ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಮಾಜಿ ಸಚಿವ ದೊಡ್ಡೇರಿಯ ಬಡ ಶಿಕ್ಷಕನ ಪುತ್ರ

Last Updated 25 ನವೆಂಬರ್ 2018, 20:16 IST
ಅಕ್ಷರ ಗಾತ್ರ

ಚಿತ್ರದುರ್ಗ: ಚಳ್ಳಕೆರೆ ಪಟ್ಟಣದಿಂದ ಆರು ಕಿ.ಮೀ ದೂರದಲ್ಲಿರುವ ದೊಡ್ಡೇರಿ, ಸಿ.ಕೆ.ಜಾಫರ್‌ ಷರೀಫ್‌ ಅವರ ಹುಟ್ಟೂರು. ಬಡ ಮೇಷ್ಟ್ರ ಪುತ್ರನಾಗಿ ಜನಿಸಿದ ಷರೀಫ್‌ ಅವರು ಬಾಲ್ಯದ ದಿನಗಳನ್ನು ಕಳೆದಿದ್ದು ಮಸೀದಿ ಪಕ್ಕದ ಪುಟ್ಟ ಮನೆಯಲ್ಲಿ. ಕುಟುಂಬ ಪಟ್ಟಣಕ್ಕೆ ಸ್ಥಳಾಂತರಗೊಂಡ ಬಳಿಕ ಈ ಮನೆ ಮಸೀದಿಯಾಗಿ ಪರಿವರ್ತನೆಯಾಗಿದೆ.

ಸಿ. ಅಬ್ದುಲ್‌ ಕರೀಮ್‌ ಅವರ ಪುತ್ರರಾಗಿ 1933ರ ನ.3ರಂದು ಷರೀಫ್‌ ಜನಿಸಿದಾಗ ದೇಶದಲ್ಲಿ ಸ್ವಾತಂತ್ರ್ಯ ಚಳವಳಿ ಉತ್ತುಂಗದ ಸ್ಥಿತಿಯಲ್ಲಿತ್ತು. ಗ್ರಾಮದ ಹತ್ತಾರು ಮಕ್ಕಳಿಗೆ ಮನೆ ಪಾಠ ಹೇಳಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದ ಅಬ್ದುಲ್‌, ದೊಡ್ಡೇರಿ ತೊರೆದು ಚಳ್ಳಕೆರೆ ಪಟ್ಟಣ ಸೇರಿದರು. ಕಿರಾಣಿ ಅಂಗಡಿಯೊಂದು ಈ ಕುಟುಂಬಕ್ಕೆ ಆಸರೆಯಾಗಿತ್ತು. ಪಟ್ಟಣದ ಬಿಸಿನೀರು ಮುದ್ದಪ್ಪ ಸರ್ಕಾರಿ ಶಾಲೆಯಲ್ಲಿ ಮೆಟ್ರುಕ್ಯುಲೇಷನ್‌ ಮುಗಿಸಿದರು.

ತಂದೆಯ ಅಕಾಲಿಕ ಸಾವು ಷರೀಫ್ ಅವರು ಶಿಕ್ಷಣ ಮೊಟಕುಗೊಳಿಸುವ ಅನಿವಾರ್ಯತೆಯನ್ನು ಸೃಷ್ಟಿಸಿತು. ಕುಟುಂಬದ ಹೊಣೆ ಹೊತ್ತ ಅವರು ಕಾಂಗ್ರೆಸ್‌ ಪಕ್ಷದ ಸೆಳೆತಕ್ಕೂ ಒಳಗಾದರು. ಎಸ್‌.ನಿಜಲಿಂಗಪ್ಪ ಅವರು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾಗ ಕಚೇರಿಯ ಸಹಾಯಕರಾಗಿ ಷರೀಫ್‌ ರಾಜಕಾರಣಕ್ಕೆ ಬಂದರು. ನಿಜಲಿಂಗಪ್ಪ ಅವರ ರಾಜಕೀಯ ಗರಡಿಯಲ್ಲಿ ಬೆಳೆದ ಷರೀಫ್‌, ಪಕ್ಷದ ಕಚೇರಿ ವ್ಯವಸ್ಥಾಪಕರಾಗಿಯೂ ಕೆಲಸ ಮಾಡಿದರು.

‘ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಷರೀಫ್‌ ಅವರ ಕಾರ್ಯಕ್ಷೇತ್ರ ಬೆಂಗಳೂರಿಗೆ ಬದಲಾಯಿತು. ಪಕ್ಷ ಸಂಘಟನೆಗಾಗಿ ಕಚೇರಿಯಲ್ಲಿಯೇ ವಾಸ್ತವ್ಯ ಹೂಡುತ್ತಿದ್ದ ಅಪರೂಪದ ರಾಜಕಾರಣಿಯಾಗಿದ್ದರು. ಸದಸ್ಯರ ನೋಂದಣಿ ಅಭಿಯಾನಕ್ಕೆ ಹಗಲಿರುವುದು ದುಡಿಯುತ್ತಿದ್ದರು. ಆಗ ಒಟ್ಟಿಗೆ ಖಾರ ಮಂಡಕ್ಕಿ ತಿನ್ನುತ್ತಿದ್ದೆವು’ ಎಂದು ನೆನಪಿಸಿಕೊಳ್ಳುತ್ತಾರೆ ಮಾಜಿ ರಾಜ್ಯಸಭಾ ಸದಸ್ಯರೂ ಆಗಿದ್ದ ಷರೀಫ್‌ ಒಡನಾಡಿ ಎಚ್‌.ಹನುಮಂತಪ್ಪ.

ಸಾಹಿತಿ ಬೆಳಗೆರೆ ಕೃಷ್ಣಶಾಸ್ತ್ರಿ, ಜಿ.ಶಿವಪ್ಪ, ಎನ್‌.ಜಯಣ್ಣ ಅವರ ಸಮಕಾಲೀನರಾಗಿದ್ದ ಷರೀಫ್‌, ಚಿತ್ರದುರ್ಗದ ನಂಟು ಕಡಿದುಕೊಂಡಿರಲಿಲ್ಲ.

ರೈಲ್ವೆ ಸಚಿವರಾದಾಗ ರಾಯದುರ್ಗ–ಚಿತ್ರದುರ್ಗ ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದರು. ಚಿತ್ರದುರ್ಗದ ಅಸರ್‌ ಮೊಹಲ್ಲಾದಲ್ಲಿದ್ದ ಮನೆಗೆ ಆಗಾಗ ಭೇಟಿ ನೀಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT