ಯಶ್, ಸುದೀಪ್, ಪುನೀತ್‌, ಶಿವರಾಜ್‌ಕುಮಾರ್ ಮನೆ ಸೇರಿ ಸುಮಾರು 25 ಕಡೆ ಐಟಿ ದಾಳಿ

7

ಯಶ್, ಸುದೀಪ್, ಪುನೀತ್‌, ಶಿವರಾಜ್‌ಕುಮಾರ್ ಮನೆ ಸೇರಿ ಸುಮಾರು 25 ಕಡೆ ಐಟಿ ದಾಳಿ

Published:
Updated:

ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ ‘ಸ್ಯಾಂಡಲ್‌ವುಡ್‌’ನ ಪ್ರಭಾವಿ, ನಿರ್ಮಾಪಕರು, ನಿರ್ದೇಶಕರು ಹಾಗೂ ನಟರೂ ಸೇರಿದಂತೆ ಭಾರಿ ಕುಳಗಳ ಮನೆಗಳು ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ಭಾರಿ ‘ಶಾಕ್‌’ ನೀಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಕಳೆದ ವಾರ ಭಾರಿ ಸದ್ದು ಮಾಡಿದ್ದ ಕೆಜಿಎಫ್‌ ಸಿನಿಮಾ ನಿರ್ಮಾಣ ಮಾಡಿರುವ ವಿಜಯ್‌ ಕಿರಂಗದೂರು, ನಟರಾದ ಯಶ್‌, ಸುದೀಪ್, ಪುನೀತ್, ಶಿವರಾಜ್‌ಕುಮಾರ್ ಮನೆ ಹಾಗೂ ಕಚೇರಿಗಳೂ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ.


ಪುನೀತ್‌ ರಾಜ್‌ಕುಮಾರ್ ಮನೆ ಎದುರು ಪೊಲೀಸ್ ಬಂದೋಬಸ್ತ್

ಕನ್ನಡ ಸಿನಿಮಾಗಳ ನಿರ್ಮಾಪಕರು, ನಿರ್ದೇಶಕರು ಮತ್ತು ನಟರ ಮನೆಗಳ ಮೇಲೆ ದಾಳಿ ನಡೆದಿರುವುದನ್ನು ‘ಪ್ರಜಾವಾಣಿ’ಗೆ ಖಚಿತಪಡಿಸಿರುವ ಐ.ಟಿ ಮೂಲಗಳು, ಯಾರ್‍ಯಾರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂಬುದನ್ನು ಹೆಸರುಗಳನ್ನು ಬಹಿರಂಗ ಮಾಡಲು ನಿರಾಕರಿಸಿವೆ.

ಸುಮಾರು 25ಕ್ಕೂ ಹೆಚ್ಚು ಸ್ಥಳಗಳ ಮೇಲೆ ನೂರಾರು ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಮೂವರು ಪ್ರಮುಖ ನಿರ್ಮಾಪಕರು ನಿರ್ಮಿಸಿರುವ ಸಿನಿಮಾಗಳು, ಗಳಿಸಿರುವ ಸಂಪಾದನೆಗೆ ಸಂಬಂಧಿಸಿದ ದಾಖಲೆ ಪರಿಶೀಲನೆ ನಡೆಯುತ್ತಿದೆ. ಈ ನಿರ್ಮಾಪಕರ ಜೊತೆ ನಿಕಟ ಸಂಬಂಧ ಹೊಂದಿರುವವರ ಮನೆ, ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ನಿರ್ಮಾಪಕರು, ನಟರು ಬೆಳಿಗ್ಗೆ ನಿದ್ದೆಯಿಂದ ಏಳುವ ಮೊದಲೇ ಐ.ಟಿ. ಅಧಿಕಾರಿಗಳು ಮನೆಗಳ ಬಾಗಿಲು ತಟ್ಟಿದ್ದಾರೆ. ವಾರೆಂಟ್‌ಗಳನ್ನು ಹಿಡಿದೇ ಬಂದಿದ್ದಾರೆ. ಸ್ಯಾಂಡಲ್‌ವುಡ್‌ ನಟ, ನಿರ್ಮಾಪಕರ ಮನೆಗಳ ಮೇಲೆ ನಡೆದಿರುವ ಅತ್ಯಂತ ದೊಡ್ಡ ದಾಳಿ ಇದಾಗಿದ್ದು, ಕನ್ನಡ ಚಲನಚಿತ್ರ ರಂಗವನ್ನೇ ಬೆಚ್ಚಿ ಬೀಳಿಸಿದೆ.

ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಿರ್ಮಾಪಕ, ಜೆಡಿಎಸ್ ಶಾಸಕ ಸಿ.ಆರ್‌. ಮನೋಹರ್‌ ಅವರಲ್ಲದೆ, ಕನ್ನಡದ ಸ್ಟಾರ್‌ ನಟರು, ನಿರ್ಮಾಪಕರ ಮನೆಗಳಲ್ಲೂ ಶೋಧ ನಡೆಯುತ್ತಿದೆ.   

Tags: 

ಬರಹ ಇಷ್ಟವಾಯಿತೆ?

 • 108

  Happy
 • 7

  Amused
 • 4

  Sad
 • 2

  Frustrated
 • 12

  Angry

Comments:

0 comments

Write the first review for this !