ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಪಕ್ಷಗಳ ನಾಯಕರ ನಿದ್ದೆಗೆಡಿಸಿದ ಐ.ಟಿ ದಾಳಿ

ಬೆಂಗಳೂರು, ಮಂಡ್ಯ, ಹಾಸನದ ವಿವಿಧೆಡೆ ಶೋಧ
Last Updated 16 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು/ಮಂಡ್ಯ/ಹಾಸನ: ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಎರಡು ದಿನ ಉಳಿದಿರುವ ಹೊತ್ತಿನಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆಹಲವೆಡೆ ದಾಳಿ ಮುಂದುವರಿಸಿರುವುದು ಮೈತ್ರಿ ಪಕ್ಷಗಳ ನಾಯಕರ ನಿದ್ದೆಗೆಡಿಸಿದೆ.

ಬೆಂಗಳೂರು, ಮಂಡ್ಯ ಮತ್ತು ಹಾಸನ ಸೇರಿದಂತೆ ವಿವಿಧೆಡೆ ಏಕಕಾಲಕ್ಕೆ ಐ.ಟಿ ಅಧಿಕಾರಿಗಳ ತಂಡ ಕಾರ್ಯಾಚರಣೆಗಿಳಿದಿದೆ. ಜೆಡಿಎಸ್‌ ನಾಯಕರ ಆಪ್ತರ ಮನೆ ಮತ್ತು ಕಚೇರಿಗಳನ್ನು ಶೋಧಿಸಲಾಗಿದೆ. ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಸಚಿವರಾದ ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು ಮತ್ತು ಡಿ.ಸಿ. ತಮ್ಮಣ್ಣ ಅವರ ಆಪ್ತರ ಮನೆಗಳಲ್ಲಿ ‌ಪರಿಶೀಲನೆ ನಡೆದಿದೆ.

ಹಾಸನ ಜಿಲ್ಲೆಯಲ್ಲಿ ಒಟ್ಟು 5 ಕಡೆ, ಮಂಡ್ಯದಲ್ಲಿ 1 ಕಡೆ ಹಾಗೂ ಬೆಂಗಳೂರಿನ 1 ಕಡೆ ದಾಳಿ ನಡೆದಿದೆ. ಎಷ್ಟು ಹಣ, ಆಭರಣ ಆಸ್ತಿಪಾಸ್ತಿ ಪತ್ತೆಯಾಗಿದೆ ಎಂಬ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಆದರೆ, ಕೆಲವು ಉದ್ಯಮಿಗಳು ಗಳಿಸಿರುವ ಆದಾಯ ಘೋಷಣೆ ಮಾಡಿಲ್ಲ ಎಂಬ ಮಾಹಿತಿ ಆಧರಿಸಿ ದಾಳಿ ನಡೆದಿದೆ ಎಂದು ಐ.ಟಿ ಮೂಲಗಳು ತಿಳಿಸಿವೆ.

ಸಚಿವ ಎಚ್.ಡಿ.ರೇವಣ್ಣ ಅವರ ದೊಡ್ಡಪ್ಪನ ಮಗ ಹೊಳೆನರಸೀಪುರ ತಾಲ್ಲೂಕು ಹರದನಹಳ್ಳಿಯ ಪಾಪಣ್ಣಿ, ಹಾಸನ ವಿದ್ಯಾನಗರ ಗುತ್ತಿಗೆದಾರ ಅನಂತ ಕುಮಾರ್‌, ಕಾರ್ಲೆ ಇಂದ್ರೇಶ್, ರವೀಂದ್ರ ನಗರದ ಪಟೇಲ್ ಶಿವರಾಂ (ಮಾಜಿ ಎಂಎಲ್‌ಸಿ) ಹೌಸಿಂಗ್ ಬೋರ್ಡ್‌ನಲ್ಲಿರುವ ಎಚ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಅವರ ಮನೆಗಳನ್ನೂ ಶೋಧಿಸಲಾಗಿದೆ.

ಮಂಡ್ಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಅವರ ಪತಿ ಸಾದೊಳಲು ಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ತಿಮ್ಮೇಗೌಡರ ಮನೆ, ಕಚೇರಿಗಳಲ್ಲೂತಡಕಾಡಿದರು.

ರೇವಣ್ಣ ಬೆಂಗಾವಲು ವಾಹನ ತಪಾಸಣೆ

ಹೊಳೆನರಸೀಪುರ: ಇಲ್ಲಿಯ ಚೆನ್ನಾಂಬಿಕಾ ಚಿತ್ರಮಂದಿರ ಸಮೀಪ ಸಚಿವ ಎಚ್.ಡಿ. ರೇವಣ್ಣ ಅವರ ಬೆಂಗಾವಲು ವಾಹನದ ತಪಾಸಣೆ ಮಾಡಿದ ಐ.ಟಿ ಅಧಿಕಾರಿಗಳ ತಂಡ ₹ 1.20 ಲಕ್ಷ ದಾಖಲೆ ಇಲ್ಲದ ಹಣ ವಶಪಡಿಸಿಕೊಂಡಿದೆ.

ಸೋಮವಾರ ರಾತ್ರಿ 12.45ರ ಸುಮಾರಿಗೆ ಹಣ ಪತ್ತೆ ಆಗಿದೆ. ‘ಬೆಂಗಾವಲು ವಾಹನದಲ್ಲಿ ಚಾಲಕ ಚಂದ್ರಯ್ಯ, ಪೊಲೀಸ್‌ ಸಿಬ್ಬಂದಿ ಮತ್ತು ರವಿ ಎಂಬುವರು ಇದ್ದರು’ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT