ಮಂಗಳವಾರ, ಡಿಸೆಂಬರ್ 10, 2019
26 °C
ಕೇಂದ್ರ, ರಾಜ್ಯ ಸರ್ಕಾರಗಳು ಧೈರ್ಯ ಪ್ರದರ್ಶಿಸಲಿ

ಜನಾರ್ದನ ರೆಡ್ಡಿ ವಿರುದ್ಧ ತನಿಖೆ ಚುರುಕಿಗೆ ಎಸ್‌.ಆರ್‌. ಹಿರೇಮಠ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಇ.ಡಿ ಡೀಲ್’ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ವಿರುದ್ಧ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತನಿಖೆ ಚುರುಕುಗೊಳಿಸಬೇಕು ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಆಗ್ರಹಿಸಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೆಡ್ಡಿ ಅಕ್ರಮ ಗಣಿಗಾರಿಕೆಯಿಂದ ಸಂಪಾದಿಸಿರುವ ₹ 40,000 ಕೋಟಿ ಆಸ್ತಿಯನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಉಭಯ ಸರ್ಕಾರಗಳು ಧೈರ್ಯ ಪ್ರದರ್ಶಿಸಬೇಕಿದೆ ಎಂದರು.

ರೆಡ್ಡಿ ಅವರನ್ನು ಬಂಧಿಸಿರುವ ಸಿಸಿಬಿ ಪೊಲೀಸರ ಕ್ರಮ ಸ್ವಾಗತಾರ್ಹ. ₹ 600 ಕೋಟಿ ವಂಚಿಸಿರುವ ‘ಆ್ಯಂಬಿಡೆಂಟ್‌’ ಕಂಪನಿಯ ಮೂವರು ಪ್ರಮುಖರನ್ನು ಬಂಧಿಸಬೇಕಲ್ಲದೆ, ಈ ಪ್ರಕರಣದಲ್ಲಿ ವಂಚನೆಗೆ ಒಳಗಾಗಿರುವ ಅಮಾಯಕರಿಗೆ ಹಣ ಮರಳಿಸಬೇಕು ಎಂದು ಅವರು ಆಗ್ರಹಿಸಿದರು.

90ರ ದಶಕದಲ್ಲಿ ಜನಾರ್ದನ ರೆಡ್ಡಿ ಆರಂಭಿಸಿದ್ದ ಎನೋಬಲ್‌ ಇಂಡಿಯಾ ಕಂಪನಿ ಅಕ್ರಮಗಳ ಕುರಿತು 1998ರ ಅಕ್ಟೋಬರ್‌ 5ರಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಪತ್ರಿಕಾ ಜಾಹೀರಾತು ನೀಡಿತ್ತು. ವಂಚನೆಯಲ್ಲಿ ಅನುಭವಿಯಾದ ರೆಡ್ಡಿಯೇ ಆ್ಯಂಬಿ
ಡೆಂಟ್‌ ಕಂಪನಿ ಸ್ಥಾಪನೆಯ ಸೂತ್ರಧಾರನಾಗಿರುವ ಸಾಧ್ಯತೆಯೂ ಇದೆ. ವಂಚನೆಯಿಂದ ಸಂಪಾದಿಸಿರುವ ₹ 20 ಕೋಟಿಯನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಓಬಳಾಪುರಂ ಮೈನಿಂಗ್‌ ಕಂಪನಿ (ಓಎಂಸಿ), ಅಸೋಸಿಯೇಟೆಡ್‌ ಮೈನಿಂಗ್‌ ಕಂಪನಿ (ಎಎಂಸಿ) ಅಕ್ರಮ, ಬೇಲೆಕೇರಿ ಬಂದರಿನಿಂದ ಅದಿರು ಅಕ್ರಮ ಸಾಗಣೆಯ ಪ್ರಮುಖ ಆರೋಪಿಯಾಗಿರುವ ರೆಡ್ಡಿ ವಿರುದ್ಧ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದರು.

ಅಕ್ರಮ ಗಣಿಗಾರಿಕೆ ವಿರುದ್ಧ ದನಿ ಎತ್ತಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಎಚ್‌.ಕೆ. ಪಾಟೀಲ ನೇತೃತ್ವದಲ್ಲಿ ರಚಿಸಿದ್ದ ಸಂಪುಟ ಉಪ ಸಮಿತಿಯು ರೆಡ್ಡಿ ಅಕ್ರಮ ಸಂಪಾದನೆಯ ವರದಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ. ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅವರು ಸಲ್ಲಿಸಿದ್ದ ಅಕ್ರಮ ಗಣಿಗಾರಿಕೆ ಕುರಿತ ವರದಿಯ ಸಮಗ್ರ ಜಾರಿಗೆ ಈಗಿನ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು