ಜಯಮಾಲಾ ವಿರುದ್ಧ ಅಸಹಕಾರ

7

ಜಯಮಾಲಾ ವಿರುದ್ಧ ಅಸಹಕಾರ

Published:
Updated:

ಬೆಂಗಳೂರು: ಸರ್ಕಾರದ ಬಗ್ಗೆ ವಿರೋಧ ಪಕ್ಷದವರು ಸಣ್ಣ ಟೀಕೆ ಮಾಡಿದರೂ ಗದ್ದಲ ಎಬ್ಬಿಸುತ್ತಿದ್ದ ಕಾಂಗ್ರೆಸ್‌ನ ಹಿರಿಯ ಸದಸ್ಯರು ಮಂಗಳವಾರ ಮೌನಕ್ಕೆ ಶರಣಾಗಿದ್ದರು. ಪ್ರತಿ ವಿಷಯಕ್ಕೂ ಕಾನೂನು ಪಾಠ ಹೇಳುತ್ತಿದ್ದವರು ಹಾಗೂ ಕೂಗಾಡುತ್ತಿದ್ದವರು ಸದನದತ್ತ ತಲೆ ಹಾಕಲಿಲ್ಲ.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಕಂಡ ದೃಶ್ಯವಿದು. ಸಭಾನಾಯಕಿ ಜಯಮಾಲಾ ವಿರುದ್ಧ ಕೈ ಪಾಳಯದ ಹಿರಿಯ ಸದಸ್ಯರು ಅಸಹಕಾರ ಚಳವಳಿ ಆರಂಭಿಸಿದ್ದಾರೆ. ಇದರಿಂದಾಗಿ ಜಯಮಾಲಾ ಏಕಾಂಗಿಯಾಗಿದ್ದಾರೆ. ಈ ಅಸಹಕಾರದಿಂದ ದಿನದ ಕೊನೆಯವರೆಗೂ ಮೌನವಾಗಿಯೇ ಇದ್ದರು.

ಜಯಮಾಲಾ ನೇಮಕ ವಿರೋಧಿಸಿ 15 ದಿನಗಳ ಹಿಂದೆಯೇ ಕಾಂಗ್ರೆಸ್‌ ಸದಸ್ಯರು ಸಹಿ ಸಂಗ್ರಹ ಅಭಿಯಾನ ನಡೆಸಿದ್ದರು. ‘ಅವರನ್ನು ಸಭಾನಾಯಕಿಯನ್ನಾಗಿ ಮಾಡಿದರೆ, ತಾವು ಸದನಕ್ಕೆ ಹಾಜರಾಗುವುದಿಲ್ಲ’ ಎಂದೂ ಒತ್ತಡ ಹೇರಿದ್ದರು. ಆದರೆ, ಇದನ್ನು ವರಿಷ್ಠರು ಕಿವಿಗೆ ಹಾಕಿಕೊಂಡಿರಲಿಲ್ಲ.

‘ಜಯಮಾಲಾ ವಿಧಾನಪರಿಷತ್ತಿಗೆ ಮೊದಲ ಬಾರಿಗೆ ಆಯ್ಕೆಯಾಗಿರುವುದು ಮಾತ್ರವಲ್ಲದೆ, ಸದನದಲ್ಲಿ ಕೆಲಸ ಮಾಡಿದ ಅನುಭವ ಇಲ್ಲ. ಸದನದಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಮತ್ತು ವಿರೋಧ ಪಕ್ಷಗಳಿಗೆ ಉತ್ತರ ನೀಡಲು ಅನುಭವ ಇರಬೇಕು. ಇಲ್ಲವಾದರೆ ಸರ್ಕಾರ ನಗೆಪಾಟಲಿಗೆ ತುತ್ತಾಗಬೇಕಾಗುತ್ತದೆ’ ಎಂಬುದು ‘ಕೈ’ ಸದಸ್ಯರ ವಾದವಾಗಿತ್ತು.

ಮಂಗಳವಾರ ಬೆಳಿಗ್ಗೆ 10.45ಕ್ಕೆ ಕಲಾಪ ಆರಂಭವಾಗುವ ವೇಳೆ ಬೆರಳೆಣಿಕೆಯ ಸದಸ್ಯರು ಇದ್ದರು. ಕಾಂಗ್ರೆಸ್‌ನ 35 ಸದಸ್ಯರ ಪೈಕಿ ಎಂಟು ಮಂದಿಯಷ್ಟೇ ಇದ್ದರು. ಆಡಳಿತ ಪಕ್ಷದ ಸಾಲಿನಲ್ಲಿ 14 ಮಂದಿ ಹಾಗೂ ವಿರೋಧ ಪಕ್ಷದ ಸಾಲಿನಲ್ಲಿ 19 ಸದಸ್ಯರು ಇದ್ದರು. ಸದನದಲ್ಲಿ ಇದ್ದ ಹಿರಿಯ ಸದಸ್ಯರಾದ ಕೆ.ಸಿ.ಕೊಂಡಯ್ಯ, ಎನ್‌.ಎಸ್‌.ಬೋಸರಾಜು ಗಹನ ಚರ್ಚೆಯಲ್ಲಿ ತಲ್ಲೀನರಾಗಿದ್ದರು. ಪ್ರತಿ ವಿಷಯದಲ್ಲೂ ವಿರೋಧ ಪಕ್ಷದ ಸದಸ್ಯರ ಮೇಲೆ ಮುಗಿಬೀಳುತ್ತಿದ್ದ ಐವನ್ ಡಿಸೋಜ ಪ್ರಶ್ನೆ ಕೇಳುವುದಕ್ಕೆ ಸೀಮಿತರಾಗಿದ್ದರು.

1.30 ರ ನಂತರ ಒಬ್ಬೊಬ್ಬರೇ ಸದಸ್ಯರು ಕಲಾಪಕ್ಕೆ ಬರಲಾರಂಭಿಸಿದರು. ವಿರೋಧ ಪಕ್ಷದವರು ಟೀಕೆ ಮಾಡಿದಾಗ ತಮಗೂ ಅದಕ್ಕೂ ಸಂಬಂಧ ಇಲ್ಲ ಎಂಬಂತೆ ವರ್ತಿಸಿದರು. ‘ನಾವು ಜಯಮಾಲಾ ಅವರನ್ನು ಸಭಾನಾಯಕಿಯನ್ನಾಗಿ ಮಾಡಿದ್ದೇವೆ. ನೀವು ತಾರಾ ಅನೂರಾಧಾ ಅವರನ್ನು ವಿರೋಧ ಪಕ್ಷದ ನಾಯಕಿಯನ್ನಾಗಿ ಮಾಡಿ’ ಎಂದು ಕಾಂಗ್ರೆಸ್‌ನ ಕೆ.ಗೋವಿಂದರಾಜ್‌ ಛೇಡಿಸಿದರು. ಬಳಿಕ ಅವರು ಸುಮ್ಮನಾದರು.

ಪ್ರತಿ ವಿಷಯಕ್ಕೂ ಕಾನೂನಿನ ಬಗ್ಗೆ ಮಾತನಾಡುತ್ತಿದ್ದ ವಿ.ಎಸ್‌.ಉಗ್ರಪ್ಪ ಬೆಳಿಗ್ಗೆ ಕಲಾಪಕ್ಕೆ ಬರಲೇ ಇಲ್ಲ. ಉಗ್ರಪ್ಪ ಮಾತಿಗೆ ದನಿಗೂಡಿಸುತ್ತಿದ್ದ ಎಚ್‌.ಎಂ. ರೇವಣ್ಣ ಗೈರಾಗಿದ್ದರು. ಇಬ್ಬರೂ ಭೋಜನದ ಬಳಿಕ ಬಂದು ಮೌನ ಪ್ರೇಕ್ಷಕರಾಗಿದ್ದರು.

ಗದ್ದಲಕ್ಕೆ ಕಾರಣ ಬಿಜೆಪಿ ಪ್ರಸ್ತಾಪ: ಭೋಜನ ವಿರಾಮದ ಬಳಿಕ ಬಿಜೆಪಿಯ ಪ್ರಾಣೇಶ್‌ ಇದೇ ವಿಷಯ ಪ್ರಸ್ತಾಪಿಸಿ, ‘ಜಯಮಾಲಾ ವಿರುದ್ಧ ಸಹಿ ಸಂಗ್ರಹ ಮಾಡಿ ವರಿಷ್ಠರಿಗೆ ಕೊಟ್ಟಿರುವುದರಿಂದ ನಿಮ್ಮಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಬಯಲಾಗಿದೆ’ ಎಂದರು. ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್‌ ಸದಸ್ಯರು ಬಿಜೆಪಿ ಮೇಲೆ ಹರಿಹಾಯ್ದರು. ಕೆಲ ಕಾಲ ಗದ್ದಲಕ್ಕೆ ಕಾರಣವಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಸದಸ್ಯ ಸಿ.ಎಂ.ಇಬ್ರಾಹಿಂ, ‘ಪತ್ರಿಕೆಗಳಲ್ಲಿ ಸಾವಿರ ವಿಚಾರ ಬರುತ್ತೆ, ಅದನ್ನೆಲ್ಲ ಇಲ್ಲಿ ಚರ್ಚೆ ಮಾಡಲು ಆಗುತ್ತದೆಯೆ? ಜಯಮಾಲಾ ಬಗ್ಗೆ ಯಾರಿಗೂ ಅಸಮಾಧಾನವಿಲ್ಲ. ಅವರು ಏಕಾಂಗಿಯೂ ಅಲ್ಲ. ಒಂಟಿ ಸಲಗದಂತೆ ನಾನೂ ಇಲ್ಲಿ ಇಲ್ಲವೇ’ ಎಂದು ಹೇಳಿದಾಗ ವಾತಾವರಣ ತಿಳಿಯಾಯಿತು.

ಹೆಣ್ಣು ಹಾಸ್ಯದ ವಸ್ತು ಅಲ್ಲ: ಗುಡುಗಿದ ತೇಜಸ್ವಿನಿ

‘ಹೆಣ್ಣು ಹಾಸ್ಯದ ವಸ್ತು ಅಲ್ಲ. ಹುಟ್ಟಿದ ತಕ್ಷಣ ಯಾವ ಮಗುವೂ ಓಡುವುದಿಲ್ಲ. ಹುಟ್ಟುತ್ತಲೇ ರಾಜಕಾರಣಿಯೂ ಆಗುವುದಿಲ್ಲ. ಧೈರ್ಯದಿಂದ ಸಭಾನಾಯಕಿಯಾಗಿ ಕೆಲಸ ಮಾಡಿ’ ಎಂದು ಜಯಮಾಲ ಅವರನ್ನು ಬಿಜೆಪಿಯ ತೇಜಸ್ವಿನಿಗೌಡ ಹುರಿದುಂಬಿಸಿದರು.

‘ನಿಮ್ಮ ಕೆಲಸ ಸವಾಲಿನದು. ಸಿಕ್ಕಿರುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ. ಯಾರಿಗೂ ಹೆದರಬೇಕಾಗಿಲ್ಲ. ರಾಜಕೀಯದಲ್ಲಿ ಹೆಣ್ಣು ಅಳಿವಿನಂಚಿನ ಜೀವಿ ಇದ್ದಂತೆ’ ಎಂದು ಅವರು ಹೇಳಿದರು.

 

 

 

 

ಬರಹ ಇಷ್ಟವಾಯಿತೆ?

 • 19

  Happy
 • 2

  Amused
 • 0

  Sad
 • 3

  Frustrated
 • 2

  Angry

Comments:

0 comments

Write the first review for this !