್ಬ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಯಶ್‌ ಅವರ ಪತ್ನಿ ಹಾಗೂ ನಟಿ ರಾಧಿಕಾ ಪಂಡಿತ್‌ ಅವರ ಪೋಷಕರ ಮನೆಗಳ ಮೇಲೂ ದಾಳಿ ಮಾಡಲಾಗಿದೆ.

ಕನ್ನಡದ ನಟ, ನಿರ್ಮಾಪಕರ ಮನೆಗಳ ಮೇಲೆ ನಡೆದಿರುವ ಅತ್ಯಂತ ದೊಡ್ಡ ದಾಳಿ ಇದಾಗಿದ್ದು, ಚಿತ್ರ ರಂಗವನ್ನೇ ಬೆಚ್ಚಿ ಬೀಳಿಸಿದೆ. ಬೆಳಿಗ್ಗೆ ಆರಂಭವಾದ ದಾಳಿ, ಶೋಧ ಕಾರ್ಯಾಚರಣೆ ತಡರಾತ್ರಿವರೆಗೂ ನಡೆದಿತ್ತು. ನಟರ ಮನೆಗಳ ಮುಂದೆ ಬಿಗಿ ಬಂದೋಬಸ್ತ್‌ ಹಾಕಲಾಗಿತ್ತು.

ಸಿನಿಮಾ ನಿರ್ಮಾಣಕ್ಕೆ ಕಪ್ಪು ಹಣ ಹೂಡಿ, ಚಲಾವಣೆಗೆ ತರಲಾಗುತ್ತಿದೆ. ಇದರಿಂದ ಬಂದ ಲಾಭದ ಲೆಕ್ಕ ತೋರಿಸದೆ ವಂಚಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಐ.ಟಿ ಮೂಲಗಳು ಹೇಳಿವೆ.  

ಬಾಗಿಲು ಬಡಿದ ಅಧಿಕಾರಿಗಳು: ನಟರು ಮತ್ತು ನಿರ್ಮಾಪಕರು ಬೆಳಿಗ್ಗೆ ನಿದ್ದೆಯಿಂದ ಏಳುವ ಮೊದಲೇ ಐ.ಟಿ ಅಧಿಕಾರಿಗಳು ವಿವಿಧ ತಂಡಗಳಲ್ಲಿ ಬಂದು ಬಾಗಿಲು ಬಡಿದರು. ಬುಧವಾರವೇ ಕೋರ್ಟ್‌ನಿಂದ ವಾರಂಟ್ ಪಡೆದಿದ್ದ ಅಧಿಕಾರಿಗಳು ಮನೆಗಳ ಶೋಧ ನಡೆಸಿದರು. 200 ಐ.ಟಿ ಅಧಿಕಾರಿಗಳಿರುವ 30 ತಂಡಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.

ಸದಾಶಿವನಗರದಲ್ಲಿರುವ ಪುನೀತ್‌ ರಾಜ್‌ಕುಮಾರ್‌  ಮನೆ, ಮಾನ್ಯತಾ ಟೆಕ್‌ಪಾರ್ಕ್ ಪ್ರದೇಶದಲ್ಲಿರುವ ಶಿವರಾಜ್‌ ಕುಮಾರ್‌ ಮನೆ, ಜೆ.ಪಿ. ನಗರದಲ್ಲಿರುವ ಸುದೀಪ್‌ ಮನೆ, ಕತ್ರಿಗುಪ್ಪೆಯಲ್ಲಿರುವ ಯಶ್‌ ಮನೆ, ಗಾಯತ್ರಿ ನಗರದಲ್ಲಿರುವ ರಾಧಿಕಾ ಅವರ ಪೋಷಕರ ಮನೆ ಸೇರಿದಂತೆ ಸುಮಾರು 25 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ, ಆಸ್ತಿಪಾಸ್ತಿ ಹಾಗೂ ದಾಖಲೆ ಪತ್ರಗಳನ್ನು ಪರಿಶೀಲಿಸಿದರು. ಭಾರಿ ಪ್ರಮಾಣದ ಹಣ– ಆಭರಣಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂವರೂ ನಿರ್ಮಾಪಕರು ನಿರ್ಮಿಸಿರುವ ಸಿನಿಮಾಗಳು, ಹೂಡಿಕೆ ಮಾಡಿರುವ ಹಣದ ಮೂಲ, ಗಳಿಸಿದ ಆದಾಯ ಸಂಬಂಧದ ದಾಖಲೆಗಳ ಪರಿಶೀಲನೆಯೂ ನಡೆಯುತ್ತಿದೆ. ಈ ನಿರ್ಮಾಪಕರ ಜೊತೆ ನಿಕಟ ಸಂಬಂಧ ಹೊಂದಿರುವವರ ಮನೆ, ಕಚೇರಿಗಳನ್ನು ಶೋಧಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ರಾಜಕೀಯ ಇಲ್ಲ: ಸುದೀಪ್‌

‘ನನ್ನ ಮನೆಯ ಮೇಲೆ ನಡೆದಿರುವ ಐ.ಟಿ. ದಾಳಿಯ ಹಿಂದೆ ರಾಜಕೀಯ ಇಲ್ಲ. ದಿ ವಿಲನ್‌, ಕೆಜಿಎಫ್‌ ಮತ್ತು ನಟಸಾರ್ವಭೌಮ ಚಿತ್ರಗಳ ಬಜೆಟ್‌ಗೆ ಸಂಬಂಧಿಸಿದಂತೆ ಈ ದಾಳಿ ನಡೆದಿರುವ ಸಾಧ್ಯತೆ ಇದೆ. ಈ ದಾಳಿ ಬಳಿಕವಾದರೂ ನನಗೆ ಬರಬೇಕಿರುವ ಬಾಕಿ ಹಣ ಬರಬಹುದು’ ಎಂದು ನಟ ಸುದೀಪ್‌ ಪ್ರತಿಕ್ರಿಯಿಸಿದರು.

ಸಹಕಾರ ನೀಡುವೆ: ಯಶ್‌

ಕೆಜಿಎಫ್‌ ಚಿತ್ರದ ಬಜೆಟ್‌ ಹಿನ್ನೆಲೆಯಲ್ಲಿ ಐ.ಟಿ ದಾಳಿ ನಡೆದಿದೆ ಎನ್ನುವುದು ತಪ್ಪು. ನಾನು ಹಣಕ್ಕಾಗಿ ಆಸೆಪಟ್ಟವನಲ್ಲ. ನನ್ನ ವೃತ್ತಿ ಬದುಕಿನಲ್ಲಿ ಐ.ಟಿ ದಾಳಿ ಹೊಸದು. ಆದರೆ, ಕಾನೂನು ಗೌರವಿಸುವುದು ಎಲ್ಲರ ಹೊಣೆ. ನಾನು ಕೂಡ ಅಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದು ನಟ ಯಶ್‌ ಹೇಳಿದರು.

ಸಚಿವ ಶಿವಕುಮಾರ್ ವಿಚಾರಣೆ

ಕಳೆದ ವರ್ಷ ಆದಾಯ ತೆರಿಗೆ ಇಲಾಖೆ ದಾಳಿಗೆ ಗುರಿಯಾಗಿದ್ದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಅವರ ತಾಯಿ ಗೌರಮ್ಮ ಸೇರಿದಂತೆ ಕುಟುಂಬದ ಸದಸ್ಯರನ್ನು ಪ್ರತ್ಯೇಕ ಪ್ರಕರಣದಲ್ಲಿ ಐ.ಟಿ ಅಧಿಕಾರಿಗಳು ವಿಚಾರಣೆ ನಡೆಸಿದರು. 

ಇಲ್ಲಿನ ಕನಿಂಗ್‌ಹ್ಯಾಂ ರಸ್ತೆಯಲ್ಲಿರುವ ಐ.ಟಿ. ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಶಿವಕುಮಾರ್‌, ಅವರ ತಾಯಿ, ಸಂಸದ ಡಿ.ಕೆ. ಸುರೇಶ್‌ ಸೇರಿದಂತೆ ಕುಟುಂಬದ ಸದಸ್ಯರಿಗೆ ಬುಧವಾರ ನೋಟಿಸ್‌ ನೀಡಿತ್ತು. ಅದರಂತೆ ವಿಚಾರಣೆಗೆ ಹಾಜರಾಗಿದ್ದರು. ಸುಮಾರು 4 ಗಂಟೆ ವಿಚಾರಣೆ ಮಾಡಲಾಗಿದೆ. 

ಶಿವಕುಮಾರ್ ಹಾಗೂ ಅವರ ಕುಟುಂಬದವರು, ಆಪ್ತರ ಮೇಲೆ ಐ.ಟಿ ದಾಳಿ ನಡೆದಿತ್ತು.  ಆದಾಯ ಮೀರಿ ಆಸ್ತಿ ಸಂಪಾದನೆ ಮಾಡಿರುವುದು ದಾಳಿ ವೇಳೆ ಪತ್ತೆಯಾಗಿತ್ತು ಎಂದು ಮೂಲಗಳು ಹೇಳಿದ್ದವು. ಈ ಹಿನ್ನೆಲೆಯಲ್ಲಿ ಶಿವಕುಮಾರ್‌ ಹಾಗೂ ಅವರ ಕುಟುಂಬದ ಸದಸ್ಯರ ವಿಚಾರಣೆ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 63

  Happy
 • 1

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !