ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಮಡಿಲು ತುಂಬಿದ ಬಂಗಾರದ ಹೂವು

Last Updated 13 ಮೇ 2018, 10:07 IST
ಅಕ್ಷರ ಗಾತ್ರ

ಈಗ ಕಕ್ಕೆ ಹೂವಿನ ಕಾಲ. ಮಾವಿನ ಮಡಿಲಲ್ಲಿ ಬೆಳೆದು ನಿಂತಿರುವ ಕಕ್ಕೆ ಗಿಡಗಳಲ್ಲಿ ಬಂಗಾರದ ಬಣ್ಣದ ಹೂವುಗಳು ಕಾಣಿಸಿಕೊಂಡಿವೆ. ತಮ್ಮ ಅಪರಿಮಿತ ಸೌಂದರ್ಯದ ಮೂಲಕ ನೋಡುಗರ ಮನಸ್ಸಿಗೆ ಕಚಗುಳಿ ಇಡುತ್ತಿವೆ.

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಕಳೆದ ವರ್ಷ ಒಳ್ಳೆ ಮಳೆ ಸುರಿದ ಪರಿಣಾಮ ಈ ಬೇಸಿಗೆಯಲ್ಲಿ ಕಾಡು ಹೂಗಳು ಅನಾವರಣಗೊಳ್ಳುತ್ತಿವೆ. ಕಾಡು ಮೇಡಿನ ತುಂಬಾ ವನಸುಮದ ಸುವಾಸನೆ ಹರಡಿದೆ.

ಕಕ್ಕೆ ಎಲ್ಲ ಕಡೆ ಬೆಳೆಯುವ ಒಂದು ಸಾಮಾನ್ಯ ಮರ. ಹಿಂದೆ ಎಲ್ಲೆಲ್ಲೂ ಕಕ್ಕೆ ಮರಗಳು ಕಾಣಿಸುತ್ತಿದ್ದವು. ಗ್ರಾಮೀಣ ಪ್ರದೇಶದ ಜನ ಕಕ್ಕೆ ಮರ ಕಡಿಯಲು ಹಿಂದೆ ಮುಂದೆ ನೋಡುತ್ತಿದ್ದರು. ಆದರೆ ಕಾಲಾಂತರದಲ್ಲಿ ಸಂಗೋಪನಾ ಮನೋಭಾವದ ಕೊರತೆಯಿಂದಾಗಿ ಅವು ಕೊಡಲಿಗೆ ಆಹುತಿಯಾದವು. ಆದರೂ ಈಗ ಸರ್ಕಾರಿ ಜಮೀನು ಹಾಗೂ ರಸ್ತೆ ಬದಿಗಳಲ್ಲಿ ಮಾತ್ರ ಈ ಮರಗಳನ್ನು ಕಾಣಲು ಸಾಧ್ಯ.

ಮಳೆ ಕೊರತೆಯಿಂದಾಗಿ ಕಕ್ಕೆ ಹೂವು ಸರಿಯಾಗಿ ಬರುತ್ತಿರಲಿಲ್ಲ. ಈ ಬಾರಿ ಕಕ್ಕೆ ಮರಗಳು ಹಳದಿ ಬಣ್ಣದ ಹೂವನ್ನು ಮುಡಿಗೇರಿಸಿಕೊಂಡು ಸಂಭ್ರಮಿಸುತ್ತಿವೆ. ಯಾವುದೋ ಸುಂದರ ಆಭರಣದಂತೆ ಕಾಣುವ ಹೂ ಗೊಂಚಲುಗಳು ಕಣ್ಸೆಳೆಯುತ್ತಿವೆ. ಹೂವಿದ್ದಾಗ ಕಕ್ಕೆ ಮರವನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ. ಇನ್ನೂ ಅಷ್ಟು ದೂರ ಇರುವಾಗಲೇ ಹೂವಿನ ಸುವಾಸನೆ ಮೂಗಿಗೆ ಬಡಿಯುತ್ತದೆ. ಹೀಗೆ ಪರಿಮಳದ ಮೂಲಕವೇ ತನ್ನ ಇರುವನ್ನು ಸಾರುತ್ತದೆ.

ಕಕ್ಕೆ ಒಂದು ಮೂಲಿಕಾ ಸಸ್ಯವೂ ಹೌದು. ದನ– ಕರುಗಳಿಗೆ ಕುಂದಾದಾಗ (ಕಾಲು ಬಾಯಿ ಜ್ವರ) ರೈತರು ಕಕ್ಕೆ ಎಲೆಯನ್ನು ತಂದು ಕೆಂಡದ ಮೇಲೆ ಹಾಕಿ ಹೊಗೆ ಹಾಕುತ್ತಾರೆ. ಕೆಲವು ಕಾಯಿಲೆಗಳಿಗೆ ಅದರ ತೊಗಟೆಯನ್ನು ಬಳಸುತ್ತಾರೆ. ಅದರ ರೂಲರ್‌ ಆಕಾರದ ಉದ್ದನೆಯ ಕಾಯಿಗಳು ಹಸಿರಾಗಿರಲಿ ಅಥವಾ ಒಣಗಿ ಕಪ್ಪಾಗಲಿ ನೋಡಲು ಸುಂದರವಾಗಿರುತ್ತವೆ.

ಗುಳ್ಳೆ ನರಿಗಳಿಗೆ ಕಕ್ಕೆ ಕಾಯಿಯೆಂದರೆ ಪಂಚ ಪ್ರಾಣ. ರಾತ್ರಿ ಹೊತ್ತು ಎಳೆ ಕಾಯಿಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಕಾಯಿ ತಿನ್ನಲು ರುಚಿಯಾಗಿದ್ದರೂ, ಹೆಚ್ಚಾಗಿ ತಿಂದರೆ ಹೊಟ್ಟೆ ನೋವು ಬರುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಬೇಡ ಬೇಡ ಎನ್ನುತ್ತಲೇ ಹೊಟ್ಟೆ ಬಿರಿಯುವಂತೆ ತಿನ್ನುವ ವ್ಯಕ್ತಿಗಳನ್ನು ಹಂಗಿಸಲು ನರಿ ಹಾಗೂ ಕಕ್ಕೆ ಕಾಯಿ ಕತೆ ಹೇಳುತ್ತಾರೆ. ಹೊಟ್ಟೆ ಬಿರಿಯುವಂತೆ ಕಕ್ಕೆ ಕಾಯಿ ತಿಂದ ನರಿಗೆ ಹೊಟ್ಟೆ ನೋವು ಬರುತ್ತದೆ. ನಾಳೆಯಿಂದ ಸತ್ತರೂ ಅದನ್ನು ತಿನ್ನಬಾರದು ಎಂದುಕೊಳ್ಳುತ್ತದೆ. ಮರುದಿನ ರಾತ್ರಿ ಕಕ್ಕೆ ಗಿಡದ ಬಳಿ ಬರುವ ನರಿಗೆ ಕಾಯಿ ಕಂಡು ಬಾಯಲ್ಲಿ ನೀರೂರುತ್ತದೆ. ಇವತ್ತು ಒಂದು ಕಾಯಿ ತಿನ್ನುತ್ತೇನೆ, ನಾಳೆಯಿಂದ ತಿನ್ನುವುದಿಲ್ಲ ಎಂದು ಹೇಳಿಕೊಂಡು ಮತ್ತೆ ಹೊಟ್ಟೆ ತುಂಬ ತಿಂದು ನೋವು ಅನುಭವಿಸುತ್ತದೆ. ಇದು ಈ ಭಾಗದಲ್ಲಿ ಪ್ರಚಲಿತದಲ್ಲಿರುವ ಜನಪದ ಕತೆ.

ಕಕ್ಕೆ ಹೂದೋರಣ ನಿಸರ್ಗ ಪ್ರಿಯರಿಗೆ ಅತ್ಯಂತ ಪ್ರಿಯವಾದುದು. ಬಂಗಾರ ಬಣ್ಣದ ಹೂವನ್ನು ನೋಡಿ ಆನಂದಿಸುತ್ತಾರೆಯೇ ಹೊರತು, ಹೂವಿಗೆ ಕೈ ಹಾಕುವುದಿಲ್ಲ. ಹಾಗಾಗಿ ಹೂವು ಕಾಯಿಯಾಗಿ ಕೆಳಹಂತದಲ್ಲಿ ನರಿಗೆ ಆಹಾರವಾಗುತ್ತದೆ. ಮೇಲ್ಮಟ್ಟದಲ್ಲಿನ ಕಾಯಿಗಳು ಬೀಜ ಕಟ್ಟಿ ಬಲಿಯುತ್ತವೆ. ಒಣಗಿ ಕೆಳಗೆ ಬಿದ್ದು ಬೀಜ ಪ್ರಸಾರವಾಗುತ್ತದೆ. ಮಳೆಗಾಲದಲ್ಲಿ ನೈಸರ್ಗಿಕವಾಗಿ ಭೂಮಿಗೆ ಸೇರಿ ಮೊಳಕೆಯೊಡೆದು ಬೆಳೆಯುತ್ತವೆ.

ಇಷ್ಟಾದರೂ ಕಕ್ಕೆ ಮರ ಕಡಿಯುವುದು ಮಾತ್ರ ನಿಂತಿಲ್ಲ. ಉರುವಲಿಗಾಗಿ ಸಮೀಪದ ಗ್ರಾಮಸ್ಥರು ಕಡಿದು ಹೊತ್ತೊಯ್ಯುತ್ತಾರೆ. ಸೌಂದರ್ಯದ ಕಣ್ಣು ಮುಚ್ಚುತ್ತದೆ. ಈ ಕಾರಣದಿಂದಲೇ ಕಕ್ಕೆ ಮರಗಳ ಸಂಖ್ಯೆ ಕುಸಿಯುತ್ತಿದೆ.

–ಆರ್‌.ಚೌಡರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT