‘ಜೆಡಿಎಸ್ ದೇವೇಗೌಡ ಕುಟುಂಬದ ಪಕ್ಷವಲ್ಲ, ಎಲ್ಲ ನಾಯಕರ ಅಭಿಪ್ರಾಯಕ್ಕೆ ಮನ್ನಣೆ ಇದೆ’

ಮಂಗಳವಾರ, ಮಾರ್ಚ್ 26, 2019
31 °C

‘ಜೆಡಿಎಸ್ ದೇವೇಗೌಡ ಕುಟುಂಬದ ಪಕ್ಷವಲ್ಲ, ಎಲ್ಲ ನಾಯಕರ ಅಭಿಪ್ರಾಯಕ್ಕೆ ಮನ್ನಣೆ ಇದೆ’

Published:
Updated:

ಬೆಂಗಳೂರು: ‘ಜೆಡಿಎಸ್ ಕೇವಲ ನನ್ನ ಕುಟುಂಬದ ಪಕ್ಷವಷ್ಟೇ ಅಲ್ಲ. ಎಲ್ಲ ನಾಯಕರು ಮತ್ತು ಕಾರ್ಯಕರ್ತರು ಅಭಿಪ್ರಾಯಕ್ಕೆ ನಮ್ಮ ಪಕ್ಷದಲ್ಲಿ ಬೆಲೆಯಿದೆ. ಎಲ್ಲರ ಅಭಿಪ್ರಾಯ ಪಡೆದೇ ನಾನು ನನ್ನ ನಿರ್ಧಾರ ಪ್ರಕಟಿಸುತ್ತೇನೆ’ ಎಂದು ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಮಂಗಳವಾರ ನಡೆದ ‘ಪ್ರಜಾ ಮತ’ ಸಂವಾದದಲ್ಲಿ ಮಾತನಾಡಿದ ದೇವೇಗೌಡ, ಕುಟುಂಬ ರಾಜಕಾರಣದ  ಬಗ್ಗೆ ಕೇಳಿದ ಪ್ರಶ್ನೆಗೆ ಸುದೀರ್ಘ ಉತ್ತರವನ್ನೇ ಕೊಟ್ಟರು. ಅವರ ಉತ್ತರದ ಅಕ್ಷರ ರೂಪ ಇಲ್ಲಿದೆ...

‘ನನ್ನ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಓರ್ವ ಉದಯೋನ್ಮುಖ ಸಿನಿಮಾ ನಟ. ಮಂಡ್ಯ ಜಿಲ್ಲೆಯ ಕೆಲವು ಹಳ್ಳಿಗಳಿಗೆ ಭೇಟಿ ನೀಡಿದ್ದಾಗ ಅಲ್ಲಿನ ಜನರು ಅವನನ್ನು ರಾಜಕೀಯಕ್ಕೆ ಬಾ ಅಂತ ಕರೆದಿದ್ದಾರೆ. ಹಿರಿಯರನ್ನು ಕೇಳಿ ನನ್ನ ನಿರ್ಧಾರ ತಿಳಿಸ್ತೀನಿ ಅಂತ ಅವನು ಹೇಳಿದ್ದ. ಕುಮಾರಸ್ವಾಮಿ ನಡೆಸಿದ ಸಮಾವೇಶಗಳಲ್ಲಿಯೂ ಜನರು ನಿಖಿಲ್‌ರನ್ನು ರಾಜಕೀಯಕ್ಕೆ ತರಬೇಕು ಎಂದು ಒತ್ತಾಯಿಸಿದ್ದರು.

‘ಅಂಬರೀಷ್ ಅವರನ್ನು ರಾಜಕೀಯಕ್ಕೆ ತಂದಿದ್ದೇ ನಾನು. ಆದರೆ ನಂತರ ಅವರು ಕಾಂಗ್ರೆಸ್ ಸೇರಿಕೊಂಡರು. ಕಾವೇರಿ ವಿವಾದದ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಎಂ.ಪಿ.ಪ್ರಕಾಶ್, ಸಿಂಧ್ಯಾ ಅವರಂಥ ಅನೇಕರನ್ನು ನಾನು ಸಂಕಷ್ಟ ಸಂದರ್ಭಗಳಲ್ಲಿ ಬೆಂಬಲಿಸಿದ್ದೆ. ಡಾಕ್ಟರ್ ಮಗ ಡಾಕ್ಟರ್ ಆಗಬಹುದು, ವಕೀಲರ ಮಗ ವಕೀಲನಾಗಬಹುದು. ಹೀಗಿರುವಾಗ ರಾಜಕಾರಿಣಿಯ ಮಗ ರಾಜಕಾರಿಣಿ ಆದರೆ ಏನು ತಪ್ಪು? ನಮ್ಮ ಬೀಗರು ಮೊದಲಿನಿಂದಲೂ ರಾಜಕಾರಣದಲ್ಲಿ ಸಕ್ರಿಯರಾಗಿದ್ದವರು. ಅವರನ್ನು ನಾನೇನು ರಾಜಕಾರಣಕ್ಕೆ ಕರೆತರಲಿಲ್ಲ.

‘ನನ್ನ ಸೊಸೆ ಅನಿತಾ ಕುಮಾರಸ್ವಾಮಿಗೆ ರಾಜಕೀಯಕ್ಕೆ ಬರುವ ಆಸೆ ಇರಲಿಲ್ಲ. ಟೀವಿ ಚಾನೆಲ್ ನಡೆಸುತ್ತಿದ್ದ ಆಕೆಗೆ ಸ್ವಂತ ಪ್ರೊಡಕ್ಷನ್ ಹೌಸ್ ಮಾಡಿಕೊಳ್ಳುವ ಆಸೆಯಿತ್ತು. ಮಧುಗಿರಿ ಕ್ಷೇತ್ರದಲ್ಲಿ ಐಎಎಸ್‌ ಅಧಿಕಾರಿ ವೀರಭದ್ರಯ್ಯ ವಿಧಾನಸಭೆ ಚುನಾವಣೆಗೆ ನಿಲ್ಲಬೇಕಿತ್ತು. ಆದರೆ ಅವರ ರಾಜೀನಾಮೆ ಒಪ್ಪಿಕೊಳ್ಳುವುದನ್ನು ಮುಖ್ಯ ಕಾರ್ಯದರ್ಶಿ ತಡ ಮಾಡಿದರು. ಆಗ ಕುಮಾರಸ್ವಾಮಿಗೆ ಅಧಿಕಾರ ಹೋಗಿತ್ತು. ಜನರ ಸಹಾನುಭೂತಿಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಅವರ ಪತ್ನಿಯನ್ನು ಚುನಾವಣಾ ಕಣಕ್ಕೆ ಇಳಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ವೀರಭದ್ರಯ್ಯ ಮಧುಗಿರಿಯಿಂದ ಕಣಕ್ಕೆ ಇಳಿಯಬೇಕಿತ್ತು ಎಂದು ನೆನಪಿಸಿಕೊಂಡರು. 

‘ನನ್ನ ಮತ್ತೊಬ್ಬ ಸೊಸೆ ಭವಾನಿ, ಸಾಲಿಗ್ರಾಮದ ರಾಜಕಾರಿಣಿಗಳ ಕುಟುಂಬದಿಂದಲೇ ಬಂದವರು. ಆಕೆಗೆ ರಾಜಕಾರಣಕ್ಕೆ ಬರುವ ಆಸೆ ಇರಲಿಲ್ಲ ಎಂದು ನಾನು ಹೇಳಲಾರೆ. ಆದರೆ ಕ್ರಮೇಣ ಆಕೆಯ ಆಕಾಂಕ್ಷೆ ಮಗನನ್ನು ಮುಂದಕ್ಕೆ ತರುವುದರತ್ತ ವಾಲಿತು. ಈಗ ಅವನಿಗೆ ನಾನು ನನ್ನ ಕ್ಷೇತ್ರ ಬಿಟ್ಟುಕೊಟ್ಟಿದ್ದೇನೆ. ಹೀಗಾಗಿ ಆಕೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಅನ್ನಿಸುತ್ತೆ.

‘ನನ್ನ ಇಷ್ಟ ವರ್ಷಗಳ ರಾಜಕೀಯ ಜೀವನದಲ್ಲಿ ಎಂದಿಗೂ ನನ್ನ ಕುಟುಂಬಕ್ಕೆ ಪಕ್ಷವನ್ನು ರಾಜಕೀಯ ಏಣಿಯಾಗಿಸಬೇಕು ಎಂದು ಹವಣಿಸಲಿಲ್ಲ. ತುರ್ತು ಪರಿಸ್ಥಿತಿ ಸಂದರ್ಭ ನಾನು ಜೈಲಿನಲ್ಲಿದ್ದಾಗ ಪುಟ್ಟಸ್ವಾಮಿಗೌಡರನ್ನು ಎಂಎಲ್‌ಸಿ ಮಾಡಿದ್ದೆ. ನನ್ನ ಮಗ ರೇವಣ್ಣ ಉದ್ಯಮಿಯಾಗುವ ಹಂಬಲ ಹೊಂದಿದ್ದ. ಅವನು ಮೊದಲು ಜಿಲ್ಲಾ ಪಂಚಾಯಿತಿಗೆ ನಿಂತು ಗೆದ್ದು ಬಂದಾಗಲೂ ನಾನು ಅವನನ್ನು ಜಿ.ಪಂ. ಅಧ್ಯಕ್ಷನನ್ನಾಗಿ ಮಾಡಲಿಲ್ಲ. ಅವನ ಬದಲು ದಲಿತ ಸಮುದಾಯದ ವ್ಯಕ್ತಿಯನ್ನು ಅಧ್ಯಕ್ಷನನ್ನಾಗಿ ಮಾಡಿದ್ದೆ.

‘ನನ್ನ ವಿರುದ್ಧ ಪಿ.ಜಿ.ಆರ್‌.ಸಿಂಧ್ಯಾ ಅವರನ್ನು ರಾಮಕೃಷ್ಣ ಹೆಗಡೆ ನಿಲ್ಲಿಸಿದ್ದರು. ಆದರೂ ಸಿಂಧ್ಯಾ ಬಗ್ಗೆ ನಾನು ದ್ವೇಷ ಬೆಳೆಸಿಕೊಳ್ಳಲಿಲ್ಲ. ಗೃಹಸಚಿವರಾಗಿ ಸಿಂಧ್ಯಾ ಒಳ್ಳೆಯ ಕೆಲಸ ಮಾಡುತ್ತಿದ್ದಾಗಲೇ ಅವರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಲು ಹೆಗಡೆ ಮುಂದಾದರು. ಸಿಂಧ್ಯಾ ನೊಂದುಕೊಂಡಾಗ ನಾನು ‘ಬೇರೆಯವರನ್ನು ಹುಡುಕಿ’ ಎಂದು ಸಲಹೆ ನೀಡಿ ಅವರಿಗೆ ಸಮಾಧಾನ ಮಾಡಿದ್ದೆ.

‘ಕುಮಾರಸ್ವಾಮಿಯನ್ನೂ ನಾನು ರಾಜಕಾರಣಕ್ಕೆ ತರಲಿಲ್ಲ, ಪಕ್ಷದ ಅಧ್ಯಕ್ಷರನ್ನಾಗಿಯೂ ಮಾಡಲಿಲ್ಲ. ಸಿದ್ದರಾಮಯ್ಯ ಆಗ ಏನೇನೋ ಮಾತಾಡ್ತಿದ್ರು. ಈಗ ಇಬ್ಬರೂ ಜತೆಜತೆಗೆ ಸರ್ಕಾರ ಮಾಡ್ತಿದ್ದಾರೆ. ಇನ್ನೊಬ್ಬ ಮೊಮ್ಮಗ ಪ್ರಜ್ವಲ್ ಬಿಇ ಓದಿದ್ದಾನೆ. ಎಂ.ಟೆಕ್ ಮಾಡು ಅಂತ ಹೇಳಿದ್ದೆ. ಜಿ.ಪಂ. ಚುನಾವಣೆ ಮುಗೀಲಿ, ವಿಧಾನಸಭೆ ಚುನಾವಣೆ ಮುಗೀಲಿ ಓದ್ತೀನಿ ಅಂತಿದ್ದ. ಈಗ ಅವನಿಗೂ ರಾಜಕೀಯದ ಒಲವು ಬಂದಿದೆ. ಇದರಲ್ಲಿ ನನ್ನ ತಪ್ಪೇನಿದೆ? ಪ್ರಜ್ವಲ್ ಹೆಸರು ಘೋಷಿಸುವ ಮೊದಲು ನನ್ನ ಜಿಲ್ಲೆಯ ಎಲ್ಲ ಶಾಸಕರನ್ನು ಸಂಪರ್ಕಿಸಿದ್ದೆ. ಇದು ನನ್ನೊಬ್ಬನ ನಿರ್ಧಾರವಲ್ಲ’.

ಬರಹ ಇಷ್ಟವಾಯಿತೆ?

 • 4

  Happy
 • 4

  Amused
 • 0

  Sad
 • 0

  Frustrated
 • 17

  Angry

Comments:

0 comments

Write the first review for this !