ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಪೈಸೆ ಅಕ್ರಮ ಹಣವಾದ್ರೂ ಸಿಕ್ತಾ? ಜನಾರ್ದನ ರೆಡ್ಡಿ ಪ್ರಶ್ನೆ

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯಗೆ ಜನಾರ್ದನ ರೆಡ್ಡಿ ಪ್ರಶ್ನೆ
Last Updated 29 ಅಕ್ಟೋಬರ್ 2018, 20:21 IST
ಅಕ್ಷರ ಗಾತ್ರ

ಮೊಳಕಾಲ್ಮುರು: ‘ನೀನು (ಸಿದ್ದರಾಮಯ್ಯ) ಮುಖ್ಯಮಂತ್ರಿಯಾದ ಬಳಿಕ ನನ್ನ ಮನೆಯ ಮೇಲೆ ದಾಳಿ ಮಾಡಿಸಿದಿ. ಅನ್ಯಾಯವಾಗಿ ನನ್ನನ್ನು ನಾಲ್ಕು ವರ್ಷ ಜೈಲಿನಲ್ಲಿ ಇಟ್ಟು ಅಧಿಕಾರ ನಡೆಸಿದಿ. ಒಂದು ಪೈಸೆ ಅಕ್ರಮ ಹಣವಾದರೂ ಸಿಕ್ಕಿತೇ’– ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಗಣಿ ಉದ್ಯಮಿ ಜಿ. ಜನಾರ್ದನ ರೆಡ್ಡಿ ಕೇಳಿದ ಪ್ರಶ್ನೆ ಇದು.

ಬಳ್ಳಾರಿ ಲೋಕಸಭಾ ಉಪಚುನಾಣೆಯ ಪ್ರಚಾರಕ್ಕೆ ಶಾಸಕ ಬಿ. ರಾಮುಲು ಅವರಿಗೆ ಸಾಥ್‌ ನೀಡಲು ಗಡಿ ಪ್ರದೇಶವಾದ ಮೊಳಕಾಲ್ಮುರಿನಲ್ಲಿ ವಾಸ್ತವ್ಯ ಹೂಡಿರುವ ಅವರು, ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಅಕ್ರಮ ಗಣಿಗಾರಿಕೆ ನೆಪದಲ್ಲಿ ಪಾದಯಾತ್ರೆ ಮಾಡಿಕೊಂಡು ಬಳ್ಳಾರಿಗೆ ಬಂದ ಸಿದ್ದರಾಮಯ್ಯ, ಸುಳ್ಳು ಆರೋಪ ಮಾಡಿದರು. ಸತ್ಯಶೋಧನೆ ಹೆಸರಲ್ಲಿ ಅಸತ್ಯದ ವರದಿ ಪಡೆದು ಕಿರುಕುಳ ನೀಡಿದರು’ ಎಂದು ಆರೋಪಿಸಿದರು.

‘₹ 1 ಲಕ್ಷ ಕೋಟಿ ಹಣವನ್ನು ರೆಡ್ಡಿ ಕುಟುಂಬ ಲೂಟಿ ಮಾಡಿದ್ದು, ಅದನ್ನು ವಾಪಸ್ ತರುತ್ತೇವೆಂದು ಪ್ರಚಾರ ಮಾಡಿದರು. ಈ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿರುವ ಆನಂದ್‌ ಸಿಂಗ್‌ ಹಾಗೂ ನಾಗೇಂದ್ರ ನಿಮ್ಮ ಜೊತೆಗಿದ್ದಾರೆ. ಅವರನ್ನು ಅಕ್ಕ–ಪಕ್ಕ ಕೂರಿಸಿಕೊಳ್ಳಲು ನಿಮಗೆ ನಾಚಿಗೆ ಆಗುವುದಿಲ್ಲವೇ’ ಎಂದು ವಾಗ್ದಾಳಿ ನಡೆಸಿದರು.

‘ಐದು ವರ್ಷ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ ಸಿದ್ದರಾಮಯ್ಯ ಬಳ್ಳಾರಿಯನ್ನು ಸರ್ವನಾಶ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ ಬಳ್ಳಾರಿಗೆ ನೀವು ಮಾಡಿದ್ದು ಏನು ಎಂಬುದನ್ನು ಚರ್ಚಿಸೋಣ ಬನ್ನಿ’ ಎಂದು ಬಹಿರಂಗ ಸವಾಲು ಹಾಕಿದರು.

‘ವೀರಶೈವ ಲಿಂಗಾಯತರನ್ನು ಒಡೆಯಲು ಕಾಂಗ್ರೆಸ್‌ ಪ್ರಯತ್ನಿಸಿದೆ. ಭಗವಂತ ಶಾಪ ಕೊಟ್ಟಿದ್ದರಿಂದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಆರಂಭದಲ್ಲಿಯೇ ಇದನ್ನು ಪ್ರಶ್ನಿಸದ ಡಿ.ಕೆ. ಶಿವಕುಮಾರ್‌, ಲೋಕಸಭಾ ಚುನಾವಣೆಗಾಗಿ ಮತ್ತೆ ಈ ವಿಚಾರವನ್ನು ಕೆದಕಿದ್ದಾರೆ. ತಂತ್ರ–ಕುತಂತ್ರದಲ್ಲಿ ಡಿ.ಕೆ. ಶಿವಕುಮಾರ್‌ ಪಿಎಚ್‌.ಡಿ ಪಡೆದಿದ್ದಾರೆ’ ಎಂದರು.

‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ವಾಲ್ಮೀಕಿ ಪ್ರಶಸ್ತಿ ಸ್ವೀಕರಿಸಲು ಹಾಗೂ ಅವರ ಪುತ್ರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲು ಸಮಾರಂಭಕ್ಕೆ ಬರಲಿಲ್ಲ. ಈ ಮೂಲಕ ವಾಲ್ಮೀಕಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ’ ಎಂದು ದೂರಿದರು.

‘ಭದ್ರತೆ ಒದಗಿಸುತ್ತಿಲ್ಲ’

‘ನ್ಯಾಯಾಲಯಕ್ಕೆ ಹೋಗಿ ಬರಲು ಆಂಧ್ರ ಪ್ರದೇಶ ಸರ್ಕಾರ ಭದ್ರತೆ ಒದಗಿಸಿದೆ. ರಕ್ಷಣೆ ಒದಗಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮೂರು ಬಾರಿ ಕೋರಿಕೊಂಡಿದ್ದೇನೆ. ಆದರೆ, ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಜನಾರ್ದನ ರೆಡ್ಡಿ ಆರೋಪಿಸಿದರು.

‘ಬೆಂಗಳೂರಿನ ನಿವಾಸದ ಸುತ್ತ ಭಯದ ವಾತಾವರಣ ನಿರ್ಮಾಣ ಮಾಡಲಾಗಿದೆ. ಮನೆಗೆ ಬಂದು ಹೋಗುವವರ ಮೇಲೆ ಗುಪ್ತಚರ ಇಲಾಖೆ ಕಣ್ಣಿಟ್ಟಿದೆ. ನೀವು ಎಷ್ಟೇ ಹೆದರಿಸಿದರೂ ನಾನು ಭಯಪಡುವುದಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

‘ನಾಲ್ಕು ವರ್ಷ ಜೈಲಿಗೆ ಹಾಕಿಸಿದರು’ ಎಂಬ ಜನಾರ್ದನ ರೆಡ್ಡಿ ಅವರ ಆರೋಪಕ್ಕೆ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಉತ್ತರ ನೀಡಿದ್ದಾರೆ.

‘ಕಣ್ಣೀರು ಹಾಕುತ್ತಿರುವ ಜನಾರ್ದನ ರೆಡ್ಡಿ ಅವರೇ, ನಿಮ್ಮ ಪಕ್ಷದ ಸಂಸದರೇ ಬರೆದಿರುವ ಈ ಪುಸ್ತಕವನ್ನು ದಯವಿಟ್ಟು ಓದಿ. ಜೈಲಿಗೆ ಹೋಗುವ ಪಾಪ ಏನು ಮಾಡಿದ್ದೀರಿ ಎಂದು ಗೊತ್ತಾಗುತ್ತದೆ’ ಎಂದು ಕುಟುಕಿರುವ ಸಿದ್ದರಾಮಯ್ಯ, ಪ್ರತಾಪ ಸಿಂಹ ಅವರ ‘ಮೈನಿಂಗ್‌ ಮಾಫಿಯಾ’ ಪುಸ್ತಕದ ಮುಖಪುಟವನ್ನು ಟ್ವೀಟ್‌ ಮಾಡಿದ್ದಾರೆ.

* ನಮ್ಮನ್ನು ಕಂಡರೆ ರಾಜ್ಯ ಸರ್ಕಾರಕ್ಕೆ ಭಯ. ವಿಧಾನಸೌಧಕ್ಕೆ ಬೀಗ ಹಾಕಿಕೊಂಡು ಬಂದಿದ್ದಾರೆ. ನಿಮ್ಮನ್ನು ನೋಡುವ ಭಾಗ್ಯ ಕೊನೆಗೂ ಜನರಿಗೆ ಸಿಕ್ಕಿತು

-ಜಿ. ಜನಾರ್ದನ ರೆಡ್ಡಿ, ಗಣಿ ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT