ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಶಾ ಫೌಂಡೇಶನ್‌‌ನಿಂದ ಚಿಕ್ಕಬಳ್ಳಾಪುರದಲ್ಲಿ ಜಾಗತಿಕ ಆಧ್ಯಾತ್ಮ ಕೇಂದ್ರ

ಜಗ್ಗಿ ವಾಸುದೇವ್ ರಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 150 ಎಕರೆ ಜಮೀನು ಖರೀದಿ
Last Updated 26 ಫೆಬ್ರುವರಿ 2020, 10:04 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೊಯಮತ್ತೂರಿನ ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್‌ ಅವರು ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿ ಬಳಿ ಜಾಗತಿಕ ಆಧ್ಯಾತ್ಮಿಕ ಕೇಂದ್ರ ಸ್ಥಾಪಿಸಲು ಮುಂದಾಗಿದ್ದು, ಅದಕ್ಕಾಗಿ ಈಗಾಗಲೇ ಸುಮಾರು 150 ಎಕರೆ ಭೂಮಿ ಖರೀದಿಸಿದ್ದಾರೆ.

ರಾಜಧಾನಿ ಬೆಂಗಳೂರು ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಿಲ್ಲೆ ಹತ್ತಿರ ಇರುವುದರಿಂದಾಗಿ ಜಗ್ಗಿ ವಾಸುದೇವ್‌ ಅವರು ಜಾಗತಿಕ ಆಧ್ಯಾತ್ಮಕೇಂದ್ರ ಸ್ಥಾಪಿಸಲು ಚಿಕ್ಕಬಳ್ಳಾಪುರ ಆಯ್ಕೆ ಮಾಡಿಕೊಂಡಿದ್ದು, ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಸ್ಥಳೀಯ ಶಾಸಕ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮತ್ತು ಜಗ್ಗಿ ವಾಸುದೇವ್‌ ಅವರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸುಧಾಕರ್, ‘ಸದ್ಗುರು ಜಗ್ಗಿ ವಾಸುದೇವ್‌ ಅವರ ತಾಯಿ ಚಿಕ್ಕಬಳ್ಳಾಪುರದವರು. ನಾಲ್ಕೈದು ತಿಂಗಳ ಹಿಂದೆ ಸದ್ಗುರು ಅವರು ಬೆಂಗಳೂರಿಗೆ ಭೇಟಿ ನೀಡಿದಾಗ, ನಾನು ಅವರಿಗೆ ಚಿಕ್ಕಬಳ್ಳಾಪುರದ ಆವಲಗುರ್ಕಿ ಬಳಿ ಕೊಯಮತ್ತೂರಿನ ಮಾದರಿಯಲ್ಲಿ ಜಾಗತಿಕ ಆಧ್ಯಾತ್ಮಿಕ ಕೇಂದ್ರ ಮತ್ತು ನಂದಿ ಬೆಟ್ಟದ ತಪ್ಪಲು ಪ್ರದೇಶದಲ್ಲಿ ಆದಿ ಯೋಗಿ ಮೂರ್ತಿ ಸ್ಥಾಪಿಸುವಂತೆ ವೈಯಕ್ತಿಕವಾಗಿ ವಿನಂತಿಸಿದ್ದೆ. ಅದಕ್ಕೆ ಅವರು ಒಪ್ಪಿದ್ದಾರೆ’ ಎಂದು ತಿಳಿಸಿದರು.

‘ಇದಕ್ಕಾಗಿ ಅವರು ನಮಗೆ ಜಮೀನು ಕೇಳಿಲ್ಲ. ಇಶಾ ಫೌಂಡೇಶನ್ ವತಿಯಿಂದಲೇ ಈಗಾಗಲೇ ಆವಲಗುರ್ಕಿ ಬಳಿ ಜಮೀನು ಕೂಡ ಖರೀದಿಸಿದ್ದಾರೆ. ನಂದಿ ಬೆಟ್ಟದ ಸುತ್ತಮುತ್ತ ಕೂಡ ಜಮೀನು ಖರೀದಿಗೆ ಹುಡುಕಾಟ ನಡೆದಿದೆ. ಇದರಿಂದಾಗಿ ನಮ್ಮ ಕ್ಷೇತ್ರದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ ಜತೆಗೆ ಕ್ಷೇತ್ರಕ್ಕೆ ಅವರ ಸೇವೆ ದೊರೆಯಲಿದೆ. ಹೀಗಾಗಿ ಅವರಿಗೆ ನಮ್ಮ ಸರ್ಕಾರದ ವತಿಯಿಂದ ನೀರು, ರಸ್ತೆ, ವಿದ್ಯುತ್‌ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸುವ ಭರವಸೆ ನೀಡಿರುವೆ’ ಎಂದು ಹೇಳಿದರು.

‘ಆವಲಗುರ್ಕಿ ಬಳಿ ಇನ್ನು ಸ್ವಲ್ಪ ಜಮೀನು ಖರೀದಿಸಲಿದ್ದಾರೆ. ಜಮೀನು ಖರೀದಿ ಮುಗಿದ ಬಳಿಕ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ. ಸುಮಾರು ಎರಡು ಮೂರುತಿಂಗಳಲ್ಲಿ ಜಾಗತಿಕ ಆಧ್ಯಾತ್ಮ ಕೇಂದ್ರನಿರ್ಮಾಣ ಕಾಮಗಾರಿಗೆ ಚಾಲನೆ ದೊರೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT