ಜನಾರ್ದನ ರೆಡ್ಡಿ ಯೋಗ್ಯರಲ್ಲ: ಎಚ್‌. ಆಂಜನೇಯ

7

ಜನಾರ್ದನ ರೆಡ್ಡಿ ಯೋಗ್ಯರಲ್ಲ: ಎಚ್‌. ಆಂಜನೇಯ

Published:
Updated:
Deccan Herald

ಹೊಸಪೇಟೆ: ‘ಜನಾರ್ದನ ರೆಡ್ಡಿ ಯೋಗ್ಯರಲ್ಲ. ಅವರ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಎಚ್‌. ಆಂಜನೇಯ ಹೇಳಿದರು.

ಬಳ್ಳಾರಿ ಲೋಕಸಭೆ ಉಪಚುನಾವಣೆ ಪ್ರಯುಕ್ತ ಇಲ್ಲಿನ ವರಕೇರಿಯಲ್ಲಿ ಗುರುವಾರ ಪಕ್ಷದ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪನವರ ಪರ ಮತಯಾಚಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸಿದ್ದರಾಮಯ್ಯನವರು ಸುಸಂಸ್ಕೃತ, ಸಭ್ಯ ರಾಜಕಾರಣಿ. ಕೆಲವರ ಬಗ್ಗೆ ಉಗ್ರವಾಗಿ ಟೀಕೆ ಮಾಡಿದ್ದಾರೆ ಹೊರತು ವೈಯಕ್ತಿಕವಾಗಿ ಟೀಕಿಸಿಲ್ಲ. ಪ್ರಧಾನಿ ಮೋದಿಯವರಿಗೆ ಸರ್ವಾಧಿಕಾರಿ ಎಂದು ಹೇಳಿದ್ದಾರೆ. ಈ ರಾಜ್ಯದಲ್ಲಿ ದೇವರಾಜ ಅರಸು ನಂತರ ಸ್ಥಿರ, ಸುಭದ್ರ ಸರ್ಕಾರ ನೀಡಿದ ಹೆಗ್ಗಳಿಕೆ ಅವರದು. ರೆಡ್ಡಿಯವರು ಸಿದ್ದರಾಮಯ್ಯನವರ ಬಗ್ಗೆ ನೀಡಿರುವ ಹೇಳಿಕೆ ಒಪ್ಪುವಂತಹದ್ದಲ್ಲ’ ಎಂದರು.

‘ನಮ್ಮ ಪಕ್ಷ ಪ್ರಜಾಪ್ರಭುತ್ವ ವ್ಯವಸ್ಥೆ, ಜನರ ಮೇಲೆ ನಂಬಿಕೆ ಇಟ್ಟಿದೆ. ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಖರೀದಿಸುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದ ಕಾರ್ಯಕ್ರಮವನ್ನು ಒಪ್ಪಿಕೊಂಡು ಅವರು ಬಂದಿರಬಹುದು. ಅವರ ತಂದೆ ಲಿಂಗಪ್ಪನವರು ಅನೇಕ ವರ್ಷಗಳಿಂದ ನಮ್ಮ ಪಕ್ಷದಲ್ಲಿ ಇದ್ದಾರೆ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಶ್ರೀರಾಮುಲು, ಅವರ ಸಹೋದರಿ ಜೆ. ಶಾಂತಾ ಅವರು ಈ ಜಿಲ್ಲೆ ಹಾಗೂ ಅವರು ಪ್ರತಿನಿಧಿಸುವ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಉಗ್ರಪ್ಪನವರು ನಾಲ್ಕು ದಶಕಗಳಿಂದ ಸಾಮಾಜಿಕ ಜೀವನದಲ್ಲಿದ್ದಾರೆ. ಮೇಲಿಂದ ಕಾನೂನು ಪಂಡಿತರು. ಎಲ್ಲ ಜಾತಿ, ಜನಾಂಗದ ಬೆಂಬಲ ಅವರಿಗಿದೆ. ಚುನಾವಣೆಯಲ್ಲಿ ಒಳಗಿನವರು, ಹೊರಗಿನವರು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಉಗ್ರಪ್ಪ ಗೆಲುವು ನೂರಕ್ಕೆ ನೂರರಷ್ಟು ಖಚಿತ’ ಎಂದು ಭರವಸೆ ವ್ಯಕ್ತಪಡಿಸಿದರು.

ಶಾಸಕ ಆನಂದ್‌ ಸಿಂಗ್‌, ನಗರಸಭೆ ಅಧ್ಯಕ್ಷ ಗುಜ್ಜಲ್‌ ನಿಂಗಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ. ರಫೀಕ್‌, ಅಮಾಜಿ ಹೇಮಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !