ಶುಕ್ರವಾರ, ನವೆಂಬರ್ 22, 2019
22 °C

ಸೆಪ್ಟೆಂಬರ್ 7ಕ್ಕೆ ಹರಿದಾಸಮೇರು ಜಗನ್ನಾಥದಾಸರ ಆರಾಧನೆ

Published:
Updated:

ಕನ್ನಡ ಹರಿದಾಸ ವಾಙ್ಮಯದ ಸಾಧನೆ ಮತ್ತು ವೈಫಲ್ಯ – ಎರಡಕ್ಕೂ ಸೋದಾಹರಣವಾಗಿ ನಿಲ್ಲುವ ಪ್ರಾತಿನಿಧಿಕ ವ್ಯಕ್ತಿತ್ವ ಶ್ರೀಜಗನ್ನಾಥದಾಸರು. ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಬ್ಯಾಗವಟ್ಟದಲ್ಲಿ ದಾಸರ ಹುಟ್ಟು ಮತ್ತು ಬೆಳವು. ಐಹಿಕ ಆಸ್ತಿ ಮತ್ತು ಪರಂಪರಾನುಗತ ಶಾಸ್ತ್ರಸಂಪತ್ತು, ಸತ್ಕೀರ್ತಿಗಳ ಸಮೃದ್ಧ ಕುಟುಂಬ. ತಾತ, ಮುತ್ತಾತಂದಿರಂತೆಯೇ ತಂದೆಯವರಾದ ಲಕ್ಷ್ಮೀನರಸಿಂಹಾಚಾರ್ಯರು ಸಹ ಘನ ಶಾಸ್ತ್ರವೇತ್ತರು, ಸನ್ಮಾನಿತರು. ಸಂಗೀತವಿದ್ಯೆಯೊಂದಿಗೆ ಸುಭಗ ಶಾರೀರ ಇವರ ಹೆಚ್ಚುವರಿ ಆಯಾಮ. ಸತತ ಐವತ್ತು ವರ್ಷಗಳ ಕಾಲ, ತಿರುಪತಿಗೆ ವಾರ್ಷಿಕ ಯಾತ್ರೆ ಕೈಗೊಂಡು, ಗೀತ-ನರ್ತನದಿಂದ ಹರಿಸೇವೆ ಗೈದ ಗರಿಮೆ. ಬೆಟ್ಟದೊಡೆಯನ ವರಪ್ರಸಾದವೆಂಬ ಅನುಸಂಧಾನದಿಂದಲೇ, ಸತ್ಪುತ್ರನಿಗೆ ಶ್ರೀನಿವಾಸನೆಂಬ ನಾಮಕರಣ.

ಅಂದೊಮ್ಮೆ ಬೀದಿ ಸುತ್ತುವ ಕಾರ್ಯಕ್ರಮದಲ್ಲಿ ಶ್ರೀನಿವಾಸಾಚಾರ್ಯ, ಎಂದರೆ ಶ್ರೀನಿವಾಸನಿಗೂ, ಭಿಕ್ಷಾಪ್ರಸಾದಕ್ಕೆ ವಿಜಯದಾಸರಿಂದ ಆಹ್ವಾನ ಬರುತ್ತದೆ. ಆಹ್ವಾನವನ್ನು ನಿರಾಕರಿಸುತ್ತಾರೆ. ಆದರೂ ಉದರಶೂಲೆ ಬಂದೇ ಬಂದಿತು! ಬಹುಶಃ ಅದು ಹೊಟ್ಟೆನೋವಿಗಿಂತಾ ಹೆಚ್ಚಾಗಿ ಅವ್ಯಕ್ತ ಹೊಟ್ಟೆಕಿಚ್ಚೆನಿಸೀತು, ತಮ್ಮಂಥ ಮಹಾಹೋಪಾಧ್ಯಾಯನ ಸಮ್ಮುಖದಲ್ಲೇ ಜನಸಾಗರ ಒಬ್ಬ ಬಡದಾಸನ ಹಿಂದೆ ಬೀಳುತ್ತಿರುವುದನ್ನು ಕಂಡು! ಶೂಲೆ ತಾಳದಾದಾಗ ರಾಯರ ಮೊರೆಹೋಗುತ್ತಾರೆ, ಅಲ್ಲಿ ಸವಾಲೇನು? ‘ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದೆ| ಮಂದಿಯೊಳಗೆನ್ನ ಮಂದನ್ನ ಮಾಡಿದಿ?’ ಎಂದು! ದಾಸರೊಬ್ಬರ ಸುಪುತ್ರನಾಗಿದ್ದ ಪುಣ್ಯದಿಂದಲೋ ಏನೋ, ತಮ್ಮ ಸೊಕ್ಕಿನರಿವು ಕ್ರಮಕ್ರಮವಾಗಿ ಒಡಮೂಡುತ್ತದೆ.

ಅಷ್ಟುಹೊತ್ತಿಗೆ ತಿರುಪತಿಯಲ್ಲಿದ್ದ ವಿಜಯದಾಸರಲ್ಲಿಗೆ ಧಾವಿಸಿ ತಪ್ಪೊಪ್ಪಿಗೆ ಮುಂದಾಗುತ್ತಾರೆ. ಅವರ ಸಹಾನುಭೂತಿ ಸಿಗುತ್ತದೆ. ಶಿಷ್ಯ ಗೋಪಾಲದಾಸರಿಂದ ಹರಿದಾಸ್ಯದ ರಹಸ್ಯ ಅರಿಯಿರಿ ಎಂದು ಉತ್ತನೂರಿಗೆ ಕಳಿಸುತ್ತಾರೆ. ಗೋಪಾಲದಾಸರನ್ನು ಭೇಟಿಯಾದ ಶ್ರೀನಿವಾಸಾಚಾರ್ಯರು ದಾಸದೀಕ್ಷೆಯನ್ನು ಬೇಡುತ್ತಾರೆ.  ಗೋಪಾಲದಾಸ ‘ಉಪದೇಶ ’ಆಚಾರ್ಯರ ಹೃದಯಕ್ಕೆ ಅಲುಗಿನಂತೆ ತಾಗುತ್ತದೆ. ಗೋಪಾಲ ದಾಸರು ‘ಅಂಕಿತ’ ಕೊಡುವುದಿಲ್ಲ! ದಾಸಗಣದ ಏಕೈಕ ಆರಾಧ್ಯದೈವ, ವಿಠಲನ ಇಚ್ಛೆಯಿದ್ದರೆ ಅದೇ ಸಿಗುತ್ತದೆ ಎಂದು ಹೇಳಿ ಫಂಡರಪುರಕ್ಕೆ ಸಾಗಹಾಕುತ್ತಾರೆ. ಭಕ್ತೈಕ ಭಾವದಿಂದ ವಿಠಲನಿಗಭಿಮುಖವಾಗಿ ಚಂದ್ರಭಾಗೆಯಲ್ಲಿ ಮುಳುಗೆದ್ದಾಗ, ‘ಜಗನ್ನಾಥ ವಿಠಲ’ನೆಂಬ ಅಂಕಿತ ಸ್ಫುರಿಸಿಹೋಗುತ್ತದೆ.

ಪ್ರತಿಕ್ರಿಯಿಸಿ (+)