ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಪಂಗಡಗಳ ಸಮರ: ಶಿವಣ್ಣನವರ ನಿರ್ಣಾಯಕ!

ಮೆಣಸಿನ ಘಾಟಿನ ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ದಿನೇ ದಿನೇ ಧ್ರುವೀಕರಣಗೊಳ್ಳುತ್ತಿರುವ ಮತಗಳು
Last Updated 5 ಮೇ 2018, 12:23 IST
ಅಕ್ಷರ ಗಾತ್ರ

ಬ್ಯಾಡಗಿ (ಹಾವೇರಿ ಜಿಲ್ಲೆ): ‘ಶಾಸಕ ಬಸವರಾಜ ಶಿವಣ್ಣನವರ ಅವರನ್ನು ಎಂ.ಎಲ್.ಸಿ (ವಿಧಾನ ಪರಿಷತ್ ಸದಸ್ಯ) ಮಾಡಿ’ ಎಂಬ ಬೇಡಿಕೆಯು ಕಾಂಗ್ರೆಸ್‌ ಅಭ್ಯರ್ಥಿ ಎಸ್. ಆರ್. ಪಾಟೀಲ ಪರ ಸಿ.ಎಂ. ಸಿದ್ದರಾಮಯ್ಯ ಬುಧವಾರ ಇಲ್ಲಿ ಭಾಷಣ ಮಾಡುವ ವೇಳೆಯಲ್ಲಿ ಮೊಳಗಿತ್ತು.

ಇದು, ಶಿವಣ್ಣನವರ ಭವಿಷ್ಯ ಮಾತ್ರವಲ್ಲ, ಕ್ಷೇತ್ರದ ಮುಂದಿನ ಶಾಸಕರನ್ನು ನಿರ್ಧರಿಸುವಲ್ಲಿ ಅವರ ಅಭಿಮಾನಿಗಳ ಪಾತ್ರವೂ ಮುಖ್ಯವಾಗಿದೆ ಎಂಬ ಸಂದೇಶ ನೀಡಿದೆ.

ಮೆಣಸಿನ ಮಾರುಕಟ್ಟೆಯಿಂದ ಖ್ಯಾತಿ ಪಡೆದ ಬ್ಯಾಡಗಿ ವಿಧಾನಸಭಾ ಕ್ಷೇತ್ರವು ಹಾವೇರಿ ಮತ್ತು ರಾಣೆಬೆನ್ನೂರಿನ ಹಳ್ಳಿಗಳನ್ನೂ ಒಳಗೊಂಡಿದೆ. ಹೀಗಾಗಿ, ಇಲ್ಲಿ ಅಭ್ಯರ್ಥಿ ಸ್ಥಳೀಯ ಎನ್ನುವುದಕ್ಕಿಂತ ಹಲವಾರು ವಿಚಾರಗಳು ಪ್ರಮುಖವಾಗುತ್ತವೆ. ಈ ಬಾರಿ ಮಾರುಕಟ್ಟೆ ಮತ್ತು ಪಟ್ಟಣದ ಸಮಗ್ರ ಅಭಿವೃದ್ಧಿ ಹಾಗೂ ಹಳ್ಳಿಗಳ ಕುಡಿಯುವ ನೀರು ಮತ್ತು ನೀರಾವರಿ ಬೇಡಿಕೆಯು ಕೇಳಿಬಂದಿದೆ.

ಶಾಸಕ ಶಿವಣ್ಣನವರ ಈಗ ಅಭ್ಯರ್ಥಿ ಅಲ್ಲ. ಬಂಡಾಯದ ಸೂಚನೆ ನೀಡಿದ್ದ ಉದ್ಯಮಿ ಎಸ್.ಆರ್‌.ಪಾಟೀಲ ಕೈ ಅಭ್ಯರ್ಥಿ, ಬಿಜೆಪಿಯಿಂದ ವಿರೂಪಾಕ್ಷಪ್ಪ ಬಳ್ಳಾರಿ ಕಣಕ್ಕೆ ಇಳಿದಿದ್ದಾರೆ. ಅವರಿಗೆ ಟಿಕೆಟ್‌ಗಾಗಿ ಪೈಪೋಟಿ ನೀಡಿದ್ದ ಸುರೇಶ ಗೌಡ್ರ ಪಾಟೀಲ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಲಿಂಗಾಯತರೊಳಗಿನ ಪಂಚಮಸಾಲಿ ಮತ್ತು ಸಾದರ ಒಳಪಂಗಡಗಳ ಜಿದ್ದಾಜಿದ್ದಿಯ ಲಕ್ಷಣ ಗೋಚರಿಸಿದೆ. ಜೆಡಿಎಸ್ ಈ ಕ್ಷೇತ್ರವನ್ನು ಬಿಎಸ್ಪಿಗೆ ಬಿಟ್ಟುಕೊಟ್ಟಿದೆ.

‘ಬ್ಯಾಡಗಿ ಮಾರುಕಟ್ಟೆ ಸಾವಿರಾರು ಉದ್ಯೋಗ ಸೃಷ್ಟಿಸಿದೆ. ಆದರೆ, ಜನಸಂಖ್ಯೆಗೆ ತಕ್ಕಂತೆ ಮೂಲಸೌಕರ್ಯ, ನೀರು, ಶೌಚಾಲಯ, ಸಂಚಾರ ವ್ಯವಸ್ಥೆಗಳು ಅಭಿವೃದ್ಧಿ ಕಂಡಿಲ್ಲ. ಗ್ರಾಮೀಣ ಭಾಗದಲ್ಲಿ ನೀರಾವರಿ ಕೊರತೆ ಇದೆ. ಈ ಬಗ್ಗೆ ಕಾಂಗ್ರೆಸಿಗರನ್ನು ಪ್ರಶ್ನಿಸಿದರೆ, ಸಾಧನೆಯ ಬಗ್ಗೆ ಹೇಳುತ್ತಾರೆ. ಬಿಜೆಪಿಯವರು ಆರಿಸಿ ಬಂದ ಬಳಿಕ ಮಾಡುತ್ತೇವೆ ಎನ್ನುತ್ತಾರೆ. ಇಂತಹ ಭರವಸೆಗಳನ್ನೇ ಹಲವು ದಶಕಗಳಿಂದ ಕೇಳುತ್ತಾ ಬಂದಿದ್ದೇವೆ’ ಎನ್ನುತ್ತಾರೆ ಉದ್ಯಮಿ ಸಿ.ಎಸ್. ಚಂದ್ರಪಟ್ಟಣ್.

ಪಟ್ಟಣ ಮತ್ತು ಗ್ರಾಮೀಣ ಹಾಗೂ ಪಂಚಮಸಾಲಿ ಮತ್ತು ಸಾದರ ಪಂಗಡಗಳ ನಡುವೆ ಮತ ಧ್ರುವೀಕರಣಗೊಳ್ಳುತ್ತಿರುವ ಲಕ್ಷಣವನ್ನು ವಿಶ್ಲೇಷಿಸಿದರು.

ಊರಿಂದ ಹೋಗಿ ಬರಲು ಸಮರ್ಪಕ ಬಸ್ ಸೌಕರ್ಯಗಳಿಲ್ಲ. ಮಾರುಕಟ್ಟೆಲ್ಲಿ ಸಮರ್ಪಕ ಶೌಚಾಲಯಗಳ ವ್ಯವಸ್ಥೆ ಇಲ್ಲ ಎಂದು ಮೆಣಸಿನ ತೂಬು ತೆಗೆಯಲು ಬಂದ ಮಹಿಳೆಯರು ಸಮಸ್ಯೆಗಳನ್ನು ತೋಡಿಕೊಂಡರು.

‘ಎಸ್,ಆರ್, ಪಾಟೀಲ್ ಉದ್ಯಮಿಯಾಗಿದ್ದು, ಪಟ್ಟಣದಲ್ಲಿ ಹಿಡಿತವಿದೆ. ಗ್ರಾಮೀಣ ಭಾಗದಲ್ಲಿ ಬಿಜೆಪಿಗೆ ನೆಲೆ ಇದೆ. ಬಳ್ಳಾರಿ ತಮ್ಮದೇ ವಲಯ ಹೊಂದಿದ್ದಾರೆ. ಅಲ್ಲದೇ, ಶಿವಣ್ಣನವರ ಮೇಲೆ ಹಳ್ಳಿಜನ ಮತ್ತು ಬಡವರಿಗೆ ನಿಷ್ಠೆ ಇದೆ’ ಎಂದು ದಲ್ಲಾಳಿ ಅಂಗಡಿ ನಡೆಸುವ ಸೋಮಶೇಖರ ಆಲೂರು ತಿಳಿಸಿದರು.

ಕಾಗಿನೆಲೆ ಭಾಗದಲ್ಲಿ ಅಲ್ಪಸಂಖ್ಯಾತ ಮತಗಳು ನಿರ್ಣಾಯಕವಾಗಿವೆ. ನಿರುದ್ಯೋಗ ನಿವಾರಣೆ, ಕೆರೆ ತುಂಬಿಸುವುದು, ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದು, ಕ್ಲುಪ್ತ ಸಮಯದಲ್ಲಿ ಬೆಳೆ ವಿಮೆ ನೀಡುವುದು,
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಇಡೀ ಕಾಗಿನೆಲೆ ಗ್ರಾಮಕ್ಕೆ ಆದ್ಯತೆ ನೀಡಬೇಕು ಎಂದು ಕಾಗಿನೆಲೆಯ ರೈತ
ಮುಖಂಡ ಎಂ.ಎನ್.ನಾಯಕ ತಿಳಿಸಿದರು.

ಒಟ್ಟಾರೆ, ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಟಿಕೆಟ್ ವಂಚಿತ ಶಾಸಕ ಶಿವಣ್ಣನವರ ಬೆಂಬಲಿಗರ ನಿರ್ಧಾರವೂ ಪ್ರಭಾವ ಬೀರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT