ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ–ಸಂಸ್ಕೃತಿ ಎನ್ನುವವರು ಪೌರಕಾರ್ಮಿಕರನ್ನು ನೋಡಲಿ: ಜಯಂತ್‌ ಕಾಯ್ಕಿಣಿ

‘ಸ್ನೇಹ ಶೃಂಗ’ ಕಾರ್ಯಕ್ರಮದಲ್ಲಿ ಕವಿ ಜಯಂತ್‌ ಕಾಯ್ಕಿಣಿ
Last Updated 20 ಅಕ್ಟೋಬರ್ 2019, 16:14 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಪೌರಕಾರ್ಮಿಕರು ಈಗಲೂ ಚರಂಡಿಯಲ್ಲಿ ಇಳಿದು, ಹೇಸಿಗೆ ಬಳಿದು ಭಗ್ನ ವಿಗ್ರಹದಂತೆ ಮೇಲೆದ್ದು ಬರುತ್ತಾರೆ. ಧರ್ಮ–ಸಂಸ್ಕೃತಿ ಎನ್ನುವವರು ಅಂತಹ ಪೌರಕಾರ್ಮಿಕರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬೇಕು’ ಎಂದು ಕವಿ ಜಯಂತ್‌ ಕಾಯ್ಕಿಣಿ ಹೇಳಿದರು.

ನಗರದಲ್ಲಿ ಭಾನುವಾರ ‘ಸ್ನೇಹ ಶೃಂಗ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮಗೆಲ್ಲ ಎರಡು ಹೊತ್ತಿನ ಊಟ ಇದೆ. ರಜೆ, ಪಾರ್ಟಿ ಎಲ್ಲವೂ ಸಿಗುತ್ತದೆ. ಈ ಸೌಲಭ್ಯಗಳ ನಡುವೆ ಕುಳಿತು ಸಂಸ್ಕೃತಿ–ಧರ್ಮ ಎಂದು ಮಾತನಾಡುತ್ತೇವೆ. ಆದರೆ, ಮಾನವೀಯತೆಯನ್ನು ಮರೆತಿದ್ದೇವೆ’ ಎಂದರು.

‘ನಾನೊಂದು ಸಾಕ್ಷ್ಯಚಿತ್ರ ನೋಡುತ್ತಿದ್ದೆ. ಅದರಲ್ಲಿ ಗಂಡಸರು ಶಹರಕ್ಕೆ ಹೋಗಿ ಕೂಲಿ ಕೆಲಸ ಮಾಡುತ್ತಿದ್ದರೆ, ಮಹಿಳೆಯರು ಮಲ ಹೊರುವ ಕೆಲಸ ಮಾಡುತ್ತಿರುತ್ತಾರೆ. ಪತ್ರಕರ್ತೆಯೊಬ್ಬರು, ಈ ಕಾಲದಲ್ಲಿಯೂ ಮಲ ಹೊರುವ ಕೆಲಸ ಮಾಡುತ್ತೀರಲ್ಲ. ಈ ಕೆಟ್ಟ ಪದ್ಧತಿ ನಿಮಗೆ ಹೇಸಿಗೆ ಎನಿಸುವುದಿಲ್ಲವೇ ಎಂದು ಮಹಿಳೆಯರನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಆ ಮಹಿಳೆಯರು, ನಾವು ನಮ್ಮ ಮಕ್ಕಳದ್ದು ತೆಗೆಯುವುದಿಲ್ಲವೇ.. ಇದನ್ನೂ ಹಾಗೆಯೇ ತೆಗೆದುಬಿಡುತ್ತೇವೆ ಎನ್ನುತ್ತಾರೆ. ದೈನ್ಯವನ್ನು ದಿವ್ಯಕ್ಕೆ ಏರಿಸುವ ತಾಯ್ತನ ಅದು’ ಎಂದು ಕಾಯ್ಕಿಣಿ ಹೇಳಿದರು.

‘ಹಾಲಿನ ಪೌಡರ್‌ಗೆ ನೀರು ಬೆರೆಸಿದರೆ ಮಾತ್ರ ಅದು ಹಾಲಾಗುತ್ತದೆ. ಜೀವನದ ಹಾಲಿನ ಪೌಡರ್‌ಗೆ ಮಾನವೀಯತೆ ಎಂಬ ನೀರು ಬೆರೆಸುವ ಅಗತ್ಯವಿದೆ’ ಎಂದರು.

ಸಿನಿಮಾ ಹಾಡುಗಳನ್ನು ನಾನೂ ಗೇಲಿ ಮಾಡುತ್ತಿದ್ದೆ: ‘ಸಿನಿಮಾ ಹಾಡು ಬರೆಯುವವರನ್ನು ನಾನೂ ಗೇಲಿ ಮಾಡುತ್ತಿದ್ದೆ. ಸಿನಿ ಸಾಹಿತಿಗಳನ್ನು ಉಡಾಫೆಯಿಂದ ನೋಡುತ್ತಿದ್ದೆ. ಆದರೆ, ಚಲನಚಿತ್ರಗಳಿಗೆ ನಾನೇ ಹಾಡು ಬರೆಯಲು ಆರಂಭಿಸಿದ ಮೇಲೆ ಅದು ಎಷ್ಟು ಕಷ್ಟಕರ ಕೌಶಲ ಎಂಬುದು ತಿಳಿಯಿತು’ ಎಂದು ಕಾಯ್ಕಿಣಿ ಹೇಳಿದರು.

‘ಸಂದರ್ಭ, ಸಂಗೀತಕ್ಕೆ ತಕ್ಕಂತೆ ಸಾಹಿತ್ಯ ಬರೆಯಬೇಕು. ನಾವು ಬೆಳದಿಂಗಳಲ್ಲಿ ನಿನ್ನ ನೋಡುತ್ತಾ ಎಂದು ಬರೆದಾಗ ಅದನ್ನು ಮಧ್ಯಾಹ್ನ ಮೆಜೆಸ್ಟಿಕ್‌ನಲ್ಲಿ ಚಿತ್ರೀಕರಿಸಿದರೆ ಅಭಾಸವಾಗುತ್ತದೆ. ಇಂಥವನ್ನೆಲ್ಲ ಗಮನದಲ್ಲಿಡಬೇಕು’ ಎಂದರು.

‘ನಮ್ಮ ಇಡೀ ದೇಶವನ್ನು ಭಾವನಾತ್ಮಕವಾಗಿ ಬಂಧಿಸಿದ್ದರೆ ಅದು ಸಿನಿಮಾ ಹಾಡುಗಳೇ ವಿನಾ ಯಾವುದೇ ರಾಜಕಾರಣವಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT