ಭಾನುವಾರ, ಡಿಸೆಂಬರ್ 8, 2019
21 °C

23 ತಾಸು ಸಿಸಿಬಿ ದಿಗ್ಬಂಧನ; ಮತ್ತೆ ‌ಜೈಲು ಸೇರಿದ ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಇ.ಡಿ ಡೀಲ್’ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಭಾನುವಾರ ಸಂಜೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ (ಯುಟಿಪಿ) 10,902 ನೀಡಲಾಗಿದೆ.

ರೆಡ್ಡಿ ಹಾಗೂ ಅವರ ಆಪ್ತಸಹಾಯಕ ಆಲಿಖಾನ್ ಹಿಂದೆ ಎಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಆಗ ಅವರನ್ನು ‘ವಿಶೇಷ ಭದ್ರತೆ’ಯ ಕೊಠಡಿಯಲ್ಲಿ ಬಂಧಿಸಿಡಲಾಗಿತ್ತು. ರೆಡ್ಡಿ ಈಗ ಮತ್ತೆ ಅದೇ ಕೊಠಡಿ ಸೇರಿದ್ದಾರೆ.

23 ತಾಸು ದಿಗ್ಬಂಧನ: ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದ ಬಳಿಕ ಅಜ್ಞಾತವಾಗಿದ್ದ ರೆಡ್ಡಿ, ಶನಿವಾರ ಮಧ್ಯಾಹ್ನ 3.45ರ ಸುಮಾರಿಗೆ ಸಿಸಿಬಿ ಕಚೇರಿಗೆ ಬಂದಿದ್ದರು. ವಿಶ್ರಾಂತಿ ನೀಡದೆ ತಡರಾತ್ರಿವರೆಗೂ ಅವರನ್ನು ವಿಚಾರಣೆಗೆ ಒಳಪಡಿಸಿದ್ದ ಅಧಿಕಾರಿಗಳು, ರಾತ್ರಿ ಅಲ್ಲೇ ಉಳಿಸಿಕೊಂಡರು. ಭಾನುವಾರ ಬೆಳಿಗ್ಗೆ 10 ಗಂಟೆಗೆ ರೆಡ್ಡಿ ಬಂಧನವನ್ನು ಅಧಿಕೃತಗೊಳಿಸಿದರು.

ಆದರೆ, ರೆಡ್ಡಿ ಆಪ್ತಸಹಾಯಕ ಆಲಿಖಾನ್ ಹಾಗೂ ‘ಆ್ಯಂಬಿಡೆಂಟ್’ ಕಂಪನಿ ಮಾಲೀಕ ಸೈಯದ್ ಅಹಮದ್ ಫರೀದ್‌ ಜಾಮೀನು ಪಡೆದುಕೊಂಡಿದ್ದರಿಂದ ಅವರನ್ನು ಕಳುಹಿಸಿದರು.

ರೆಡ್ಡಿ ಅವರಿಗೆ ಮಧ್ಯಾಹ್ನ 3 ಗಂಟೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿದ ಪೊಲೀಸರು, ನಂತರ ಕೋರಮಂಗಲದಲ್ಲಿರುವ 1ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವಿ.ಜಗದೀಶ್ ಅವರ ಮುಂದೆ ಹಾಜರುಪಡಿಸಿದರು. ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ಹಾಗೂ ನ್ಯಾಯಾಧೀಶರ ನಿವಾಸದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

‘ರೆಡ್ಡಿ ವಿರುದ್ಧ ವಂಚನೆ (ಐಪಿಸಿ 419, 420), ನಕಲಿ ದಾಖಲೆ ಸೃಷ್ಟಿ (468) ಹಾಗೂ ಅಪರಾಧ ಸಂಚು (120ಬಿ) ಆರೋಪಗಳಡಿ ಪ್ರಕರಣ ದಾಖಲಾಗಿದೆ. ಆರೋಪಿ ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನು ಮಂಜೂರು ಮಾಡಿದರೆ ಸಾಕ್ಷ್ಯನಾಶಪಡಿಸುವ ಸಾಧ್ಯತೆ ಇರುತ್ತದೆ’ ಎಂಬ ಅಂಶಗಳನ್ನು ಪೊಲೀಸರು ನ್ಯಾಯಾಧೀಶರ ಗಮನಕ್ಕೆ ತಂದರು. ನ್ಯಾಯಾಧೀಶರು ಆರೋಪಿಯನ್ನು ನ.24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಇದನ್ನೂ ಓದಿ: ಇ.ಡಿ ಡೀಲ್ ಪ್ರಕರಣ​: ಸಿಸಿಬಿ ಕಚೇರಿಗೆ ಜನಾರ್ದನ ರೆಡ್ಡಿ

ಪೊಲೀಸರು ತಕ್ಷಣ ಅವರನ್ನು ಜೀಪಿನಲ್ಲಿ ಕೂರಿಸಿಕೊಂಡು ಜೈಲಿಗೆ ಕರೆದೊಯ್ದರು. ಸಂಜೆ 5.20ಕ್ಕೆ ಕಾರಾಗೃಹಕ್ಕೆ ಕಾಲಿಟ್ಟ ರೆಡ್ಡಿ, ನೋಂದಣಿ ಪುಸ್ತಕಕ್ಕೆ ಸಹಿ ಮಾಡಿ ಒಳಹೋದರು. ವೈದ್ಯಕೀಯ ತಪಾಸಣೆ ಬಳಿಕ, ಸಿಬ್ಬಂದಿ ರೆಡ್ಡಿ ಅವರನ್ನು ವಿಶೇಷ ಭದ್ರತೆಯ ಕೊಠಡಿಗೆ ಬಿಟ್ಟರು. ಜಾಮೀನು ಕೋರಿ ರೆಡ್ಡಿ ಸಲ್ಲಿಸಿರುವ ಅರ್ಜಿ ಸೋಮವಾರ ವಿಚಾರಣೆಗೆ ಬರಲಿದ್ದು, ಕೋರ್ಟ್ ಆದೇಶದ ಮೇಲೆ ರೆಡ್ಡಿ ಜೈಲುವಾಸದ ಭವಿಷ್ಯ ನಿಂತಿದೆ.

ಇ.ಡಿ ಹೆಸರು ದುರ್ಬಳಕೆ

‘ಫರೀದ್, ಜನಾರ್ದನ ರೆಡ್ಡಿ, ಆಲಿಖಾನ್ ಅವರ ಸುದೀರ್ಘ ವಿಚಾರಣೆ ಬಳಿಕ ಕೆಲ ಮಹತ್ವದ ಸಾಕ್ಷ್ಯಗಳು ಲಭ್ಯವಾದವು. ಇವರು ಕೇಂದ್ರದ ತನಿಖಾ ಏಜೆನ್ಸಿಯ (ಜಾರಿ ನಿರ್ದೇಶನಾಲಯ) ಹೆಸರು ದುರ್ಬಳಕೆ ಮಾಡಿಕೊಂಡು 
₹ 20 ಕೋಟಿ ಲಪಟಾಯಿಸಲು ಒಳಸಂಚು ರೂಪಿಸಿರುವುದು ದೃಢಪಟ್ಟಿತು. ಹೀಗಾಗಿ, ಬಂಧನದ ಕ್ರಮ ಜರುಗಿಸಿದೆವು’ ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌ ಕುಮಾರ್ ಹೇಳಿದರು.

ಇದನ್ನೂ ಓದಿ: ಇ.ಡಿ ಡೀಲ್‌: ಸಿಸಿಬಿ ಪೊಲೀಸರಿಂದ ಜನಾರ್ದನ ರೆಡ್ಡಿ ಬಂಧನ

ಸಿಸಿಬಿಗೆ ಹೇಳಿಕೆ, ರಸೀದಿಗಳೇ ಸಾಕ್ಷ್ಯ! ; ಜನಾರ್ದನ ರೆಡ್ಡಿ–ಫರೀದ್ ಮುಖಾಮುಖಿ ವಿಚಾರಣೆ

‘ಆ್ಯಂಬಿಡೆಂಟ್’ ಕಂಪನಿ ಮಾಲೀಕ ಫರೀದ್ ಹಾಗೂ ಬೆಂಗಳೂರಿನ ‘ಅಂಬಿಕಾ ಜ್ಯುವೆಲರ್ಸ್’ ಮಾಲೀಕ ರಮೇಶ್ ಕೊಠಾರಿ ನೀಡಿದ ಹೇಳಿಕೆಗಳೇ ಗಾಲಿ ಜನಾರ್ದನರೆಡ್ಡಿ ಅವರಿಗೆ ಜೈಲಿನ ದಾರಿ ತೋರಿಸಿದವು!

‘ಫರೀದ್ ಯಾರಿಗೋ ಹೆದರಿ ನನ್ನ ಹೆಸರು ಹೇಳಿರಬಹುದು’ ಎಂದು ರೆಡ್ಡಿ ವಿಚಾರಣೆ ವೇಳೆ ಹೇಳಿದರು. ಹೀಗಾಗಿ, ಫರೀದ್‌ ಅವರನ್ನು ಕರೆಸಿ ರೆಡ್ಡಿ ಎದುರೇ ಪ್ರಶ್ನೆ ಮಾಡಿದೆವು. ‘ಇ.ಡಿ ಪ್ರಕರಣದಲ್ಲಿ ನನಗೆ ನೆರವು ನೀಡುವುದಾಗಿ ಜನಾರ್ದನರೆಡ್ಡಿ ₹ 20 ಕೋಟಿ ಕೇಳಿದ್ದರು’ ಎಂದು ಫರೀದ್ ಹೇಳಿದರು. ಅದಕ್ಕೆ ರೆಡ್ಡಿ ಒಪ್ಪ‍ಲಿಲ್ಲ. ಆದರೆ, ಇದಕ್ಕೆ ಪೂರಕವಾಗಿ ಕೆಲ ದಾಖಲೆಗಳು ಸಿಕ್ಕವು ಎಂದು ಸಿಸಿಬಿ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರೆಡ್ಡಿ ಅವರ ಸೂಚನೆಯಂತೆಯೇ ಆಭರಣ ವ್ಯಾಪಾರಿ ರಮೇಶ್ ಕೊಠಾರಿಯ ಬ್ಯಾಂಕ್ ಖಾತೆಗೆ ₹ 20 ಕೋಟಿ ಹಾಕಿದ್ದೆ. ಅವರು ಹಣಕ್ಕೆ ಪ್ರತಿಯಾಗಿ 57 ಕೆ.ಜಿ ಚಿನ್ನದ ಗಟ್ಟಿಗಳನ್ನು ಬಳ್ಳಾರಿಯ ‘ರಾಜ್‌ಮಹಲ್’ ಜ್ಯುವೆಲರ್ಸ್ ಮಳಿಗೆ ಮಾಲೀಕ ರಮೇಶ್‌ಗೆ ತಲುಪಿಸಿದ್ದರು. ಆದರೆ, ಆ ಚಿನ್ನವನ್ನು ನಾನೇ ಖರೀದಿಸಿದಂತೆ 7 ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಅವುಗಳಿಗೆ ನನ್ನ ಸಹಿ ಹಾಕಿಸಿದ್ದರು. ನಂತರ ಆಲಿಖಾನ್, ಬಳ್ಳಾರಿಯ ರಮೇಶ್ ಅವರಿಂದ ಚಿನ್ನ ಪಡೆದು ರೆಡ್ಡಿಗೆ ಮುಟ್ಟಿಸಿದ್ದಾರೆ’ ಎಂದು ಫರೀದ್ ಹೇಳಿದರು. ಆ ಏಳೂ ಬಿಲ್‌ಗಳನ್ನೂ ಜಪ್ತಿ ಮಾಡಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ರಮೇಶ್ ಕೊಠಾರಿ ಕೂಡ ಅದೇ ಧಾಟಿಯಲ್ಲಿ ಹೇಳಿಕೆ ಕೊಟ್ಟಿದ್ದು, ಎಲ್ಲರ ಹೇಳಿಕೆಗಳನ್ನೂ ವಿಡಿಯೊ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಆರೋಪಿಗಳು ವಂಚನೆಗೆ ಒಳಸಂಚು ನಡೆಸಿರುವುದು ಸ್ಪಷ್ಟವಾಗಿದೆ ಎಂದರು.

ಎಳ್ಳಷ್ಟೂ ದಾಖಲೆ ಇಲ್ಲ: ‘ನ್ಯಾಯಾಲಯದ ಸೂಚನೆಯಂತೆ ನಾವು ಪೊಲೀಸ್ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. ಆದರೂ, ರೆಡ್ಡಿ ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಸಿಸಿಬಿ ಬಳಿ ಎಳ್ಳಷ್ಟೂ ಪುರಾವೆಗಳಿಲ್ಲ’ ಎಂದು ರೆಡ್ಡಿ ಪರ ವಕೀಲ ಚಂದ್ರಶೇಖರ್ ಹೇಳಿದರು.

‘ಆತ್ಮಸ್ಥೈರ್ಯ ಕುಸಿಯಲ್ಲ’

‘ನಾನೊಬ್ಬ ಹುಟ್ಟು ಹೋರಾಟಗಾರ. ನನ್ನ ಆತ್ಮಸ್ಥೈರ್ಯ ಕಸಿಯಲು ಯಾರಿಂದಲೂ ಸಾಧ್ಯವಿಲ್ಲ. ಬಿಡುಗಡೆ ಬಳಿಕ ಕಾನೂನು ಹೋರಾಟ ಮುಂದುವರಿಸೋಣ’ ಎಂದು ರೆಡ್ಡಿ ತಮ್ಮ ಬಳಿ ಹೇಳಿದ್ದಾಗಿ ವಕೀಲ ಚಂದ್ರಶೇಖರ್ ಮಾಧ್ಯಮಗಳಿಗೆ ತಿಳಿಸಿದರು.

23 ತಾಸು ಸಿಸಿಬಿ ಕಚೇರಿಯಲ್ಲೇ ಇದ್ದ ರೆಡ್ಡಿ, ಭಾನುವಾರ ಮಧ್ಯಾಹ್ನ ನಗುಮೊಗದಿಂದಲೇ ಕಚೇರಿಯಿಂದ ಆಚೆ ಬಂದರು. ವಿಕ್ಟೋರಿಯಾ ಆಸ್ಪತ್ರೆ ಬಳಿ ತಮ್ಮನ್ನು ಕಾಣಲು ಬಂದಿದ್ದವರತ್ತ ಕೈ ಬೀಸಿ, ನಿರಾಳವಾಗಿ ಇರುವಂತೆ ಸೂಚಿಸಿದರು.

1,247 ದಿನ ಜೈಲಿನಲ್ಲೇ ಕಳೆದಿದ್ದ ರೆಡ್ಡಿ!

2011 ರಿಂದ 2015: ‘ಒಎಂಸಿ’ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ಬಲೆಗೆ ಬಿದ್ದು 2011ರ ಸೆ.5ರಂದು ಚಂಚಲಗೂಡ ಜೈಲು ಸೇರಿದ್ದ ರೆಡ್ಡಿ, 2015ರ ಜುಲೈ 23ರಂದು ಬಿಡುಗಡೆ ಆಗಿದ್ದರು. (ಈ ನಡುವೆ ಬಳ್ಳಾರಿಯ ‘ಎಎಂಸಿ ಮೈನಿಂಗ್ಸ್’ ಅಕ್ರಮವೂ ಬೆಳಕಿಗೆ ಬಂದಿತ್ತು. ಈ ಪ್ರಕರಣದ ವಿಚಾರಣೆಗಾಗಿ ರೆಡ್ಡಿಯನ್ನು ಚಂಚಲಗೂಡ ಜೈಲಿನಿಂದ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು)

2015ರ ನ.20: ‘ಬ್ಲ್ಯಾಕ್ ಗೋಲ್ಡ್ ಐರನ್ ಓರ್ ಮೈನಿಂಗ್‌’ ಕಂಪನಿಗೆ 3 ಲಕ್ಷ ಮೆಟ್ರಿಕ್ ಟನ್ ಅದಿರು ಸಾಗಿಸಿದ್ದ ಪ್ರಕರಣದಲ್ಲಿ ಲೋಕಾಯುಕ್ತ ಎಸ್‌ಐಟಿ ರೆಡ್ಡಿ ಅವರನ್ನು ಬಂಧಿಸಿತ್ತು. ಹತ್ತು ದಿನದ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು