ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ರೈತರ ಸಂಪೂರ್ಣ ಸಾಲಮನ್ನಾಕ್ಕೆ ಬಿಜೆಪಿ ಆಗ್ರಹ
Last Updated 29 ಮೇ 2018, 11:34 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜೆಡಿಎಸ್‌ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ಬಂದ್‌ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಿಜೆಪಿ ಮುಖಂಡರು, ಕಾರ್ಯಕರ್ತರು ನಗರದ ಐ.ಜಿ ರಸ್ತೆ, ಎಂ.ಜಿ ರಸ್ತೆಗಳಲ್ಲಿ ಬೆಳಿಗ್ಗೆಯೇ ಸುತ್ತಾಡಿ ಅಂಗಡಿ, ಹೋಟೆಲ್‌, ಮಳಿಗೆಗಳನ್ನು ತೆರೆಯದಂತೆ ತಾಕೀತು ಮಾಡಿದರು. ಅಷ್ಟೊತ್ತಿಗಾಗಲೇ ತೆರೆದಿದ್ದ ಕೆಲವು ಚಹಾ ಅಂಗಡಿ, ಗೂಡಂಗಡಿಗಳು, ಹೋಟೆಲುಗಳನ್ನು ಅವರು ಮುಚ್ಚಿಸಿದರು.

ನಂತರ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿದರು. ಹನುಮಂತಪ್ಪ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಕಾರ್ಯಕರ್ತರು ತಡೆದರು. ಪೊಲೀಸರು ಸಂಚಾರಕ್ಕ ಅಡ್ಡಿಪಡಿಸದಂತೆ ಕಾರ್ಯಕರ್ತರನ್ನು ನಿಯಂತ್ರಿಸಿದರು. ಮಧ್ಯಾಹ್ನದವರೆಗೂ ಐ.ಜಿ ರಸ್ತೆ, ಎಂ.ಜಿ ರಸ್ತೆಗಳ ಬಹುತೇಕ ಅಂಗಡಿಗಳು ಮುಚ್ಚಿದ್ದವು. ನಗರದೆಲ್ಲೆಡೆ ಜನ ಸಂಚಾರ, ವಾಹನ ಸಂಚಾರ ಎಂದಿನಂತೆ ಇತ್ತು.

ಕೆಎಸ್‌ಆರ್‌ಟಿಸಿ ಬಸ್ಸುಗಳು, ಖಾಸಗಿ ಬಸ್ಸುಗಳು, ವಾಹನಗಳ ಸಂಚಾರ ಎಂದಿನಂತೆ ಇತ್ತು. ಔಷಧ ಅಂಗಡಿಗಳು, ಆಸ್ಪತ್ರೆಗಳು, ಪೆಟ್ರೋಲ್‌ ಬಂಕ್‌ಗಳು, ಶಾಲಾಕಾಲೇಜುಗಳು, ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸಿದವು.

ಮಧ್ಯಾಹ್ನ 12 ಗಂಟೆ ಹೊತ್ತಿಗೆ ಹನುಮಂತಪ್ಪ ವೃತ್ತದಲ್ಲಿ ಕಾರ್ಯಕರ್ತರು, ಮುಖಂಡರು ಜಮಾಯಿಸಿದರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿದರು. ರೈತರ ಸಂಪೂರ್ಣ ಸಾಲಮನ್ನಾ ಮಾಡಿ ಋಣಮುಕ್ತರಾಗಿಸಬೇಕು, ಕುಮಾರಸ್ವಾಮಿ ಅವರು ಕೊಟ್ಟಮಾತಿಗೆ ತಪ್ಪಬಾರದು ಎಂದು ಆಗ್ರಹಿಸಿದರು.

ಕಾರ್ಯಕರ್ತರು ಐದಾರು ಎತ್ತಿನಗಾಡಿಗಳಲ್ಲಿ ಪ್ರತಿಭಟನಾ ಮೆರವಣಿಗೆ ತೆರಳಿದರು. ಎಂ.ಜಿ.ರಸ್ತೆ ಮೂಲಕ ಆಜಾದ್‌ ಪಾರ್ಕ್‌ ವೃತ್ತದವರೆಗೆ ಮೆರವಣಿಗೆ ನಡೆಸಿದರು. ನಂತರ ಮುಖಂಡರು, ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯ ಗೇಟ್‌ ಬಳಿ ಕುಳಿತು ಪ್ರತಿಭಟನೆ ಮಾಡಿದರು.

ಮುಖಂಡರಾದ ಎಚ್‌.ಡಿ.ತಮ್ಮಯ್ಯ, ಕೋಟೆ ರಂಗನಾಥ್‌, ಕಲ್ಮುರಡಪ್ಪ, ಪುಷ್ಪರಾಜ್‌, ಬಿ.ಜಿ.ಸೋಮಶೇಖರಪ್ಪ, ಈ.ಆರ್‌.ಮಹೇಶ್‌, ರಾಜಶೇಖರ್‌, ಪ್ರೇಮ್‌ಕುಮಾರ್‌ ಇದ್ದರು.

ಅಪಘಾತದಲ್ಲಿ ನಿಧನರಾದ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಮೌನ ಆಚರಿಸಲಾಯಿತು.

ಮಾತಿಗೆ ತಪ್ಪಬೇಡಿ: ರವಿ

ಅಧಿಕಾರಕ್ಕೇರಿದ 24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಜೆಡಿಎಸ್‌ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಸಾಲಮನ್ನಾ ಮಾಡಬೇಕು ಎಂದು ಶಾಸಕ ಸಿ.ಟಿ.ರವಿ ಆಗ್ರಹಿಸಿದರು.

ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಅವರು, ‘ಅಧಿಕಾರಕ್ಕೇರಿದ ಮೊದಲ ದಿನವೇ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತಿನ ವರಸೆ ಬದಲಾಗಿದ್ದರಿಂದ, ರೈತರಿಗೆ ಮೋಸ ಆಗಬಾರದು ಎಂದು ರೈತರ ಬೆಂಬಲಕ್ಕೆ ಬಿಜೆಪಿ ನಿಂತಿದೆ. ರೈತರ ಸಾಲ ಮನ್ನಾ ಮಾಡುವುದನ್ನು ಮೆರೆಯಬಾರದು’ ಎಂದು ಹೇಳಿದರು.

‘ರೈತರು ಸಹಕಾರು ಬ್ಯಾಂಕುಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ಲೇವಾದೇವಿ ಸಂಸ್ಥೆಗಳಲ್ಲಿ ಪಡೆದಿರುವ ಸಾಲಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿದಂತೆ, ಅದನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿದರು.

‘ನಿಮ್ಮ ಮಾತಿನ ವರಸೆ ಬದಲಾಗಿರುವುದು ಅನುಮಾನಕ್ಕೆ ಎಡೆಮಾಡಿದೆ. ಮೈತ್ರಿ ಪಕ್ಷದ ಮನವೊಲಿಸಿ, ಅನುದಾನ ಜೋಡಿಸಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಮುಂದಾಗಬೇಕು. ವೃದ್ಧರು, ಅಂಗವಿಕಲರ ಮಾಸಾಶನ ಹೆಚ್ಚಳ, ಗರ್ಭಿಣಿಯರು– ಬಾಣಂತಿಯರಿಗೆ ಆರು ತಿಂಗಳು ₹ 6 ಸಾವಿರ ನೆರವು, ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮೊದಲಾದ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಬಜೆಟ್‌ನಲ್ಲಿ ಘೋಷಿಸಬೇಕು’ ಎಂದು ಒತ್ತಾಯಿಸಿದರು.

ಮಾತಿಗೆ ತಪ್ಪದಂತೆ ಎಚ್ಚರಿಸಲು ಹೋರಾಟ ಮಾಡುತ್ತಿದ್ದೇವೆ. ಜೆಡಿಎಸ್‌ ಬಹುಮತ ಬರದಿದ್ದರೆ ಯಾರ ಜತೆ ಕೈಜೋಡಿಸುವುದಿಲ್ಲ ಎಂದು ಹೇಳಿ ಈಗ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ. ಅಧಿಕಾರದಲ್ಲಿರುವವರು ಮೈಮರೆಯಬಾರದು ಎಂದರು.

ರೈತರ ತಾಳ್ಮೆಯನ್ನು ಪರೀಕ್ಷಿಸುವ, ಕೆಣಕುವ ತಂತ್ರ ಮಾಡಬಾರದು. ಶೀಘ್ರದಲ್ಲಿ ಸಾಲ ಮನ್ನಾ ಮಾಡಬೇಕು. ಮಾಡದಿದ್ದರೆ ಅನ್ನದಾತರ ತೀವ್ರ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

**
ಜನನಾಯಕರಿಗೆ ಎರಡು ನಾಲಿಗೆ ಇರಬಾರದು. ಅಧಿಕಾರಕ್ಕೆ ಏರುವುದಕ್ಕೆ ಮುಂಚೆ ಒಂದು ರೀತಿ, ಏರಿದ ನಂತರ ಮತ್ತೊಂದು ರೀತಿ ಮಾತನಾಡಬಾರದು
– ಸಿ.ಟಿ.ರವಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT