ಶಾಸಕಾಂಗ– ನ್ಯಾಯಾಂಗ ಯಾವುದು ‘ಸುಪ್ರೀಂ’?

7
ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ

ಶಾಸಕಾಂಗ– ನ್ಯಾಯಾಂಗ ಯಾವುದು ‘ಸುಪ್ರೀಂ’?

Published:
Updated:

‌ಬೆಂಗಳೂರು: ಶಾಸಕಾಂಗ, ನ್ಯಾಯಾಂಗ ಈ ಪೈಕಿ ಯಾವುದು ‘ಸುಪ್ರೀಂ’ ಎಂಬ ವಿಚಾರದಲ್ಲಿ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು.

ಆರಂಭದಲ್ಲಿ ಬಿಜೆಪಿಯ ಜಗದೀಶ ಶೆಟ್ಟರ್ ವಿಷಯ ಪ್ರಸ್ತಾಪಿಸಿದರು. ‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ನೀಡಿದ್ದ 15 ದಿನಗಳ ಕಾಲಾವಕಾಶವನ್ನು ಕಡಿತ ಮಾಡುವ ಮೂಲಕ ಶಾಸಕಾಂಗದ ಕಾರ್ಯವೈಖರಿಯಲ್ಲಿ ಸುಪ್ರಿಂ ಕೋರ್ಟ್ ಮೂಗುತೂರಿಸಿದೆ. ರಾಜ್ಯಪಾಲರ ಅಧಿಕಾರವನ್ನು ಮೊಟಕು ಮಾಡಲು ನ್ಯಾಯಾಂಗಕ್ಕೆ ಅವಕಾಶ ಕೊಟ್ಟವರು ಯಾರು’ ಎಂದು ಬಿಜೆಪಿಯ ಪಿ. ರಾಜೀವ್‌ ಪ್ರಶ್ನಿಸಿದರು.

‘ರಾಜ್ಯಪಾಲರ ವಿವೇಚನಾಧಿಕಾರವನ್ನು ಮೊಟಕುಗೊಳಿಸುವ ಮೂಲಕ ಶಾಸಕಾಂಗದ ಮೇಲೆ ನ್ಯಾಯಾಂಗ ಸವಾರಿ ಮಾಡುತ್ತಿದೆ’ ಎಂದು ಟೀಕಿಸಿದ ಬಿಜೆಪಿ ಮಾಧುಸ್ವಾಮಿ, ‘ನಾವು ನರ ಸತ್ತವರು. ಹೀಗಾಗಿ ಈ ರೀತಿ ನಡೆಯುತ್ತಿದೆ. ಈ ಸದನದ ಮೂಲಕ ಇನ್ನಾದರೂ ಸಂದೇಶ ಕಳಿಸಬೇಕು’ ಎಂದರು.

‘ಇಷ್ಟೇ ದಿನದಲ್ಲಿ ಶಾಸನ ಸಭೆ ಕರೆಯಬೇಕು. ಹೀಗೇ ಚರ್ಚೆ ಆಗಬೇಕು ಎಂದು ನಮಗೆ ನಿರ್ದೇಶನ ನೀಡಲು ನ್ಯಾಯಾಂಗಕ್ಕೆ ಏನು ಅಧಿಕಾರವಿದೆ‌. ಸದನ ಕರೆಯಬೇಕಾದುದು, ಚರ್ಚೆಗೆ ಅವಕಾಶ ಕೊಡುವುದು ಸಭಾಧ್ಯಕ್ಷರ ಪರಮಾಧಿಕಾರ. ಎಲ್ಲ ವಿಷಯಗಳಲ್ಲೂ ನ್ಯಾಯಾಂಗ ಮೂಗು ತೂರಿಸುವುದಾರೆ ತಹಶೀಲ್ದಾರ್, ಡಿಸಿ, ಎಸಿಗಳಿಗೇಕೆ ಅಧಿಕಾರ ಬೇಕು. ಎಲ್ಲವನ್ನೂ ಜಡ್ಜ್‌ಗಳೇ ನಡೆಸಲಿ’ ಎಂದರು.

ಮಧ್ಯಪ್ರವೇಶಿಸಿದ ಜೆಡಿಎಸ್‌ನ ಎ.ಟಿ.ರಾಮಸ್ವಾಮಿ, ‘ನ್ಯಾಯಾಂಗ ಬಡವಾಣೆ ಅಕ್ರಮವನ್ನು ವಿವರಿಸಿ, ಇವರಿಂದ ಏನು ನ್ಯಾಯ ನಿರೀಕ್ಷಿಸಲು ಸಾಧ್ಯ’ ಎಂದು ಪ್ರಶ್ನಿಸಿದರು. ‘ಯಾವುದೇ ವ್ಯವಸ್ಥೆ ವ್ಯಾಪ್ತಿ ಮೀರಿ ನಡೆದುಕೊಂಡಾಗ ಇಂಥ ಸಂಘರ್ಷ ನಡೆಯುತ್ತದೆ. ಇತ್ತೀಚಿನ ಪ್ರಕರಣ ಪ್ರಜಾಪ್ರಭುತ್ವ ವಿರೋಧಿ ಕ್ರಮ. ನ್ಯಾಯಾಂಗವೇ ಇಂಥ ವಿಚಾರದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

‘ನಿಮ್ಮೆಲ್ಲರ ಹಿತದೃಷ್ಟಿಯಿಂದ ಈ ಬಗ್ಗೆ ಪ್ರತ್ಯೇಕ ಚರ್ಚೆಗೆ ಸಮಯ ನಿಗದಿಪಡಿಸಬಹುದು. ಇಲ್ಲಿ ಯಾರೂ ಸ್ವರ್ಗವಾಸಿಗಳಲ್ಲ. ಎಲ್ಲರೂ ಭೂ ವಾಸಿಗಳೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸಭಾಧ್ಯಕ್ಷ ರಮೇಶ್ ಕುಮಾರ್‘ ಚರ್ಚೆಗೆ ಅಂತ್ಯವಾಡಿದರು.

***

ಜಡ್ಜ್ ಗಳೇನು ದೇವರಲ್ಲ. ಸ್ವರ್ಗದಿಂದ ಇಳಿದುಬಂದಿಲ್ಲ. ಅವರ ಮೇಲೂ ಆರೋಪಗಳಿವೆ. ಅವರೂ ನಮ್ಮಂತೆ ಎಂಬುದನ್ನು ಅರಿಯಲಿ.
- ಬಸನಗೌಡ ಪಾಟೀಲ ಯತ್ನಾಳ

***

ಕೋರ್ಟ್ ಕಟ್ಟಡಗಳ ಉದ್ಘಾಟನೆಯಲ್ಲಿ ಜನಪ್ರತಿನಿಧಿಗಳ ಜತೆ ವೇದಿಕೆ ಹಂಚಿಕೊಳ್ಳದೆ ಅವಮಾನ ಮಾಡುತ್ತಿದ್ದಾರೆ. ಇಂಥ ಬೆಳವಣಿಗೆ ನಿಲ್ಲಬೇಕು.
- ಆರಗ ಜ್ಞಾನೇಂದ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !