ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತರ ಮನವೊಲಿಸಲು ಜೆಡಿಎಸ್‌ ಹರಸಾಹಸ

Last Updated 22 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ಮಂಡ್ಯ: ಮೈತ್ರಿಗೆ ಸಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ತೆರೆಮರೆಯಲ್ಲಿ ಬೆಂಬಲ ನೀಡುತ್ತಿರುವ ಕಾಂಗ್ರೆಸ್‌ ಮುಖಂಡರನ್ನು ಸೆಳೆಯಲು ಜೆಡಿಎಸ್‌ ಮುಖಂಡರು ಹರಸಾಹಸ ಮಾಡುತ್ತಿದ್ದಾರೆ. ಸರಣಿ ಸಭೆ, ಜಂಟಿ ಪತ್ರಿಕಾಗೋಷ್ಠಿ ನಡೆಸಿ ಎರಡೂ ಪಕ್ಷದ ಮುಖಂಡರು ಒಟ್ಟಾಗಿದ್ದೇವೆಎಂಬ ಸಂದೇಶ ರವಾನಿಸುವಲ್ಲಿ ತೊಡಗಿದ್ದಾರೆ.

ಮಾರ್ಚ್‌ 20ರಂದು ನಡೆದ ಸುಮಲತಾ ಸಮಾವೇಶದಲ್ಲಿ ಕಾಂಗ್ರೆಸ್‌ ಮುಖಂಡರಾದ ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ ಬೆಂಬಲಿಗರು ಪಾಲ್ಗೊಂಡಿದ್ದರು. ಇದರಿಂದ ಆತಂಕಕ್ಕೆ ಒಳಗಾಗಿರುವ ಜೆಡಿಎಸ್‌ ಮುಖಂಡರು, ಕಾಂಗ್ರೆಸ್ ಮುಖಂಡರನ್ನು ಮನವೊಲಿಸಲು ಯತ್ನಿಸುತ್ತಿದ್ದಾರೆ.

ಕೆಲ ಕಾಂಗ್ರೆಸ್‌ ಮುಖಂಡರ ಜೊತೆ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ‘ಮೈತ್ರಿ ಪಕ್ಷಗಳ ಮುಖಂಡರು ಒಗ್ಗಟ್ಟಾಗಿದ್ದೇವೆ. ಚಲುವರಾಯಸ್ವಾಮಿ ಅವರನ್ನು ನಿಖಿಲ್‌ ಕುಮಾರಸ್ವಾಮಿ ಭೇಟಿ ಮಾಡಿ ಬೆಂಬಲ ಕೋರುತ್ತಾರೆ. ಮಾರ್ಚ್‌ 25ರಂದು ನಾಮಪತ್ರ ಸಲ್ಲಿಕೆ ದಿನ ಕಾಂಗ್ರೆಸ್‌ನ ರಾಜ್ಯ, ಜಿಲ್ಲಾ ಮಟ್ಟದ ಮುಖಂಡರು ಭಾಗವಹಿಸುತ್ತಾರೆ. ಸುಮಲತಾ ಸಮಾವೇಶದಲ್ಲಿ ಕಾಂಗ್ರೆಸ್‌ ಮುಖಂಡರು ಭಾಗವಹಿಸಿದ್ದ ಬಗ್ಗೆ ಹೈಕಮಾಂಡ್‌ ಗಮನಕ್ಕೆ ತರಲಾಗಿದೆ’ ಎಂದರು.

‘ಚಿತ್ರನಟರಾದ ದರ್ಶನ್‌, ಯಶ್‌ ಬಗ್ಗೆ ಮಾತನಾಡದಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ನಾವು ರಾಜ್ಯ ಸರ್ಕಾರದ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಮಾರ್ಚ್‌ 25ರಂದು ನಡೆಯುವ ಜೆಡಿಎಸ್‌ ಸಮಾವೇಶದಲ್ಲಿ 2 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.

ಅಂಬರೀಷ್‌ ಆಪ್ತರಾಗಿದ್ದ ಕಾಂಗ್ರೆಸ್‌ ಮುಖಂಡ ಅಮರಾವತಿ ಚಂದ್ರಶೇಖರ್‌ ಮಾತನಾಡಿ, ‘ಪಕ್ಷದ ಮುಖಂಡರು ಸೂಚನೆ ನೀಡಿದಂತೆ ನಾನುನಿಖಿಲ್‌ ಗೆಲುವಿಗಾಗಿ ದುಡಿಯುತ್ತೇನೆ. ಸುಮಲತಾ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರೆ, ಅವರ ಪರ ಕೆಲಸ ಮಾಡುತ್ತಿದ್ದೆ. ಆದರೆ, ಹಾಗಾಗಿಲ್ಲ, ಪಕ್ಷದ ಮುಖಂಡರ ಸೂಚನೆಯಂತೆ ನಡೆದುಕೊಳ್ಳುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT