ರೆಡ್ಡಿ ಮನೆ ಇಂಚಿಂಚೂ ಜಾಲಾಡಿದ ಪೊಲೀಸರು: ಚುನಾವಣೆಗೆ ಕರಗಿತೇ ಡೀಲ್ ಚಿನ್ನ?

7

ರೆಡ್ಡಿ ಮನೆ ಇಂಚಿಂಚೂ ಜಾಲಾಡಿದ ಪೊಲೀಸರು: ಚುನಾವಣೆಗೆ ಕರಗಿತೇ ಡೀಲ್ ಚಿನ್ನ?

Published:
Updated:
 ಬಳ್ಳಾರಿ ರಸ್ತೆಯಲ್ಲಿರುವ ಜನಾರ್ದನ ರೆಡ್ಡಿ ಅವರಿಗೆ ಸೇರಿದ ಮನೆ

ಬೆಂಗಳೂರು/ಬಳ್ಳಾರಿ: ಬಿಜೆಪಿ ಮುಖಂಡ ಗಾಲಿ ಜನಾರ್ದನರೆಡ್ಡಿ ಹಾಗೂ ಅವರು ಅಕ್ರಮವಾಗಿ ಪಡೆದಿದ್ದರು ಎನ್ನಲಾದ 57 ಕೆ.ಜಿ. ಚಿನ್ನಕ್ಕಾಗಿ ಪೊಲೀಸರು ಬೇಟೆ ಮುಂದುವರಿಸಿದ್ದು, ಚುನಾವಣಾ ಸಂದರ್ಭದಲ್ಲಿ ಆ ಚಿನ್ನ ಕರಗಿರಬಹುದು ಎಂಬ ಶಂಕೆಯನ್ನು ಸಿಸಿಬಿ ವ್ಯಕ್ತಪಡಿಸಿದೆ.

ಎಸಿಪಿ ಸುಬ್ರಹ್ಮಣ್ಯ ನೇತೃತ್ವದ ತಂಡ ರೆಡ್ಡಿಗಾಗಿ ಹೈದರಾಬಾದ್‌ನಲ್ಲಿ ಶೋಧ ನಡೆಸುತ್ತಿದ್ದರೆ, ಎಸಿಪಿ ಮಂಜುನಾಥ್ ಚೌಧರಿ ಅವರ ತಂಡವು ರೆಡ್ಡಿಗೆ ಸೇರಿದ ಬಳ್ಳಾರಿಯ ಸಿರುಗುಪ್ಪ ರಸ್ತೆಯಲ್ಲಿರುವ ಮನೆ ಹಾಗೂ ಓಬಳಾಪುರಂ ಮೈನಿಂಗ್‌ ಕಂಪನಿಯ ಕಚೇರಿಯನ್ನು ಗುರುವಾರ ಜಾಲಾಡಿದೆ.

ಬಹುಕೋಟಿ ವಂಚನೆ ಪ್ರಕರಣದಲ್ಲಿ ನೆರವು ನೀಡುವುದಾಗಿ ಬೆಂಗಳೂರಿನ ‘ಆ್ಯಂಬಿಡೆಂಟ್ ಮಾರ್ಕೆಂಟಿಂಗ್ ಪ್ರೈ.ಲಿ’ ಕಂಪನಿ ಮಾಲೀಕ ಸಯ್ಯದ್‌ ಅಹ್ಮದ್‌ ಫರೀದ್‌ ಜತೆ ₹ 20 ಕೋಟಿಯ ‘ಡೀಲ್’ಗೆ ಕೈಹಾಕಿದ ಆರೋಪ ರೆಡ್ಡಿ ಕೊರಳನ್ನು ಸುತ್ತಿಕೊಂಡಿದೆ.

‘ರೆಡ್ಡಿ ಸೂಚನೆಯಂತೆ ₹ 20 ಕೋಟಿ ನಗದಿನ ಬದಲಾಗಿ ಫರೀದ್ 57 ಕೆ.ಜಿ. ಚಿನ್ನವನ್ನು ಬಳ್ಳಾರಿಯ ಆಭರಣ ವ್ಯಾಪಾರಿ ರಮೇಶ್ ಕೊಠಾರಿಗೆ ತಲುಪಿಸಿದ್ದರು. ಕೆಲವು ದಿನಗಳ ಬಳಿಕ ಆ ಚಿನ್ನವನ್ನು ರೆಡ್ಡಿ ಆಪ್ತ ಸಹಾಯಕ ಆಲಿಖಾನ್ ತೆಗೆದುಕೊಂಡು ಹೋಗಿದ್ದಾಗಿ ಕೊಠಾರಿ ಹೇಳಿಕೆ ಕೊಟ್ಟಿದ್ದಾರೆ. ಆ ಚಿನ್ನದ ಗಟ್ಟಿ ಹಾಗೆಯೇ ಇದೆಯೋ ಅಥವಾ ಕರಗಿಸಿ ಮಾರಾಟ ಮಾಡಲಾಗಿದೆಯೋ ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ’ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ರೆಡ್ಡಿಗೆ ನೋಟಿಸ್: ‘ಈ ಡೀಲ್ ನಡೆದಿರುವುದು ಮಾರ್ಚ್‌ನಲ್ಲಿ. ಆ ನಂತರ ರೆಡ್ಡಿ ಎರಡು ಚುನಾವಣೆಗಳನ್ನು ಎದುರಿಸಿದ್ದಾರೆ. ಅಕ್ರಮವಾಗಿ ಪಡೆಯಲಾದ ಚಿನ್ನ ಆಗಿರುವ ಕಾರಣ ಅದನ್ನು ಚುನಾವಣಾ ಖರ್ಚಿಗೆ ಬಳಸಿಕೊಂಡಿರುವ ಸಾಧ್ಯತೆ ಇದೆ. ಈ ಬಗ್ಗೆ ಆಲಿಖಾನ್ ಅವರನ್ನು ವಿಚಾರಣೆ ನಡೆಸಿದರೆ ಮಾಹಿತಿ ಸಿಗಬಹುದು. ಹೀಗಾಗಿ, ವಿಚಾರಣೆಗೆ ಹಾಜರಾಗುವಂತೆ ಆಲಿಖಾನ್‌ ಹಾಗೂ ರೆಡ್ಡಿ ಆಪ್ತ ಬ್ರಿಜೇಶ್‌ ರೆಡ್ಡಿಗೆ ನೋಟಿಸ್ ಕೊಟ್ಟಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

ಸಿಗದ ರೆಡ್ಡಿ, ಸುಸ್ತಾದ ಸಿಸಿಬಿ: ಹೈದರಾಬಾದ್‌ನಲ್ಲಿರುವ ರೆಡ್ಡಿ ಅವರ ಆಪ್ತರು ಹಾಗೂ ಸ್ಥಳೀಯ ರಾಜಕೀಯ ಕಾರ್ಯಕರ್ತರ ಮನೆಗಳಲ್ಲಿ ಶೋಧ ನಡೆಸಿದರೂ ಪೊಲೀಸರಿಗೆ ಅವರ ಬಗ್ಗೆ ಸಣ್ಣ ಸುಳಿವೂ ಸಿಕ್ಕಿಲ್ಲ. ‘ಟ್ರಾನ್ಸಿಟ್ ಬೇಲ್‌’ಗೆ ಅರ್ಜಿ ಸಲ್ಲಿಸಿರಬಹುದು ಎಂಬ ಅನುಮಾನದ ಮೇಲೆ ಪೊಲೀಸರು ಬುಧವಾರವೂ ಸ್ಥಳೀಯ ಕೋರ್ಟ್‌ಗಳಲ್ಲಿ ದಾಖಲೆಗಳನ್ನು ತಡಕಾಡಿದ್ದರು.

ಬೆಳಿಗ್ಗೆಯೇ ರೆಡ್ಡಿ ಕೋಟೆಗೆ ಲಗ್ಗೆ!: ಹತ್ತು ಮಂದಿ ಪೊಲೀಸರು ಬೆಳಿಗ್ಗೆ ಆರು ಗಂಟೆಗೇ ಬಳ್ಳಾರಿಯ ರೆಡ್ಡಿ ನಿವಾಸಕ್ಕೆ ಲಗ್ಗೆ ಇಟ್ಟರು. ಮನೆಯ ಗೋಡೆ, ಲಾಕರ್‌, ಅಲ್ಮೇರಾ, ಸ್ನಾನದ ಕೋಣೆ, ಮಹಡಿಯಲ್ಲಿದ್ದ ನೀರಿನ ಟ್ಯಾಂಕ್‌ನಲ್ಲೂ ಶೋಧ ನಡೆಸಿದರು. ಮಹಡಿಯಲ್ಲಿ ನಿಂತು ಇಡೀ ಪರಿಸರದ ವಿಡಿಯೊ ಚಿತ್ರೀಕರಣ ಮಾಡಿಕೊಂಡರು.

ದಾಳಿ ವೇಳೆ ರೆಡ್ಡಿ ಅವರ ಮಾವ ಪರಮೇಶ್ವರ ರೆಡ್ಡಿ, ಅತ್ತೆ ನಾಗಲಕ್ಷ್ಮಮ್ಮ ಹಾಗೂ ಪತ್ನಿ ಅರುಣಾ ಲಕ್ಷ್ಮಿ ಮನೆಯಲ್ಲಿದ್ದರು. ರೆಡ್ಡಿ ಆಪ್ತರಾದ ಶಾಸಕ ಬಿ. ಶ್ರೀರಾಮುಲು, ಆಂಧ್ರಪ್ರದೇಶದ ಮಾಜಿ ಶಾಸಕ ಕಾಪು ರಾಮಚಂದ್ರ ರೆಡ್ಡಿ ಸಹ ಮನೆಗೆ ದೌಡಾಯಿಸಿದರು. ಶೋಧ ನಡೆಯುತ್ತಿದ್ದ ವೇಳೆ ಇಬ್ಬರೂ ಮೌನವಾಗಿ ನಿಂತು ಕಾರ್ಯಾಚರಣೆ ವೀಕ್ಷಿಸುತ್ತಿದ್ದರು.

ಫರೀದ್‌ಗೆ ಡ್ರಿಲ್: ‘ಗುರುವಾರ ಆರು ತಾಸು ವಿಚಾರಣೆ ಎದುರಿಸಿದ ಫರೀದ್, ‘ರೆಡ್ಡಿ ಮಾತ್ರವಲ್ಲದೆ, ಸುದ್ದಿ ವಾಹಿನಿಯೊಂದರ ಸಿಇಒ ಆಗಿದ್ದ ವಿಜಯ್‌ ಟಾಟಾ, ಉದ್ಯಮಿ ಆಸೀಫ್ ಅಲಿ ಸೇರಿದಂತೆ 30ಕ್ಕೂ ಹೆಚ್ಚು ಮಂದಿಗೆ ಹಣ ಕೊಟ್ಟಿದ್ದೇನೆ’ ಎಂದು ಹೇಳಿಕೆ ಕೊಟ್ಟರು. ಕೂಡಲೇ ವಿಜಯ್ ಅವರನ್ನು ಕಚೇರಿಗೆ ಕರೆಸಿದ ಡಿಸಿಪಿ ಗಿರೀಶ್, ಅವರ ಹೇಳಿಕೆಯನ್ನೂ ದಾಖಲಿಸಿಕೊಂಡರು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಮಹಜರು ವಿಡಿಯೊ ಲೀಕ್: ‘ಫರೀದ್ ಅವರನ್ನು ತಾಜ್‌ವೆಸ್ಟೆಂಡ್ ಹೋಟೆಲ್‌ಗೆ ಕರೆದೊಯ್ದು ಮಹಜರು ಮಾಡಿದ ವಿಡಿಯೊವನ್ನು ಯಾರೋ ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಡಿಸಿಪಿಗೆ ಸೂಚನೆ ಕೊಟ್ಟಿದ್ದೇನೆ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅಲೋಕ್‌ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ರೆಡ್ಡಿ ಅತ್ತೆ ರಂಪಾಟ: ಹಬ್ಬದ ದಿನ ಮನೆ ಮೇಲೆ ದಾಳಿ ನಡೆಸಿ, ಎಲ್ಲೆಂದರಲ್ಲಿ ಓಡಾಡುತ್ತ ಶೋಧ ಕಾರ್ಯ ನಡೆಸುತ್ತಿರುವುದನ್ನು ಕಂಡು ರೆಡ್ಡಿ ಅವರ ಅತ್ತೆ ನಾಗಲಕ್ಷ್ಮಮ್ಮ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಪ್ರತಿ ಸಲವೂ ಹಬ್ಬ–ಹರಿದಿನದ ಸಂದರ್ಭದಲ್ಲಿ ಅಥವಾ ಮನೆಯಲ್ಲಿ ಕಾರ್ಯಕ್ರಮವಿದ್ದಾಗ ದಾಳಿ ನಡೆಸುತ್ತೀರಿ. ಬೇಕಾಬಿಟ್ಟಿ ಓಡಾಡಿ ಮನೆ ಹೊಲಸು ಮಾಡುತ್ತೀರಿ. ದೇವರ ಕೋಣೆಯನ್ನೂ ಬಿಡದೆ ಹುಡುಕಾಟ ಮಾಡಿದ್ದೀರಿ. ಈ ಹಿಂದೆಯೂ ಅನೇಕ ಸಲ ದಾಳಿ ಮಾಡಿದ್ದಿರಿ. ಆದರೆ, ಒಮ್ಮೆಯೂ ಏನೂ ಸಿಕ್ಕಿಲ್ಲ. ಹೀಗಿದ್ದರೂ ನೀವು ಚಾಳಿ ಮುಂದುವರಿಸಿದ್ದೀರಲ್ಲ’ ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ನಂತರ ಸ್ಥಳೀಯ ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಸಹಕಾರ ಪಡೆದು, ಕಾರ್ಯಾಚರಣೆ ಮುಂದುವರಿಸಿದರು.

ಬರಹ ಇಷ್ಟವಾಯಿತೆ?

 • 21

  Happy
 • 6

  Amused
 • 2

  Sad
 • 0

  Frustrated
 • 3

  Angry

Comments:

0 comments

Write the first review for this !