ರಮೇಶ ಜಾರಕಿಹೊಳಿ ಪಟ್ಟು: ಕಾಂಗ್ರೆಸ್‌ಗೆ ಇಕ್ಕಟ್ಟು

7
ಸಹೋದರರ ನಡೆ ನಿಗೂಢ; ‘ಕೈ’ ಶಾಸಕರ ಸೆಳೆಯಲು ಬಿಜೆಪಿ ಹೊಂಚು

ರಮೇಶ ಜಾರಕಿಹೊಳಿ ಪಟ್ಟು: ಕಾಂಗ್ರೆಸ್‌ಗೆ ಇಕ್ಕಟ್ಟು

Published:
Updated:

ಬೆಂಗಳೂರು: ‘ಬೇಡಿಕೆಗಳನ್ನು ಈಡೇರಿಸದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ’ ಎಂದು ಜಾರಕಿಹೊಳಿ ಸಹೋದರರು (ಸತೀಶ–ರಮೇಶ) ಪಟ್ಟು ಹಿಡಿದಿರುವುದು ಮೈತ್ರಿ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್‌ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ತಾವು ಹೇಳಿದವರಿಗೆ ಸಚಿವ ಸ್ಥಾನ ನೀಡದಿದ್ದರೆ ಜೊತೆಗಿರುವ 10ಕ್ಕೂ ಹೆಚ್ಚು ಶಾಸಕರ ಜೊತೆ ರಾಜೀನಾಮೆ ನೀಡುವುದಾಗಿ ಜಾರಕಿಹೊಳಿ ಸಹೋದರರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಏತನ್ಮಧ್ಯೆ, ಸಚಿವ ರಮೇಶ ಜಾರಕಿಹೊಳಿ ಅವರು ಬಿಜೆಪಿ ಉಪಾಧ್ಯಕ್ಷ ಶ್ರೀರಾಮುಲು ಅವರನ್ನು ಭೇಟಿಯಾಗಿ ಚರ್ಚಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಸೋಮವಾರದಿಂದ ( ಸೆ.10) ಒಂದು ವಾರ ಕಾಲ ಸ್ಯಾನ್‌ಫ್ರಾನ್ಸಿಸ್ಕೊಗೆ ಹೊರಟಿದ್ದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಪ್ರವಾಸವನ್ನು ದಿಢೀರ್‌ ಮೊಟಕುಗೊಳಿಸಿರುವುದು ವದಂತಿಗಳಿಗೆ ದಾರಿ ಮಾಡಿಕೊಟ್ಟಿದೆ. ಆದರೆ, ವಿದೇಶಾಂಗ ಸಚಿವಾಲಯದಿಂದ ಅನುಮೋದನೆ ಸಿಗದೇ ಇರುವುದರಿಂದ ಪ್ರವಾಸ ರದ್ದಾಗಿದೆ ಎಂದು ಅವರ ಆಪ್ತರು ಹೇಳಿಕೊಂಡಿದ್ದಾರೆ.

ತಮ್ಮ ಜತೆ ಇರುವ ಶಾಸಕರ ಜತೆ ಜಾರಕಿಹೊಳಿ ಸಹೋದರರು ಪಕ್ಷ ಬಿಟ್ಟರೆ, ಇನ್ನೂ 7ರಿಂದ 8 ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸುವ ಬಗ್ಗೆಯೂ ಬಿಜೆಪಿಯಲ್ಲಿ ಗಂಭೀರ ಚರ್ಚೆ ನಡೆದಿದೆ. ಹೀಗೆ ಶಾಸಕರ ರಾಜೀನಾಮೆ ಪರ್ವ ಆರಂಭವಾದರೆ ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿಯಲಿದೆ.

ಶ್ರೀರಾಮುಲು ಭೇಟಿ ನಿಜ: ಮಾಧ್ಯಮ ಪ್ರತಿನಿಧಿಗಳ ಜೊತೆ ಸೋಮವಾರ ಮಾತನಾಡಿದ ರಮೇಶ ಜಾರಕಿಹೊಳಿ, ‘ಶ್ರೀರಾಮುಲು ಎರಡು ಬಾರಿ‌ ನಮ್ಮ‌ ಮನೆಗೆ ಬಂದಿದ್ದರು. ಶಾಸಕ ಎಂ.ಪಿ.ರೇಣುಕಾಚಾರ್ಯ ಕೂಡ ಬಂದಿದ್ದರು. ಹಾಗಂತ ಅವರು ಕಾಂಗ್ರೆಸ್‌ಗೆ ಬರುತ್ತಾರೆ ಎಂದು ಹೇಳುವುದಕ್ಕೆ ಆಗುತ್ತದೆಯೇ’ ಎಂದು ಪ್ರಶ್ನಿಸಿದರು.

‘ಜಾರಕಿಹೊಳಿ ಸಹೋದರರಿಂದ ಈ ಸರ್ಕಾರಕ್ಕೆ‌ ತೊಂದರೆ ಇಲ್ಲ. ನಾನು ಬಿಜೆಪಿಗೆ ಹೋಗುತ್ತೇನೆ ಎಂಬುದೂ ಸುಳ್ಳು. ಈ ಬಗ್ಗೆ ಬಿಜೆಪಿಯ ಯಾವುದೇ ಮುಖಂಡರು ನನ್ನ ಜೊತೆ ಮಾತನಾಡಿಲ್ಲ’ ಎಂದೂ ಅವರು ಹೇಳಿದರು.

ಜಾರಕಿಹೊಳಿ ಜತೆ ಶಾಸಕರಿಲ್ಲ:

‘ಜಾರಕಿಹೊಳಿ ಸಹೋದರರ ಜತೆ 4–5 ಶಾಸಕರಿದ್ದಾರೆ. ಅವರಿಬ್ಬರು ಬಿಟ್ಟು ಹೋದರೂ, ಪಕ್ಷದ ಇತರ ಶಾಸಕರು ಹೋಗುವುದಿಲ್ಲ. ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಬೆದರಿಕೆ ತಂತ್ರ ಬಳಸುತ್ತಿದ್ದಾರೆ. ಅದಕ್ಕೆ ಪಕ್ಷ ಸೊಪ್ಪು ಹಾಕುವುದಿಲ್ಲ’ ಎಂದು ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ಹೇಳಿದರು.

ಬರಹ ಇಷ್ಟವಾಯಿತೆ?

 • 17

  Happy
 • 2

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !