ಬುಧವಾರ, ಮಾರ್ಚ್ 3, 2021
25 °C
ಜಮಖಂಡಿ ಪಟವರ್ಧನ ಸಂಸ್ಥಾನಿಕರು ಕಟ್ಟಿಸಿದ ಜಲಮೂಲ

ಮುಚ್ಚಿದ ಹೊಂಡಕ್ಕೆ ‘ಬ್ರಿಗೇಡ್‌’ನಿಂದ ಮರುಜೀವ

ಡಾ.ಟಿ.ಪಿ. ಗಿರಡ್ಡಿ Updated:

ಅಕ್ಷರ ಗಾತ್ರ : | |

Deccan Herald

ಜಮಖಂಡಿ: ಇಲ್ಲಿನ ರಾಮತೀರ್ಥ ದೇವಸ್ಥಾನದ ಮುಂದೆ, ಶತಮಾನದ ಹಿಂದೆ ಕಟ್ಟಲಾಗಿದ್ದ ಹೊಂಡವೊಂದು ಜನಮಾನಸದಿಂದ ಹೆಚ್ಚು ಕಡಿಮೆ ಮರೆಯಾಗಿಯೇ ಹೋಗಿತ್ತು. ಆದರೆ, ‘ನಮ್ಮೂರಿನಲ್ಲೂ ದೊಡ್ಡ ಹೊಂಡವಿದೆ. ಅದನ್ನು ರಕ್ಷಿಸಿಕೊಳ್ಳಬೇಕು’ ಎಂದು ಊರವರ ಅರಿವಿಗೆ ಬಂದಿದ್ದು, ಯುವ ಬ್ರಿಗೇಡ್‌ ಕಾರ್ಯಕರ್ತರು ಅದರ ಸ್ವಚ್ಛತೆಗೆ ಟೊಂಕ ಕಟ್ಟಿ ನಿಂತ ಮೇಲೆ!

ಜಮಖಂಡಿ ಸಂಸ್ಥಾನದ ಪಟವರ್ಧನ ಸಂಸ್ಥಾನಿಕರು ಕಟ್ಟಿಸಿದ ಈ ಹೊಂಡದಲ್ಲಿ, ನೀರು ಕೂಡ ಕಾಣದಂತೆ ವಿವಿಧ ಜಾತಿಯ ಕಳೆ ಬೆಳೆದಿತ್ತು. ಹೊಂಡದ ಸುತ್ತ ಕಟ್ಟಿರುವ ಬೃಹತ್‌ ಗೋಡೆಗಳ ಮೇಲೆ ಗಿಡಗಂಟಿಗಳು ಬೆಳೆದಿದ್ದರಿಂದ ಗೋಡೆಯು ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಕಲ್ಲುಗಳೂ ಸಡಿಲುಗೊಂಡಿದ್ದವು. ಪ್ರವೇಶ ದ್ವಾರವೂ ಸೇರಿದಂತೆ ಅಲ್ಲಿ ನಿರ್ಮಿಸಿದ್ದ ಮೆಟ್ಟಿಲುಗಳು ಸಂಪೂರ್ಣ ಮಣ್ಣಿನಲ್ಲಿ ಹೂತು ಹೋಗಿದ್ದವು. ಹೊಂಡಕ್ಕೆ ಮೆಟ್ಟಿಲುಗಳು ಇವೆ ಎಂಬುದೂ ಗೊತ್ತಾಗುತ್ತಿರಲಿಲ್ಲ. ಮೆಟ್ಟಿಲಿನ ಎರಡೂ ಬದಿಯಲ್ಲಿ ತಲಾ ಮೂರರಂತೆ ಕಟ್ಟಿದ್ದ ಒಟ್ಟು ಆರು ವೃತ್ತಾಕಾರದ ಕಟ್ಟೆಗಳೂ ಶಿಥಿಲಗೊಂಡಿದ್ದವು.

ಇಂಥ ಜಲಮೂಲಕ್ಕೆ ಮರುಜೀವ ನೀಡಲು ಮುಂದಾಗಿದ್ದು ನಗರದ ಯುವ ಬ್ರಿಗೇಡ್ ಕಾರ್ಯಕರ್ತರ ಪಡೆ. ಸತತ 10 ದಿನಗಳಿಂದ ಶ್ರಮದಾನ ಮಾಡುತ್ತಿದ್ದು, ಇನ್ನೂ 20 ದಿನದ ಕೆಲಸಕ್ಕೆ ಯೋಜನೆ ಮಾಡಿಕೊಂಡಿದೆ.

ಯುವ ಬ್ರಿಗೇಡ್ ಜಮಖಂಡಿ ಘಟಕದ ಸಂಚಾಲಕ ಆನಂದ ಭಾರತ, ಕಾರ್ಯಕರ್ತರಾದ ಈಶ್ವರ ಕಂಕಣವಾಡಿ, ಸಿದ್ದು ಕವಟಗಿ, ಪ್ರಥಮ್ ಔರಸಂಗ, ವಿಠ್ಠಲ ಹುಬ್ಬಳ್ಳಿ, ಅರುಣ ಉಜ್ಜನಿಕೊಪ್ಪ, ಈಶ್ವರ ಅತ್ತೆಪ್ಪನವರ ಸೇರಿಕೊಂಡು ಕೆರೆ ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಿದ್ದಾರೆ.

ದಿನಾಲು ಬೆಳಿಗ್ಗೆ 6.30 ರಿಂದ 9 ಗಂಟೆವರೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ. ಆರಂಭದಲ್ಲಿ ಐದಾರು ಯುವಕರು ಕೈಗೊಂಡ ಈ ಕಾರ್ಯದಿಂದ ಪ್ರೇರಣೆ ಪಡೆದು, ಹಲವಾರು ಯುವಕರು ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಮಲಿನವಾದ ನೀರನ್ನು ಖಾಲಿ ಮಾಡುವ ಉದ್ದೇಶದಿಂದ ಹೊಂಡದ ತಳಮಟ್ಟದಲ್ಲಿ ಮೋರೆಯನ್ನು ಬಿಡಲಾಗಿದೆ. ಇದೆಲ್ಲವನ್ನು ಗಮನಿಸಿದರೆ ಒಂದು ಕಾಲದಲ್ಲಿ ಇದೊಂದು ಅತ್ಯಂತ ಸುಸಜ್ಜಿತ ಹೊಂಡ ಆಗಿತ್ತು ಅನಿಸುತ್ತದೆ.

ವಾಯು ವಿಹಾರಕ್ಕೆಂದು ಅತ್ತತೆರಳಿದ್ದ ಸ್ತ್ರೀ ರೋಗ ತಜ್ಞೆ ಡಾ.ಲಕ್ಷ್ಮಿ ತುಂಗಳ, ಶಾಸಕ ಆನಂದ ನ್ಯಾಮಗೌಡ ಹಾಗೂ ಮುತ್ತಿನಕಂತಿ ಹಿರೇಮಠದ ಶಿವಲಿಂಗ ಸ್ವಾಮೀಜಿ ಕೂಡ ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು