ಹೈಕೋರ್ಟ್ ಮೆಟ್ಟಿಲೇರಿದ ಜನಾರ್ದನ ರೆಡ್ಡಿ 

7
ಎರಡು ಪ್ರತ್ಯೇಕ ರಿಟ್ ಅರ್ಜಿ ಸಲ್ಲಿಕೆ

ಹೈಕೋರ್ಟ್ ಮೆಟ್ಟಿಲೇರಿದ ಜನಾರ್ದನ ರೆಡ್ಡಿ 

Published:
Updated:

ಬೆಂಗಳೂರು: ‘ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳ ಜೊತೆಗೆ ಡೀಲ್ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳ ಬದಲಾವಣೆ ಮಾಡಬೇಕು’ ಎಂದು ಕೋರಿ ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಕುರಿತ ರಿಟ್ ಅರ್ಜಿಯನ್ನು ಶುಕ್ರವಾರ ಅವರು ಹೈಕೋರ್ಟ್‌ನಲ್ಲಿ ದಾಖಲಿಸಿದ್ದಾರೆ. ನ್ಯಾಯಮೂರ್ತಿ ಬಿ.ವೀರಪ್ಪ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ಈ ಅರ್ಜಿ ಇನ್ನೂ ವಿಚಾರಣೆಗೆ ಬರಬೇಕಿದೆ. ಅಂತೆಯೇ ತಮ್ಮ ವಿರುದ್ಧ ದೇವರಜೀವನಹಳ್ಳಿ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದುಗೊಳಿಸುವಂತೆಯೂ ಕೋರಿ ಜನಾರ್ದನ ರೆಡ್ಡಿ ಮತ್ತೊಂದು ರಿಟ್ ಅರ್ಜಿಯನ್ನೂ ಇದೇ ಹೈಕೋರ್ಟ್‌ನಲ್ಲಿ ದಾಖಲಿಸಿದ್ದಾರೆ.

ಈ ಅರ್ಜಿ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರಬೇಕಿದೆ. ಎರಡೂ ಅರ್ಜಿಗಳನ್ನು ನ್ಯಾಯಪೀಠ ಇಂದೇ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆಯೋ ಅಥವಾ ಎಂದಿನ ಕಲಾಪ ಪಟ್ಟಿಯ ಅನುಸಾರ, ಸರದಿಯ ಮೇಲೆ ಬರಲಿ ಎನ್ನುವುದೊ ಕಾದು ನೋಡಬೇಕಿದೆ. ಜನಾರ್ದನ ರೆಡ್ಡಿ ಪರ ಆರ್.ಪಿ.ಚಂದ್ರಶೇಖರ್ ವಕಾಲತ್ತು ವಹಿಸಿದ್ದಾರೆ.

ಮತ್ತೊಂದು ಬೆಳವಣಿಗೆಯಲ್ಲಿ ಜನಾರ್ದನ್ ರೆಡ್ಡಿ ಪರ ವಕೀಲರು ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿಗೆ ಅರ್ಜಿ ಸಲ್ಲಿಸಿದರು.

ಅರ್ಜಿದಾರರ ಆಕ್ಷೇಪಣೆ ಏನು ?

* ರಾಜಕೀಯ ದುರುದ್ದೇಶದಿಂದ ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.

* ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ ಹಾಗೂ ಡಿಸಿಪಿ ಎಸ್.ಗಿರೀಶ್ ರಾಜಕೀಯ ಒತ್ತಡಕ್ಕೆ ಒಳಗಾಗಿದ್ದಾರೆ.

* ಪ್ರಕರಣದಲ್ಲಿನ ಆರೋಪಿ ಸಂಖ್ಯೆ 4 ಆದ, ಬಳ್ಳಾರಿಯ ರಾಜಮಹಲ್ ಜ್ಯೂವೆಲರ್ಸ್ ಮಾಲೀಕ ರಮೇಶ್ ಅವರನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

* ಈ ಕುರಿತಂತೆ ಇಂದೇ (ನ‌.9) ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಪೊಲೀಸ್ ದೂರು ಪ್ರಾಧಿಕಾರಕ್ಕೆ ಫಿರ್ಯಾದು ನೀಡಲಾಗುವುದು.

* ತನಿಖೆಯಲ್ಲಿ ಎಳ್ಳಷ್ಟೂ ಪಾರದರ್ಶಕತೆ ಇಲ್ಲ. ಎಲ್ಲಾ ರಾಜಕೀಯ ಪ್ರೇರಿತ ಅಗಿದೆ.

* ತಾಜ್ ವೆಸ್ಟ್ಎಂಡ್ ಹೋಟೆಲ್ ನಲ್ಲಿ ನಡೆಸಿದ ತನಿಖೆಯ ವಿಡಿಯೊವನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ.

* ತನಿಖೆ ನಡೆಸಿದ ಪೊಲೀಸರು ಎಲ್ಲ ಮಾಹಿತಿಯನ್ನು ಮಾಧ್ಯಮ ಗೋಷ್ಠಿ ಕರೆದು ಬಹಿರಂಗಗೊಳಿಸಿದ್ದಾರೆ. ಈ ಮೂಲಕ ತನಿಖೆ ಗೋಪ್ಯತೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ.

* ಈ ಎಲ್ಲ ಕಾರಣಗಳಿಗಾಗಿ ಕೂಡಲೇ ಪ್ರಕರಣದ ತನಿಖಾಧಿಕಾರಿಗಳನ್ನು ಬದಲಾಯಿಸಬೇಕು ಎಂಬುದು ಅರ್ಜಿದಾರರ ಕೋರಿಕೆ.

ಬರಹ ಇಷ್ಟವಾಯಿತೆ?

 • 25

  Happy
 • 3

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !