ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಡೇ ಸಿದ್ದಾರ್ಥ ಸಾವು: ಐಟಿ ಕಿರುಕುಳದ ತನಿಖೆಗೆ ಐವನ್ ಡಿಸೋಜ ಆಗ್ರಹ

Last Updated 3 ಆಗಸ್ಟ್ 2019, 11:25 IST
ಅಕ್ಷರ ಗಾತ್ರ

ಮಂಗಳೂರು: ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಅವರ ಸಾವಿಗೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಗಳ ಕಿರುಕುಳವೇ ಕಾರಣವಾಗಿದ್ದು ಈ ಕುರಿತು ಕೇಂದ್ರ ಸರ್ಕಾರ ತಕ್ಷಣವೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಐಟಿ ಮತ್ರು ಇಡಿ ಕಿರುಕುಳವೇ ಉದ್ಯಮಿಯ ಸಾವಿಗೆ ಕಾರಣ ಎಂಬುದು ಸಿದ್ದಾರ್ಥ ಅವರ ಪತ್ರದಲ್ಲಿ ಸ್ಪಷ್ಟವಾಗಿದೆ. ಕಿರುಕುಳ ನೀಡಿ, ಸಾವಿಗೆ ಕಾರಣವಾಗಿರುವ ಐಟಿ ಮತ್ತು ಇಡಿ ಅಧಿಕಾರಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಮತ್ತು ಮಾನವ ಹತ್ಯೆ ಆರೋಪದಡಿ ಮೊಕದ್ದಮೆ ದಾಖಲಿಸಬೇಕು' ಎಂದು ಒತ್ತಾಯಿಸಿದರು.

ಜನಸ್ನೇಹಿ, ಉದ್ಯಮ ಸ್ನೇಹಿ ತೆರಿಗೆ ವ್ಯವಸ್ಥೆ ಇರಬೇಕು. ಆದರೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆಯ ನೆಪದಲ್ಲಿ ಸಿದ್ದಾರ್ಥ ಅವರ ಕಂಪನಿಯ ಆಸ್ತಿ, ಶೇರುಗಳನ್ನು ಜಪ್ತಿ ಮಾಡಿಟ್ಡುಕೊಂಡು ಉದ್ಯಮ‌ ನಡೆಸದಂತೆ ಹಿಂಸಿಸಿದ್ದಾರೆ. 50,000 ಜನರಿಗೆ ಉದ್ಯೋಗ ನೀಡಿದ್ದ ಉದ್ಯಮಿ ಕಿರುಕುಳ ತಾಳಲಾರದೇ, ಮರ್ಯಾದೆಗೆ ಅಂಜಿ ಸಾವಿಗೆ ಶರಣಾಗಿದ್ದಾರೆ. ಇಂತಹ ಪ್ರಕರಣ ಮರುಕಳಿಸಬಾರದು. ಈ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಸಿದ್ದಾರ್ಥ ಅವರ ಪ್ರಕರಣದಲ್ಲಿ ದೇಶದ ತೆರಿಗೆ ನೀತಿಗೆ ವಿರುದ್ಧವಾಗಿ ಆದಾಯ ತೆರಿಗೆ ಅಧಿಕಾರಿಗಳು ನಡೆದುಕೊಂಡಿದ್ದಾರೆ. ಇಂತಹ ನಡೆಯನ್ನು ಒಪ್ಪಲಾಗದು. ಈ ರೀತಿ ವ್ಯವಸ್ಥಿತವಾಗಿ ಉದ್ಯಮಿಗಳನ್ನು ನಾಶ ಮಾಡುವ ಸಂಚಿನ ವಿರುದ್ಧ ದೇಶದಲ್ಲಿ ಪ್ರಬಲವಾದ ಹೋರಾಟ ನಡೆಯಬೇಕಿದೆ ಎಂದು ಹೇಳಿದರು.

' ಅದಾನಿ, ಅಂಬಾನಿಯಂತಹ ಕೆಲವೇ ಉದ್ಯಮಿಗಳ ಕೈಗೆ ದೇಶದ ಎಲ್ಲ ಉದ್ಯಮಗಳನ್ನು ಒಪ್ಪಿಸುವ ಪ್ರಯತ್ನ ನಡೆದಿದೆ. ಅದರ ಭಾಗವಾಗಿಯೇ ಸಿದ್ದಾರ್ಥ ಅವರಂತಹ ಉದ್ಯಮಿಯ ಸಾವು ಸಂಭವಿಸಿದೆ. 25ಕ್ಕೂ ಹೆಚ್ಚು ಉದ್ಯಮಿಗಳು ದೇಶ ಬಿಟ್ಟು ಪರಾರಿಯಾಗುವಂತೆ ಆಗಿದೆ' ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಕೆಟ್ಟ ನಿರ್ಧಾರಗಳಿಂದ ದೇಶ ಆರ್ಥಿಕ ಕುಸಿತದತ್ತ ಸಾಗಿದೆ. ಸರಕು ಮತ್ತು ಸೇವಾ ತೆರಿಗೆ ಅನುಷ್ಠಾನದಲ್ಲಿನ ಲೋಪದಿಂದ ಎಲ್ಲ ಉದ್ಯಮಗಳೂ ಹಿನ್ನಡೆ ಅನುಭವಿಸುತ್ತಿವೆ. ಅದನ್ನು ಮುಚ್ಚಿಡಲು ತೆರಿಗೆ ಇಲಾಖೆಯ ಮೂಲಕ ಉದ್ಯಮಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT