ಮಂಗಳವಾರ, ಅಕ್ಟೋಬರ್ 15, 2019
29 °C

‘ಸೌಲಭ್ಯ ಪಡೆಯಲು ಸಂತ್ರಸ್ತರೇ ಬರುತ್ತಿಲ್ಲ’

Published:
Updated:
ಜೆ.ಸಿ.ಮಾಧುಸ್ವಾಮಿ

ತುಮಕೂರು: ‘ನೆರೆ ಸಂತ್ರಸ್ತರ ಸಂಕಷ್ಟಗಳ ನಿವಾರಣೆಗಾಗಿ ರಾಜ್ಯ ಸರ್ಕಾರ ಪುನರ್ವಸತಿ ಸೌಲಭ್ಯ ಕಲ್ಪಿಸಿದೆ. ಅವುಗಳನ್ನು ಪಡೆಯಲು ನಿರಾಶ್ರಿತರೇ ಮುಂದೆ ಬರುತ್ತಿಲ್ಲ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿರಾಶ್ರಿತರಿಗೆ ಅಂದಾಜು 90,000 ಮನೆಗಳ ಅಗತ್ಯ ಇದೆ. ಅವುಗಳನ್ನು ಕಟ್ಟಿಕೊಡಲು ರಾಜ್ಯ ಸರ್ಕಾರವೂ ಸಿದ್ಧವಿದೆ. ಆದರೆ, ಈವರೆಗೂ ಮನೆಗಾಗಿ ಕೇವಲ 9,000 ಅರ್ಜಿಗಳು ಬಂದಿವೆ’ ಎಂದು ಹೇಳಿದರು.

‘ಜೀವನ ನಿರ್ವಹಣೆಗಾಗಿ ತಾತ್ಕಾಲಿಕ ಪರಿಹಾರವಾಗಿ ₹ 10,000 ವನ್ನು ಪ್ರತಿ ಕುಟುಂಬಕ್ಕೆ ನೀಡಿದ್ದೇವೆ. ಬಾಡಿಗೆ ಮನೆ ಮಾಡಿಕೊಂಡಿರಲು ವ್ಯವಸ್ಥೆ ಮಾಡಿದ್ದೇನೆ. ಹೊಸ ಮನೆಗಳನ್ನು ಕಟ್ಟಿಕೊಡಲು ಅರ್ಜಿ ಆಹ್ವಾನಿಸಿದ್ದೇವೆ’ ಎಂದರು.

‘ಬೆಟ್ಟಗಳು ಕುಸಿದಿರುವ ಕಡೆ ತೋಟಗಳ ಮಾಲೀಕರಿಗೆ ಪರಿಹಾರ ಕಲ್ಪಿಸಲು ದೊಡ್ಡ ಮೊತ್ತ ಅಗತ್ಯವಿದೆ. ಅದಕ್ಕಾಗಿ ಕೇಂದ್ರದ ನೆರವನ್ನು ಈವರೆಗೆ ಎದುರು ನೋಡುತ್ತಿದ್ದೆವು. ಇದನ್ನೇ ದೊಡ್ಡದು ಮಾಡಿ, ರಾಜ್ಯ ಸರ್ಕಾರ ಕೈಗೊಂಡ ಪರಿಹಾರ ಕಾರ್ಯಗಳನ್ನು ಪ್ರತಿಪಕ್ಷಗಳು ಮರೆಮಾಚುತ್ತಿವೆ’ ಎಂದು ದೂರಿದರು.

* ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಆದರೆ ಇಂತಹ ವಿಷಯದಲ್ಲಿಯೂ ರಾಜಕೀಯ ಮಾಡುವವರಿಗೆ ಇವು ಕಾಣುತ್ತಿಲ್ಲ

- ಜೆ.ಸಿ.ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

Post Comments (+)