ಸ್ಯಾಂಡಲ್‌ವುಡ್‌ ಹೀರೊಗಳ ವಿಚಾರಣೆ

7
ಮೊಬೈಲ್‌ಗಳು ಸ್ವಿಚ್‌ಆಫ್‌; ಚಲನವಲನಗಳ ನಿರ್ಬಂಧ

ಸ್ಯಾಂಡಲ್‌ವುಡ್‌ ಹೀರೊಗಳ ವಿಚಾರಣೆ

Published:
Updated:

ಬೆಂಗಳೂರು: ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಸುದೀಪ್‌ ಮತ್ತು ಯಶ್‌ ಒಳಗೊಂಡಂತೆ ಕನ್ನಡ ಚಿತ್ರರಂಗದ ಸೂಪರ್‌ ಸ್ಟಾರ್‌ಗಳು ಹಾಗೂ ಪ್ರಭಾವಿ ನಿರ್ಮಾಪಕರ ಮನೆಗಳ ಮೇಲೆ ಗುರುವಾರ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ಶುಕ್ರವಾರವೂ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಭಾರಿ ಬಜೆಟ್‌ ಸಿನಿಮಾಗಳಾದ ಕೆಜಿಎಫ್‌, ನಟಸಾರ್ವಭೌಮ, ದಿ ವಿಲನ್‌ ಚಿತ್ರಗಳ ನಿರ್ಮಾಪಕರಾದ ವಿಜಯ್‌ ಕಿರಗಂದೂರು, ರಾಕ್‌ಲೈನ್‌ ವೆಂಕಟೇಶ್‌ ಹಾಗೂ ಸಿ.ಆರ್. ಮನೋಹರ್‌ ಅವರ ಮನೆಗಳಲ್ಲೂ ಪರಿಶೀಲನೆ ನಡೆಯುತ್ತಿದೆ. ಅಧಿಕಾರಿಗಳ ಕೈಗೆ ಸಿಕ್ಕಿರುವ ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆ ಪತ್ರಗಳು, ಭಾರಿ ಪ್ರಮಾಣದ ಚಿನ್ನಾಭರಣ ಹಾಗೂ ಹಣದ ಮೂಲ ಕುರಿತು ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿಐಟಿ ದಾಳಿಗೆ ಕಕ್ಕಾಬಿಕ್ಕಿಯಾದ ಚಂದನವನ

ಐ.ಟಿ ದಾಳಿಗೆ ಗುರಿಯಾಗಿರುವವರು, ಅವರ ಕುಟುಂಬದ ಸದಸ್ಯರ ಮೊಬೈಲ್‌ಗಳು ಸ್ವಿಚ್‌ ಆಫ್‌ ಆಗಿವೆ. ಚಲನವಲನಗಳನ್ನು ನಿರ್ಬಂಧಿಸಲಾಗಿದೆ. ಅವರನ್ನು ಭೇಟಿ ಮಾಡಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಸುದೀಪ್‌ ಭೇಟಿಗೆ ಆಗಮಿಸಿದ್ದ ‘ಪೈಲ್ವಾನ್‌’ ಸಿನಿಮಾ ನಿರ್ದೇಶಕ ಎಸ್. ಕೃಷ್ಣ ಅವರನ್ನು ವಾಪಸ್‌ ಕಳುಹಿಸಲಾಯಿತು. ಹೊರಗಿನಿಂದಲೇ ಅವರು ನಟನಿಗೆ ಕೈಬೀಸಿ ಮರಳಿ ಹೋಗಿದ್ದಾರೆ.

ಐ.ಟಿ ಜಂಟಿ ಆಯುಕ್ತ ರಮೇಶ್‌ ಶುಕ್ರವಾರ ‘ಪವರ್‌ಸ್ಟಾರ್‌’ ಪುನೀತ್‌ ಹಾಗೂ ಯಶ್‌ ಅವರ ಮಾವನ ಮನೆಗೆ ಭೇಟಿ ನೀಡಿದ್ದರು. ಕೆಲ ಹೊತ್ತು ಅಲ್ಲಿದ್ದು, ಪರಿಶೀಲನೆ ವೀಕ್ಷಿಸಿದರು. ನಟರು, ನಿರ್ಮಾಪಕರು ಮತ್ತು ಸಂಬಂಧಿಕರ ಬ್ಯಾಂಕ್‌ ಖಾತೆಗಳು, ಠೇವಣಿಗಳು ಹಾಗೂ ಲಾಕರ್‌ಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಮೈಸೂರಿನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಸುದೀಪ್‌ ಗುರುವಾರ ತರಾತುರಿಯಲ್ಲಿ ಬೆಂಗಳೂರಿಗೆ ದೌಡಾಯಿಸಿದ್ದರು. ಯಶ್‌ ಅವರೂ ಮುಂಬೈನಿಂದ ಹಿಂತಿರುಗಿದ್ದರು. ಇಬ್ಬರನ್ನೂ ಅಧಿಕಾರಿಗಳು ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಶಿವರಾಜ್‌ ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಎರಡು ದಿನದಿಂದಲೂ ಮನೆಯಲ್ಲೇ ಇದ್ದಾರೆ ಎಂದು ಮೂಲಗಳು ವಿವರಿಸಿವೆ.

ಜಿಎಸ್‌ಟಿ ವಂಚನೆ ಆರೋಪ?

ನಟರು ಮತ್ತು ನಿರ್ಮಾಪಕರು ಸರಕು ಹಾಗೂ ಸೇವಾ ತೆರಿಗೆ ತಪ್ಪಿಸಿದ್ದಾರೆನ್ನಲಾದ ಪ್ರಕರಣದಲ್ಲಿ ದಾಳಿ ನಡೆಸಲು ಸಿಜಿಎಸ್‌ಟಿ ಮತ್ತು ಎಸ್‌ಜಿಎಸ್‌ಟಿ ಇಲಾಖೆಗಳು ದಾಳಿ ನಡೆಸಲು ಸಿದ್ಧತೆ ನಡೆಸಿರುವಾಗಲೇ ಆದಾಯ ತೆರಿಗೆ ಇಲಾಖೆ ದಾಳಿ ಆಗಿದೆ.

ಕನ್ನಡದ ತಾರಾ ವರ್ಚಸ್ಸಿನ ನಟರು ನಿರ್ಮಾಪಕರಿಂದ ₹ 5 ಕೋಟಿ ಸಂಭಾವನೆ ಪಡೆದು ಸಿಜಿಎಸ್‌ಟಿ ಮತ್ತು ಜಿಎಸ್‌ಟಿ ತೆರಿಗೆಗಳನ್ನು ತಪ್ಪಿಸಿರುವ ಸಾಧ್ಯತೆಯಿದೆ ಎಂದು ಜಿಎಸ್‌ಟಿ ಜಾಗೃತ ದಳ ನೀಡಿರುವ ಮಾಹಿತಿ ಅನುಸರಿಸಿ ದಾಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಷ್ಟರೊಳಗೆ ಐ.ಟಿ ಇಲಾಖೆ ರಂಗಪ್ರವೇಶಿಸಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ನಿರ್ಮಾ‍ಪಕರಿಗೆ ಸಾಕಷ್ಟು ಆದಾಯ ಸಂಪಾದನೆ ಮಾಡಿಕೊಡುತ್ತಿರುವ ಮಲ್ಟಿಫ್ಲೆಕ್ಸ್‌ಗಳು, ಸಿನಿಮಾ ವಿತರಕರು ಸರಕು ಮತ್ತು ಸೇವಾ ತೆರಿಗೆ ತಪ್ಪಿಸಿರುವ ಸಾಧ್ಯತೆಯಿದ್ದು ಪರಿಶೀಲನೆ ನಡೆಯುತ್ತಿದೆ ಎಂದೂ ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 18

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !