‘ಜಲಧಾರೆ’ ಯೋಜನೆ ಮೂಲಕ 5 ವರ್ಷಗಳಲ್ಲಿ ಪ್ರತಿ ಮನೆಗೆ ಶುದ್ಧ ನೀರು: ಎಚ್‌ಡಿಕೆ

7
ಯೋಜನೆ ಅನುಷ್ಠಾನಕ್ಕೆ ₹7 ಸಾವಿರ ಕೋಟಿ ಅಗತ್ಯ

‘ಜಲಧಾರೆ’ ಯೋಜನೆ ಮೂಲಕ 5 ವರ್ಷಗಳಲ್ಲಿ ಪ್ರತಿ ಮನೆಗೆ ಶುದ್ಧ ನೀರು: ಎಚ್‌ಡಿಕೆ

Published:
Updated:
Deccan Herald

ಬೆಂಗಳೂರು: ಮುಂದಿನ ಐದು ವರ್ಷಗಳಲ್ಲಿ ಪ್ರತಿ ಹಳ್ಳಿಯ ಪ್ರತಿ ಮನೆಗೆ ಕುಡಿಯುವ ನೀರು ಪೂರೈಕೆ ಮಾಡಲು ‘ಜಲಧಾರೆ’ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್‍ಹಾಲ್‍ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.

ಈ ಯೋಜನೆಗೆ ಅಂದಾಜು ₹7,000 ಕೋಟಿ ಅಗತ್ಯ ಇದೆ. ಈ ಯೋಜನೆಗೆ ಶೀಘ್ರದಲ್ಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಹೂಳು ತೆಗೆದು, ಒತ್ತುವರಿ ತೆರವು ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ ಎಂಬುದು ಮಹಾತ್ಮ ಗಾಂಧೀಜಿಯವರ ನಂಬಿಕೆ. ಹಳ್ಳಿಗಳಲ್ಲಿ ಉತ್ತಮ ಪರಿಸರ ಸೃಷ್ಟಿಸಿದಾಗ ಗಾಂಧೀಜಿ ಕನಸು ನನಸಾಗಲು ಸಾಧ್ಯ. ಸ್ವಚ್ಛತೆ ಕಾಪಾಡುವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಬೇಕು. ಗ್ರಾಮ ಪಂಚಾಯಿತಿಗಳಿಗೆ ಇರುವ ಹೆಚ್ಚಿನ ಅಧಿಕಾರ ಬಳಸಿಕೊಂಡು ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಅನುದಾನ ಕಡಿತ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರ ನೀಡುತ್ತಿದ್ದ ಅನುದಾನದಲ್ಲಿ ಕಡಿತ ಮಾಡಲಾಗಿದೆ. ಮೊದಲು ಶೇ 70ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಭರಿಸುತ್ತಿತ್ತು. ಈಗ ಶೇ 12ರಷ್ಟು ಮಾತ್ರ ಅನುದಾನ ಭರಿಸುತ್ತಿದೆ. ಶೇ 88ರಷ್ಟು ಅನುದಾನ ರಾಜ್ಯ ಸರ್ಕಾರಕ್ಕೆ ಹೊರೆಯಾಗಿದೆ’ ಎಂದರು.

‘ಗ್ರಾಮ ಪಂಚಾಯಿತಿಗಳು ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಏಜೆನ್ಸಿಗಳಲ್ಲ. ಈ ಸಂಸ್ಥೆಗಳಿಗೆ ತನ್ನದೆ ಆದ ಸುಪ್ರೀಂ ಅಧಿಕಾರವಿದೆ. ಈ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮಗಳ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಮುಂದಾಗಬೇಕು’ ಎಂದು ಕರೆ ನೀಡಿದರು.

‘ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಉತ್ತೇಜನ ನೀಡಲು 2016ರಲ್ಲಿ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಗಾಂಧಿ ಗ್ರಾಮ ಪುರಸ್ಕಾರ ಆರಂಭಿಸಿದ್ದರು. ಈ ಕಾರ್ಯಕ್ರಮದಿಂದ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ’ ಎಂದು ಹೇಳಿದರು.

ಭ್ರಷ್ಟ ವ್ಯವಸ್ಥೆ ಬಿಚ್ಚಿಟ್ಟು ‘ಪುರಸ್ಕಾರ’ ತಿರಸ್ಕಾರ!

ಬೀದರ್‌ ಜಿಲ್ಲೆಯ ಚಾಂಬೋಳ ಗ್ರಾಮ ಪಂಚಾಯಿತಿಯ ಪಿಡಿಓ ಮಂಗಳಾ ಕಾಂಬಳೆ, ಗಾಂಧಿ ಗ್ರಾಮ ಪುರಸ್ಕಾರ ನಿರಾಕರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

‘ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಅಧ್ಯಕ್ಷರು ಮತ್ತು ಸದಸ್ಯರ ಅಸಹಕಾರ, ಕಿರುಕುಳ ಮತ್ತು ತಮ್ಮ ಮೇಲೆ ಮೂರು ಬಾರಿ ಕೊಲೆ ಯತ್ನ ಪ್ರತಿಭಟಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನಾನು ಎದುರಿಸುತ್ತಿದ್ದ ತೊಂದರೆಗಳನ್ನು ಸರ್ಕಾರ ಮತ್ತು ಇಲಾಖೆಯ ಉನ್ನತ ಅಧಿಕಾರಿಗಳು, ಸಚಿವರು, ರಾಜ್ಯಪಾಲರ ಗಮನಕ್ಕೆ ತಂದರೂ ನನ್ನ ಪ್ರಾಮಾಣಿಕನವನ್ನೇ ಅಪಹಾಸ್ಯ ಮಾಡಲಾಗಿದೆ. ಪ್ರಾಮಾಣಿಕರಿಗೆ ಸರ್ಕಾರದಲ್ಲಿ ಸ್ಥಾನ ಇಲ್ಲ. ಅಲ್ಲದೆ, ಜೀವಕ್ಕೆ ಯಾವುದೇ ಬೆಲೆ ಇಲ್ಲ ಎಂಬ ಸಂದೇಶ ಕೊಟ್ಟಿರುವುದು ನಾನು ಪುರಸ್ಕಾರ ಸ್ವೀಕರಿಸದಿರಲು ಕಾರಣ’ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

175 ಗ್ರಾಮಗಳಿಗೆ ಪುರಸ್ಕಾರ

175 ಗ್ರಾಮ ಪಂಚಾಯಿತಿಗಳಿಗೆ ಮುಖ್ಯಮಂತ್ರಿ ಪುರಸ್ಕಾರ ಪ್ರದಾನ ಮಾಡಿದರು. ವಿವಿಧ ಪ್ರಗತಿಯನ್ನು ಆಧರಿಸಿ 150 ಅಂಕಗಳ ಪ್ರಶ್ನಾವಳಿ‌ಗೆ ಪಂಚತಂತ್ರ ತಂತ್ರಾಂಶದಲ್ಲಿ ಉತ್ತರಿಸುವ ಮೂಲಕ ಗ್ರಾಮ ಪಂಚಾಯಿತಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು.

ಅದರಂತೆ 3,542 ಗ್ರಾಮ ಪಂಚಾಯತಿಗಳು ಅರ್ಜಿ ಸಲ್ಲಿಸಿದ್ದವು. ಈ ಪೈಕಿ ಅತಿ ಹೆಚ್ಚು ಅಂಕ ಗಳಿಸಿರುವ ತಾಲ್ಲೂಕಿನ ತಲಾ ಮೂರು ಗ್ರಾಮ ಪಂಚಾಯತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !